ನವದೆಹಲಿ: ಭಾರತದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿದ್ದು, ಬುಧವಾರ (ನ.11) ಬೆಳಗ್ಗೆ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ತುರ್ತಾಗಿ ದಾಖಲಿಸಲಾಗಿದೆ. ಎಂದಿನಂತೆ ಮುಂಜಾನೆಯ ವಾಕಿಂಗ್ ತೆರಳಿದ್ದ ವೇಳೆ ಅವರು ಹಠಾತ್ತನೆ ಪ್ರಜ್ಞೆತಪ್ಪಿ ನೆಲಕ್ಕೆ ಬಿದ್ದಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬುಧವಾರ ಮುಂಜಾನೆ ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ 75 ವರ್ಷದ ಧನಕರ್ ಅವರಿಗೆ ತಲೆಸುತ್ತು ಬಂದು ಕುಸಿದು ಬಿದ್ದಿದ್ದಾರೆ. ತಕ್ಷಣ ಎಚ್ಚೆತ್ತ ಅವರ ಭದ್ರತಾ ಸಿಬ್ಬಂದಿ, ಪೊಲೀಸ್ ವಾಹನದಲ್ಲಿ ಅವರನ್ನು ನಿವಾಸಕ್ಕೆ ಕರೆತಂದಿದ್ದಾರೆ. ಕೂಡಲೇ ಐಎಲ್‌ಬಿಎಸ್ (ILBS) ಆಸ್ಪತ್ರೆಯ ವೈದ್ಯಕೀಯ ತಂಡ ಮತ್ತು ಏಮ್ಸ್‌ನ ಹಿರಿಯ ವೈದ್ಯ ಡಾ. ಸಂದೀಪ್ ಸೇಠ್ ಸ್ಥಳಕ್ಕೆ ಆಗಮಿಸಿ ತುರ್ತು ತಪಾಸಣೆ ನಡೆಸಿದ್ದಾರೆ. ಆದರೆ ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಿದ ವೈದ್ಯರು, ತಕ್ಷಣವೇ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದಾರೆ.
ಪ್ರಸ್ತುತ ಜಗದೀಪ್ ಧನಕರ್ ಅವರನ್ನು ಏಮ್ಸ್‌ನ ಕಾರ್ಡಿಯೋ-ನ್ಯೂರೋ ಸೆಂಟರ್‌ಗೆ ದಾಖಲಿಸಲಾಗಿದ್ದು, ಹೃದ್ರೋಗ ತಜ್ಞರ ವಿಶೇಷ ತಂಡ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದೆ. ಕಳೆದ ವರ್ಷವೂ ಕೂಡ ಧನಕರ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಈಗ ಮತ್ತೊಮ್ಮೆ ಹೃದಯ ಹಾಗೂ ನರರೋಗ ವಿಭಾಗದಲ್ಲಿ ಅವರಿಗೆ ತಪಾಸಣೆ ನಡೆಸಲಾಗುತ್ತಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ರಾಜಸ್ಥಾನದ ಜುಂಜುನು ಮೂಲದ ಧನಕರ್ ಅವರದ್ದು ಸುದೀರ್ಘ ಹಾಗೂ ರೋಚಕ ರಾಜಕೀಯ ಪಯಣವಾಗಿದೆ. 1989 ರಲ್ಲಿ ಜನತಾದಳದಿಂದ ಸಂಸದರಾಗಿ ರಾಜಕೀಯ ಜೀವನ ಆರಂಭಿಸಿದ ಇವರು, 1991ರಲ್ಲಿ ಕಾಂಗ್ರೆಸ್ ಸೇರಿ ರಾಜಸ್ಥಾನದ ಕಿಶನ್‌ಗಢ ಶಾಸಕರಾಗಿ ಆಯ್ಕೆಯಾದರು. ವಕೀಲ ವೃತ್ತಿಯಲ್ಲೂ ಹೆಸರು ಮಾಡಿದ್ದ ಧನಕರ್, 2003ರಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಬಿಜೆಪಿಯ ಕಾನೂನು ಮತ್ತು ಶಾಸಕಾಂಗ ವ್ಯವಹಾರಗಳ ವಿಭಾಗದ ಮುಖ್ಯಸ್ಥರಾಗಿಯೂ ಅವರು ಹಲವು ವರ್ಷಗಳ ಕಾಲ ಶ್ರಮಿಸಿದ್ದರು.
2019 ರಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕಗೊಂಡ ನಂತರವಂತೂ ಜಗದೀಪ್ ಧನಕರ್ ಇಡೀ ದೇಶದ ಗಮನ ಸೆಳೆದರು. ಅಲ್ಲಿನ ಆಗಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಅವರು ನಡೆಸಿದ ಸಾಂವಿಧಾನಿಕ ಸಂಘರ್ಷಗಳು ನಿತ್ಯ ಸುದ್ದಿಯಾಗುತ್ತಿದ್ದವು.
ಇದಾದ ಬಳಿಕ 2022ರಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಸ್ಪರ್ಧಿಸಿ ದೇಶದ 14 ನೇ ಉಪರಾಷ್ಟ್ರಪತಿಯಾಗಿ ಹಾಗೂ ರಾಜ್ಯಸಭೆಯ ಸಭಾಪತಿಯಾಗಿ ಅಧಿಕಾರ ವಹಿಸಿಕೊಂಡರು. ಆದರೆ ತಮ್ಮ ಅಧಿಕಾರಾವಧಿ ಪೂರ್ಣಗೊಳ್ಳುವ ಮೊದಲೇ, ಆರೋಗ್ಯದ ಸಮಸ್ಯೆಗಳನ್ನು ಉಲ್ಲೇಖಿಸಿ ಅವರು ತಮ್ಮ ಹುದ್ದೆಗೆ ಹಠಾತ್ತನೆ ರಾಜೀನಾಮೆ ನೀಡಿದ್ದರು, (ಏಜೆನ್ಸೀಸ್).