ದೇಶ

ತಮಿಳುನಾಡಿನ ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ; ವೆಟ್ರಿ ಪಯಣಂ ಯೋಜನೆಗೆ ಸಿಎಂ ವಿಜಯ್ ಚಾಲನೆ | CM Vijay

ತಮಿಳುನಾಡಿನ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅನುವು ಮಾಡಿಕೊಡುವ ಮತ್ತು ತಮ್ಮ ಚುನಾವಣಾ ಭರವಸೆಗಳಲ್ಲಿ ಒಂದಾಗಿದ್ದ ವೆಟ್ರಿ ಪಯಣಂ ಯೋಜನೆಗೆ ಶುಕ್ರವಾರ(ಅ. 02) ಸಿಎಂ ವಿಜಯ್ ಚಾಲನೆ ನೀಡಿದ್ದಾರೆ.

ಚೆನ್ನೈ: ತಮಿಳುನಾಡಿನ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅನುವು ಮಾಡಿಕೊಡುವ ಮತ್ತು ತಮ್ಮ ಚುನಾವಣಾ ಭರವಸೆಗಳಲ್ಲಿ ಒಂದಾಗಿದ್ದ ವೆಟ್ರಿ ಪಯಣಂ ಯೋಜನೆಗೆ ಶುಕ್ರವಾರ(ಅ. 02) ಸಿಎಂ ವಿಜಯ್ ಚಾಲನೆ ನೀಡಿದ್ದಾರೆ.

ಕೊಯಂಬೇಡು ಬಸ್ ಟರ್ಮಿನಸ್‌ನಲ್ಲಿ ಬಸ್‌ಗಳ ಒಳಗೆ ತೆರಳಿ ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್‌ಗಳನ್ನು ವಿತರಿಸುವ ಮೂಲಕ ವಿಜಯ್ ಯೋಜನೆಗೆ ಚಾಲನೆ ನೀಡಿದ್ದಾರೆ. ಪ್ರತಿದಿನ ಸುಮಾರು 84.32 ಲಕ್ಷ ಮಹಿಳೆಯರು ಪ್ರಯೋಜನವನ್ನು ಪಡೆಯುವ ನಿರೀಕ್ಷೆಯಿದೆ.

ರಾಜ್ಯದ ಏಳು ರಾಜ್ಯ ಸಾರಿಗೆ ಸಂಸ್ಥೆಗಳು ನಿರ್ವಹಿಸುವ ಒಟ್ಟು 12,692 ಸರ್ಕಾರಿ ಬಸ್‌ಗಳಲ್ಲಿ ಈ ಸೌಲಭ್ಯ ಸಿಗಲಿದೆ. ಮತ್ತು ಯೋಜನೆಯ ಅನುಷ್ಠಾನಕ್ಕೆ ವಾರ್ಷಿಕ ಸುಮಾರು 6,000 ಕೋಟಿ ರೂಪಾಯಿ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ.

ಇನ್ನೂ ಹಿಂದಿನ ಡಿಎಂಕೆ ಸರ್ಕಾರ ಪ್ರಾರಂಭಿಸಿದ ಮಹಿಳಾ ಉಚಿತ ಬಸ್ ಪ್ರಯಾಣ ಯೋಜನೆಯೂ ನಗರ ವ್ಯಾಪ್ತಿ ಮತ್ತು ಕೆಲಸಕ್ಕೆ ತೆರಳು ಮಹಿಳೆಯರಿಗೆ ಸೀಮಿತವಾಗಿತ್ತು. ಆದರೆ ಈಗ ಎಕ್ಸ್​ಪ್ರೆಸ್, ಸೀಮಿತ ನಿಲುಗಡೆ, ಡಿಲಕ್ಸ್ ಬಸ್‌ಗಳಿಗೂ ಈ ಯೋಜನೆ ವಿಸ್ತರಿಸಲಾಗಿದೆ. ಮತ್ತು ಸಾಮಾನ್ಯ ನಗರ, ಪಟ್ಟಣ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಸೇರಿದಂತೆ ರಾಜ್ಯದ ಎಲ್ಲಾ ಕಡೆ ಈ ಯೋಜನೆ ಜಾರಿಗೆ ಬರಲಿದೆ (ಏಜೆನ್ಸೀಸ್).