ಬಿಹಾರದಲ್ಲಿ ಒಂದೇ ಮೋಟಾರ್‌ಸೈಕಲ್ ಮೇಲೆ ನಾಲ್ವರು ಪೊಲೀಸರು ಹೆಲ್ಮೆಟ್ ಧರಿಸದೆ ಸವಾರಿ ಮಾಡುತ್ತಿರುವ ದೃಶ್ಯ 
ದೇಶ

ನಿಯಮ ಮೀರಿದ ಕಾನೂನು ಪಾಲಕರು! ಒಂದೇ ಬೈಕ್​ನಲ್ಲಿ ನಾಲ್ವರು ಪೊಲೀಸರ ಸವಾರಿ; ವೈರಲ್​ ವಿಡಿಯೋಗೆ ನೆಟ್ಟಿಗರ ಕಿಡಿ! Police Viral Video

ಸಂಚಾರ ನಿಯಮ ಪಾಲಿಸಬೇಕಾದ ಖಾಕಿಧಾರಿಗಳೇ ರೂಲ್ಸ್ ಬ್ರೇಕ್ ಮಾಡಿದ್ದಾರೆ! ಬಿಹಾರದಲ್ಲಿ ಒಂದೇ ಬೈಕ್‌ನಲ್ಲಿ ನಾಲ್ವರು ಪೊಲೀಸರು ಹೆಲ್ಮೆಟ್ ಇಲ್ಲದೆ ಸವಾರಿ ಮಾಡುತ್ತಿರುವ ವೈರಲ್ ವಿಡಿಯೋ ಇಲ್ಲಿದೆ ನೋಡಿ.

ಬಿಹಾರ: ಬಿಹಾರ ರಾಜ್ಯವು ಯಾವಾಗಲೂ ಒಂದಲ್ಲ ಒಂದು ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವೇದಿಕೆಯಾಗಿ ಮಾರ್ಪಡುತ್ತದೆ. ಕೆಲವೊಮ್ಮೆ ಅಲ್ಲಿನ ವಿಚಿತ್ರ ಕಳ್ಳತನದ ಸುದ್ದಿಗಳು ವೈರಲ್​ ಆದರೆ, ಇನ್ನು ಕೆಲವೊಮ್ಮೆ ಅಲ್ಲಿಯ ರಾಜಕೀಯ ನಾಯಕರ ಹೇಳಿಕೆ ಸೋಷಿಯಲ್​ ಮೀಡಿಯಾನ ಸೆನ್​ಶೆಷನ್​ ಆಗಿ ಪರಿವರ್ತವಾಗುತ್ತದೆ. ಆದರೆ, ಈಗ ಬಿಹಾರ ಪೊಲೀಸರಿಗೆ ಸಂಬಂಧಿಸಿದ ವಿಡಿಯೋವೊಂದು ಸಮಾಜಿಕ ಜಾಲತಾಣಗಳಲ್ಲಿ ಸಕ್ಕತ್​ ವೈರಲ್​ ಆಗುತ್ತಿದ್ದು, ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಒಂದೇ ಬೈಕ್‌ನಲ್ಲಿ ನಾಲ್ವರು ಖಾಕಿಗಳು!

ಸಂಚಾರ ನಿಯಮಗಳನ್ನು ಜನಸಾಮಾನ್ಯರಿಗೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಪಾಠ ಮಾಡಬೇಕಾದ ರಕ್ಷಕರೇ, ಸ್ವತಃ ಆ ನಿಯಮಗಳನ್ನು ಗಾಳಿಗೆ ತೂರಿದರೆ ಹೇಗಿರುತ್ತದೆ? ವೈರಲ್ ಆಗಿರುವ ಈ ವಿಡಿಯೋದಲ್ಲಿ ಅಂತಹದ್ದೇ ದೃಶ್ಯವೊಂದು ಸೆರೆಯಾಗಿದೆ.

ರಸ್ತೆಯಲ್ಲಿ ತೆರಳುತ್ತಿದ್ದ ಒಂದೇ ಒಂದು ಮೋಟಾರ್‌ಸೈಕಲ್ ಮೇಲೆ ಬರೋಬ್ಬರಿ ನಾಲ್ವರು ಪೊಲೀಸ್ ಸಿಬ್ಬಂದಿ ಕುಳಿತು ಸವಾರಿ ಮಾಡುತ್ತಿದ್ದಾರೆ. ಜೊತೆಗೆ, ಬೈಕ್ ಚಲಾಯಿಸುತ್ತಿರುವವರನ್ನು ಬಿಟ್ಟು ಹಿಂಬದಿಯಲ್ಲಿ ಕುಳಿತಿರುವ ಮೂವರು ಪೊಲೀಸರು ಹೆಲ್ಮೆಟ್ ಕೂಡ ಧರಿಸಿಲ್ಲ. ರಸ್ತೆಯಲ್ಲಿ ಇವರ ಹಿಂದೆ ಬರುತ್ತಿದ್ದ ಬೇರೆ ವಾಹನ ಸವಾರರೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ನಿಯಮಗಳು ಕೇವಲ ಸಾಮಾನ್ಯ ಜನರಿಗಷ್ಟೇ ಅನ್ವಯವೇ?

ನಮ್ಮ ದೇಶದ ಸಂಚಾರ ನಿಯಮಗಳ ಪ್ರಕಾರ, ದ್ವಿಚಕ್ರ ವಾಹನದಲ್ಲಿ ಗರಿಷ್ಠ ಇಬ್ಬರು ಮಾತ್ರ ಪ್ರಯಾಣಿಸಲು ಅವಕಾಶವಿದೆ. ಇದರೊಂದಿಗೆ ಸವಾರ ಹಾಗೂ ಹಿಂದೆ ಕುಳಿತುಕೊಳ್ಳುವವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಸಾಮಾನ್ಯ ಜನರು ಟ್ರಿಪಲ್ ರೈಡಿಂಗ್ ಮಾಡಿದರೆ ಅಥವಾ ಹೆಲ್ಮೆಟ್ ಹಾಕದಿದ್ದರೆ ಸಾಕು, ಸಂಚಾರ ಪೊಲೀಸರು ತಕ್ಷಣವೇ ದೊಡ್ಡ ಮೊತ್ತದ ದಂಡ ವಿಧಿಸುತ್ತಾರೆ.

ಆದರೆ, ಕಾನೂನು ರಕ್ಷಿಸಬೇಕಾದ ಖಾಕಿ ಧರಿಸಿದವರೇ ಈ ರೀತಿ ನಾಲ್ಕು ಜನ ಒಂದೇ ಬೈಕ್‌ನಲ್ಲಿ ಪ್ರಯಾಣ ಮಾಡುವುದನ್ನು ನೋಡಿದ ಜನರು, ಪೊಲೀಸರಿಗೆ ಮಾತ್ರ ಪ್ರತ್ಯೇಕ ನಿಯಮಗಳಿವೆಯೇ? ಎಂದು ಪ್ರಶ್ನಿಸುತ್ತಿದ್ದಾರೆ.

ನೆಟ್ಟಿಗರಿಂದ ಕಿಡಿ!

ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಪೊಲೀಸರ ಮೇಲೆ ಕಿಡಿಕಾರುತ್ತಿದ್ದಾರೆ. ಇದೇ ತಪ್ಪನ್ನು ಸಾಮನ್ಯ ಜನ ಮಾಡಿದ್ದರೆ ಸಾವಿರಾರು ರೂಪಾಯಿ ದಂಡ ವಿಧಿಸಿ, ಲೈಸೆಸ್ಸ್​​ ಅನ್ನು ಕಿತ್ತುಕೊಳ್ಳಲಾಗುತ್ತಿತ್ತು. ಆದರೆ ಈಗ ಇಲಾಖೆ ಏನು ಮಾಡುತ್ತೇ? ಎಂದು ಒಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ. ಈ ವಿಡಿಯೋವನ್ನು ಆಧರಿಸಿ, ಆ ನಾಲ್ವರು ಪೊಲೀಸರನ್ನು ಕೆಲಸದಿಂದ ವಜಾ ಮಾಡಬೇಕು. ಆಗ ಮಾತ್ರ ವ್ಯವಸ್ಥೆ ಮೇಲೆ ಜನರಲ್ಲಿ ನಂಬಿಕೆ ಉಳಿಯುತ್ತದೆ ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ, (ಏಜೆನ್ಸೀಸ್​).