ಪಾಟ್ನಾ: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಇನಾರ್ವಾಭರ್ ಪಂಚಾಯತ್ ಮಿತಿಯ ಬಂಕಟ್ ಗ್ರಾಮದಲ್ಲಿ ಶುಕ್ರವಾರ(ಅ. 02) ದುರ್ಘಟನೆ ನಡೆದಿದ್ದು, ಸ್ನಾನ ಮಾಡಲು ಕೆರೆಗೆ ತೆರಳಿದ್ದ ಐವರು ಹುಡುಗಿಯರ ಪೈಕಿ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಬೆಳಗ್ಗೆ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ಬಂಕಟ್ ಗ್ರಾಮದ ಐವರು ಹುಡುಗಿಯರು ಕೆರೆಯಲ್ಲಿ ಸ್ನಾನ ಮಾಡಲು ಹೋಗಿದ್ದಾರೆ. ಅದರಲ್ಲಿ ನಾಲ್ವರು ನೀರಿಗೆ ಇಳಿದಿದ್ದಾರೆ. ಓರ್ವ ಹುಡುಗಿ ದಂಡೆಯಲ್ಲೇ ಕುಳಿತಿದ್ದಾಳೆ. ನೀರಿನ ಆಳ ತಿಳಿಯದೇ ಒಳಗೆ ಹೋದ ಹುಡುಗಿಯರಿಗೆ ಮುಳುಗಿ ಸಾವನ್ನಪ್ಪಿದ್ದಾರೆ.
ದಂಡೆಯಲ್ಲಿ ಕುಳಿತಿದ್ದ ಹುಡುಗಿ ತಕ್ಷಣ ಗ್ರಾಮಸ್ಥರಿಗೆ ತಿಳಿಸಿದ್ದು, ಗ್ರಾಮಸ್ಥರು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಹುಡುಗಿಯರಿಗಾಗಿ ಶೋಧ ನಡೆಸಿದ್ದಾರೆ. ಕೆರೆಯಿಂದ ನಾಲ್ವರು ಹುಡುಗಿಯರ ಶವಗಳನ್ನು ಹೊರತೆಗೆದಿದ್ದಾರೆ. ಮೃತರಲ್ಲಿ ಇಬ್ಬರು ಸಹೋದರಿಯರಾಗಿದ್ದಾರೆ. ಮತ್ತು ಮೃತರೆಲ್ಲರೂ 13 ವರ್ಷದೊಳಗಿನ ಹುಡುಗಿಯರು.
ಮೃತರನ್ನು ಸೋನಾವತಿ ಕುಮಾರಿ(13), ಅವರ ಸಹೋದರಿ ಫುಲ್ವತಿ ಕುಮಾರಿ(10), ಸೋನಾಲಿ ಕುಮಾರಿ (10) ಹಾಗೂ ಪ್ರತಿಭಾ ಕುಮಾರಿ (12) ಎಂದು ಗುರುತಿಸಲಾಗಿದೆ. ಪೊಲೀಸರು ಮೃತದೇಹಗಳನ್ನು ಸ್ಥಳೀಯ ಮೋತಿಮರಿ ಸರ್ದಾರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸ್ಥಳಾಂತರಿಸಿದ್ದಾರೆ. ಮತ್ತು ಪ್ರಕರಣ ದಾಖಲಿಸಿಕೊಂಡಿದ್ದಾರೆ (ಏಜೆನ್ಸೀಸ್).