ಆಟೋ ಅಡ್ಡಗಟ್ಟಿ ನಾಲ್ವರು ಹಿಂದೂ ಹುಡುಗಿಯರ ಮೇಲೆ 20 ಮುಸ್ಲಿಂ ಯುವಕರಿಂದ ಹಲ್ಲೆ! ಏನಿದು ವಿವಾದ? Hindu Girls
- ಸುಮಾರು 20 ಮುಸ್ಲಿಂ ಯುವಕರ ಗುಂಪಿನಿಂದ ನಾಲ್ವರು ಹಿಂದೂ ಹುಡುಗಿಯರ ಮೇಲೆ ಹಲ್ಲೆ
- ವಾಣಿಜ್ಯ ನಗರಿ ಮುಂಬೈನ ದಿಂಡೋಶಿ ಏರಿಯಾದಲ್ಲಿ ನಡೆದ ಆಘಾತಕಾರಿ ಘಟನೆ
- ರಾಜಕೀಯ ಸ್ವರೂಪ ಪಡೆದುಕೊಂಡ ಹಿಂದು ಹುಡುಗಿಯರ ಮೇಲಿನ ಹಲ್ಲೆ ಘಟನೆ
- ಘಟನೆಯನ್ನು ಖಂಡಿಸಿ ಆಕ್ರೋಶ ಹೊರಹಾಕಿದ ಶಿವಸೇನಾ ನಾಯಕ ಸಂಜಯ್ ನಿರುಪಮ್
ಮುಂಬೈ: ಶೇರ್ ಆಟೋ ವಿಚಾರದಲ್ಲಿ ಭುಗಿಲೆದ್ದ ವಾಗ್ವಾದ ಹಿಂಸಾತ್ಮಕ ಸ್ವರೂಪ ಪಡೆದು, ಸುಮಾರು 20 ಮುಸ್ಲಿಂ ಯುವಕರ ಗುಂಪು, ನಾಲ್ವರು ಹಿಂದೂ ಹುಡುಗಿಯರ ( Hindu Girls ) ಮೇಲೆ ಹಲ್ಲೆ ಮಾಡಿರುವಂತಹ ಆಘಾತಕಾರಿ ಘಟನೆ ಮುಂಬೈನ ದಿಂಡೋಶಿ ಏರಿಯಾದಲ್ಲಿ ನಡೆದಿದೆ. ಈ ಘಟನೆ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ.
ಅಷ್ಟಕ್ಕೂ ಏನಾಯಿತು?
ಮಲಾಡ್ ರೈಲು ನಿಲ್ದಾಣದ ಬಳಿ ಮುಸ್ಲಿಂ ಮಹಿಳೆಯರೊಂದಿಗೆ ಹಂಚಿಕೊಂಡ ಶೇರ್ ಆಟೋರಿಕ್ಷಾ ವಿಚಾರದಲ್ಲಿ ನಾಲ್ವರು ಗುಜರಾತಿ ಹುಡುಗಿಯರು ನಿನ್ನೆ ಸಂಜೆ ಜಗಳವಾಡಿದಾಗ ಈ ಘಟನೆ ನಡೆದಿದೆ. ಸುಪ್ರೀಂ ಸಮಾಚಾರ್ ವರದಿಯ ಪ್ರಕಾರ, ಮಲಾಡ್‌ನಲ್ಲಿ ಶಾಪಿಂಗ್‌ಗೆ ಹೋಗಿದ್ದ ಗುಜರಾತಿ ಹಿಂದೂ ಕುಟುಂಬವೊಂದು ಶೇರ್ ಆಟೋ ಸಾಲಿನಲ್ಲಿ ನಿಂತಿತ್ತು. ಕುಟುಂಬಕ್ಕೆ ಹತ್ತಿರವಿರುವ ಮಹಿಳೆಯೊಬ್ಬರು ನಮ್ಮ ಹುಡುಗಿಯರು ಸಾಲಿನಲ್ಲಿ ಮುಂದೆ ಇದ್ದರು ಆದರೆ, ಬುರ್ಖಾ ಧರಿಸಿದ ಮಹಿಳೆಯರು ಸಾಲಿನಲ್ಲಿ ಮುಂದೆ ಹೋಗಲು ಬಯಸಿದ್ದರಿಂದ ಈ ವಾಗ್ವಾದ ಉಂಟಾಯಿತು ಎಂದಿದ್ದಾರೆ.
ಮಾತಿನ ಚಕಮಕಿ ನಡೆದರು ಕೂಡ ಅವರೆಲ್ಲರೂ ಪ್ರತ್ಯೇಕ ಆಟೋ ರಿಕ್ಷಾಗಳಲ್ಲಿ ಹೊರಟರು. ಆದಾಗ್ಯೂ, ಕುರಾರ್‌ನ ಪಠಾಣ್‌ವಾಡಿಯಲ್ಲಿ ಹೆಚ್ಚಿನ ಜನರನ್ನು ಸ್ಥಳಕ್ಕೆ ಕರೆಸಿದ ನಂತರ ಈ ವಾಗ್ವಾದ ಉಲ್ಬಣಗೊಂಡಿತು ಎನ್ನಲಾಗಿದೆ. ಪಠಾಣ್‌ವಾಡಿಯಲ್ಲಿ ನಾಲ್ವರು ಹುಡುಗಿಯರನ್ನು ಸುಮಾರು 20 ಮುಸ್ಲಿಂ ಪುರುಷರು ಸುತ್ತುವರೆದು ಹಲ್ಲೆ ನಡೆಸಿದ್ದಾರೆ ಎಂದು ಶಿವಸೇನಾ ನಾಯಕ ಸಂಜಯ್ ನಿರುಪಮ್ ಆರೋಪಿಸಿದ್ದಾರೆ. ಇದನ್ನು ಗುಂಪು ಹತ್ಯೆಯ ಯತ್ನಎಂದು ಕರೆದ ನಿರುಪಮ್, ನೀವು ನಿಜವಾಗಿಯೂ ಗಂಡಸರೇ ಆಗಿದ್ದರೆ ಯುವತಿಯರ ಮೇಲೆ ದಾಳಿ ಮಾಡಲು 20 ಪುರುಷರು ಏಕೆ ಒಟ್ಟುಗೂಡುತ್ತಿದ್ದರು? ಎಂದು ಆಕ್ರೋಶ ಹೊರಹಾಕಿದರು.
ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಭೇಟಿ ನೀಡಿದ್ದಾಗಿ ನಿರುಪಮ್ ಇದೇ ಸಮಯದಲ್ಲಿ ತಿಳಿಸಿದರು. ನಂತರ, ಘಟನೆಯನ್ನು ಖಂಡಿಸಿ, ನಿವಾಸಿಗಳೊಂದಿಗೆ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಹನುಮಾನ್ ಚಾಲೀಸಾವನ್ನು ಪಠಿಸಿದರು. ಈ ಘಟನೆಯನ್ನು 'ತೀವ್ರವಾಗಿ ತೊಂದರೆದಾಯಕ' ಎಂದು ಕರೆದರು. ಇಂಥಾ ಸಣ್ಣ ವಿವಾದಕ್ಕೆ ಯುವತಿಯರನ್ನು ಗುರಿಯಾಗಿಸಿಕೊಂಡ ಈ ಗುಂಪು ಹೇಗೆ ದಾಳಿ ಮಾಡಬಹುದು ಎಂದು ಪ್ರಶ್ನಿಸಿದರು.
ಪ್ರಸ್ತುತ, ಈ ಪ್ರಕರಣದಲ್ಲಿ, ಪೊಲೀಸರು ಇಬ್ಬರು ಮಹಿಳೆಯರು ಮತ್ತು ಓರ್ವ ಪುರುಷ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಸದ್ಯ ಇತರರು ತಲೆಮರೆಸಿಕೊಂಡಿದ್ದಾರೆ. ಕುರಾರ್ ಪೊಲೀಸರು ನೀಡಿದ ಹೇಳಿಕೆ ಆಧಾರದ ಮೇಲೆ, ಉಳಿದ ಆರೋಪಿಗಳು ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾರೆ ಎಂದು ನಿರುಪಮ್ ಹೇಳಿದ್ದಾರೆ. ಆದಾಗ್ಯೂ, ಮುಂದಿನ 24 ರಿಂದ 48 ಗಂಟೆಗಳಲ್ಲಿ ಪ್ರತಿಯೊಬ್ಬರನ್ನು ಬಂಧಿಸಲು ಪೊಲೀಸರು ಬದ್ಧರಾಗಿದ್ದಾರೆ ಮತ್ತು ಅವರ ತಂಡವು ಈಗಾಗಲೇ ಉಳಿದ ಆರೋಪಿಗಳಿಗಾಗಿ ಹುಡುಕಾಡುತ್ತಿದೆ ಎಂದು ನಿರುಪಮ್ ತಿಳಿಸಿದ್ದಾರೆ, (ಏಜೆನ್ಸೀಸ್).