ಅಮೇಠಿ: ಉತ್ತರ ಪ್ರದೇಶದ ಅಮೇಠಿ(Amethi) ಜಿಲ್ಲೆಯ ಮದನ್ ಮವಾಯ್ ಗ್ರಾಮ ಪಂಚಾಯತಿಯ ಮತದಾರರ ಪಟ್ಟಿಯಿಂದ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೆಸರು ನಾಪತ್ತೆಯಾಗಿದೆ. ಈ ಪ್ರದೇಶದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ಮತದಾರರ ಯಾದಿಯಲ್ಲಿ ಇರಾನಿ ಹೆಸರಿದ್ದರೂ ಪಂಚಾಯತ್ ಪಟ್ಟಿಯಿಂದ ಕಾಣೆ ಆಗಿರುವುದಾಗಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅಮೇಠಿ ಜಿಲ್ಲಾಧಿಕಾರಿ ಸಂಜಯ್ ಚೌಹಾಣ್ ತಿಳಿಸಿದ್ದಾರೆ. ಬಿಜೆಪಿ ನಾಯಕಿ ಇರಾನಿ, ಲೋಕಸಭೆಯಲ್ಲಿ 2019ರಿಂದ 2024ರ ವರೆಗೆ ಅಮೇಠಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಗೌರಿಗಂಜ್ ಅಸೆಂಬ್ಲಿ ಕ್ಷೇತ್ರ ವ್ಯಾಪ್ತಿಯ ಮದನ್ ಮವಾಯ್ ಗ್ರಾಮದಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದರು.
ಸಾಮಾನ್ಯವಾಗಿ, ಸ್ಥಳೀಯ ಸಂಸ್ಥೆಗಳ (ಪಂಚಾಯತ್) ಚುನಾವಣೆ ಮತ್ತು ಲೋಕಸಭೆ/ವಿಧಾನಸಭಾ ಚುನಾವಣೆಗಳ ಮತದಾರರ ಪಟ್ಟಿಗಳನ್ನು ನಿರ್ವಹಿಸುವ ಪ್ರಕ್ರಿಯೆಗಳು ಮತ್ತು ಅವುಗಳ ಅಪ್‌ಡೇಟ್ ಆಗುವ ಕಾಲಮಿತಿ ಬೇರೆಬೇರೆಯಾಗಿರುತ್ತದೆ. ಇಂತಹ ಪ್ರಕರಣಗಳಲ್ಲಿ ತಾಂತ್ರಿಕ ದೋಷ ಅಥವಾ ಹೆಸರು ನವೀಕರಣದ (Updation) ಸಮಯದಲ್ಲಿ ಆದ ಲೋಪದೋಷಗಳು ಕಾರಣವಾಗಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗುತ್ತದೆ,(ಏಜೆನ್ಸೀಸ್).