ಬಂಧಿತ ಆರೋಪಿಗಳು 
ದೇಶ

ಏರ್​ ಇಂಡಿಯಾದಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ; ನಕಲಿ ಕಾಲ್ ಸೆಂಟರ್ ಬೇಧಿಸಿದ ಪೊಲೀಸರು: ಮೂವರ ಬಂಧನ | fake call center

ನವದೆಹಲಿ: ವಿಮಾನಯಾನ ಸಂಸ್ಥೆ ಏರ್ ಇಂಡಿಯಾದಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ಉದ್ಯೋಗಾಕಾಂಕ್ಷಿಗಳನ್ನು ವಂಚಿಸುತ್ತಿದ್ದ ನಕಲಿ ಕಾಲ್ ಸೆಂಟರ್​ವೊಂದನ್ನು(fake call center) ದೆಹಲಿಯ ಪೂರ್ವ ಜಿಲ್ಲೆಯ ಸೈಬರ್ ಪೊಲೀಸರು ಭೇದಿಸಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಏರ್ ಇಂಡಿಯಾದಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ವಂಚಿಸಲಾಗಿದೆ ಎಂದು ಆರೋಪಿಸಿ ಛತ್ತೀಸ್‌ಗಢದ ವ್ಯಕ್ತಿಯೊಬ್ಬರು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ ಅನ್ನು ಸಂಪರ್ಕಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಛತ್ತೀಸ್​ಗಡದ ವ್ಯಕ್ತಿಗೆ ಏರ್ ಇಂಡಿಯಾದ ಹೆಚ್​ಆರ್ ವಿಭಾಗದ ಪ್ರತಿನಿಧಿಯೆಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಕರೆ ಮಾಡಿ, 14,000 ರೂಪಾಯಿಗೆ ಉದ್ಯೋಗದ ಆಫರ್ ನೀಡಿದ್ದರು. ಆ ಆಫರ್ ನಿಜವೆಂದು ನಂಬಿ ಯುಪಿಐ ಮೂಲಕ 14,500 ರೂಪಾಯಿಗಳನ್ನು ಪಾವತಿಸಿದ್ದರು. ಬಳಿಕ ಅದು ವಂಚನೆ ಎಂದು ತಿಳಿದ ಬಳಿಕ ಸೈಬರ್ ಸೆಲ್​ ಕದ ತಟ್ಟಿದ್ದರು ಎನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಹಣ ವರ್ಗಾವಣೆಯಾದ ಖಾತೆಯನ್ನು ಪತ್ತೆ ಹಚ್ಚಿ, ಅದು ದೆಹಲಿಯ ವಜೀರಾಬಾದ್ ನಿವಾಸಿ 30 ವರ್ಷದ ಮೊಹಮ್ಮದ್ ಝೈದ್‌ಗೆ ಸೇರಿದ್ದೆಂದು ಕಂಡುಕೊಂಡ ಬಳಿಕ ಲಕ್ಷ್ಮಿ ನಗರದಿಂದ ಆತನನ್ನು ಬಂಧಿಸಿದ್ದಾರೆ. ಬಳಿಕ ಆತನೊಂದಿಗೆ ಇಬ್ಬರು ಮಹಿಳೆಯರು ಇರುವುದನ್ನು ಪತ್ತೆ ಅವರನ್ನು ಬಂಧಿಸಿದ್ದಾರೆ.
ಆರೋಪಿಗಳು ಕಳೆದ ಕೆಲವು ತಿಂಗಳುಗಳಿಂದ ಲಕ್ಷ್ಮಿ ನಗರದಲ್ಲಿ ಕಾಲ್ ಸೆಂಟರ್ ನಡೆಸುತ್ತಿದ್ದರು ಎಂದು ತಿಳಿದು ಬಂದಿದ್ದು, ಉದ್ಯೋಗಾಕಾಂಕ್ಷಿಗಳನ್ನು ಸಂಪರ್ಕಿಸಲು ಹಲವು ಮೊಬೈಲ್ ಸಂಖ್ಯೆಗಳನ್ನು ಬಳಸುತ್ತಿದ್ದರು ಎನ್ನಲಾಗಿದೆ. ಏರ್ ಇಂಡಿಯಾದ ಹೆಚ್​ಆರ್​ ವಿಭಾಗದ ಪ್ರತಿನಿಧಿಗಳಂತೆ ನಟಿಸಿ ವಂಚಿಸುತ್ತಿದ್ದರು ಎನ್ನಲಾಗಿದೆ (ಏಜೆನ್ಸೀಸ್).