ನವದೆಹಲಿ: ದೇಶದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ಪರಿಷ್ಕರಣೆ (SIR) ನೀತಿಯನ್ನು ಕೂಡಲೇ ಕೈಬಿಡುವಂತೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ಆಗ್ರಹಿಸಿ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆ ನಡೆಸುತ್ತಿರುವುದರ ನಡುವೆಯೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ( Danish Kaneria ) ತಮ್ಮ ಎಕ್ಸ್ ಖಾತೆಯಲ್ಲಿ ಮಾಡಿರುವ ವ್ಯಂಗ್ಯಭರಿತ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ದೆಹಲಿ ಸಿಜೆಪಿ ಪ್ರತಿಭಟನೆ ಹಾಗೂ ಪೊಲೀಸರ ಕ್ರಮವನ್ನು ಕ್ರಿಕೆಟ್ಗೆ ಹೋಲಿಸಿ ಕನೇರಿಯಾ ಮಾಡಿರುವ ಟ್ವೀಟ್ ಎಲ್ಲರ ಗಮನವನ್ನು ಸೆಳೆದಿದೆ. ದೆಹಲಿ ಪೊಲೀಸರು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸುತ್ತಾರೆಂದು ನಾನು ನಂಬುತ್ತೇನೆ ಎಂದು ಕ್ರೀಡಾ ಶೈಲಿಯಲ್ಲೇ ಕನೇರಿಯಾ ಟ್ವೀಟ್ ಮಾಡಿದ್ದು, ಪ್ರತಿಭಟನಕಾರರ ವಿರುದ್ಧ ಪೊಲೀಸರೇ ಮೊದಲು ಆ್ಯಕ್ಷನ್ಗೆ ಇಳಿಯಲಿ ಅನ್ನೋದು ಕನೇರಿಯಾ ಅವರ ಟ್ವೀಟ್ ಒಳಾರ್ಥವಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಲೆಗ್ ಸ್ಪಿನ್ನರ್ ಆಗಿ ಪಾಕಿಸ್ತಾನವನ್ನು ಪ್ರತಿನಿಧಿಸಿದ ಕನೇರಿಯಾ, ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಪ್ರಮುಖ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಪಾಕಿಸ್ತಾನದಲ್ಲಿ ಹಿಂದೂಗಳ ವಿರುದ್ಧ ನಡೆಯುವ ದೌರ್ಜನ್ಯದ ವಿರುದ್ಧವೂ ಧ್ವನಿ ಎತ್ತುತ್ತಿರುತ್ತಾರೆ. ಅದರಲ್ಲೂ ಭಾರತದಲ್ಲಿ ಮೋದಿ ಸರ್ಕಾರದ ಪರ ಆಗಾಗ್ಗೆ ಬ್ಯಾಟ್ ಬೀಸುತ್ತಲೇ ಇರುತ್ತಾರೆ. ಸದ್ಯ ಕನೇರಿಯಾ ಮಾಡಿರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕೂಡ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುವ ಮೂಲಕ ಹಾಸ್ಯಾಸ್ಪದವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಅಂದಹಾಗೆ, ಚುನಾವಣಾ ಪಟ್ಟಿಯಲ್ಲಿನ ಲೋಪದೋಷಗಳು ಹಾಗೂ ಇನ್ನಿತರ ವಿವಾದಗಳ ವಿಚಾರವಾಗಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಯನ್ನು ಒತ್ತಾಯಿಸಿ ಸಿಜೆಪಿ ಈ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಪ್ರತಿಭಟನೆಗೆ ಯಾವುದೇ ಕಾರಣಕ್ಕೂ ಅನುಮತಿ ನಿರಾಕರಿಸಿರುವ ದೆಹಲಿ ಪೊಲೀಸರು, ಭದ್ರತಾ ದೃಷ್ಟಿಯಿಂದ ರಾಷ್ಟ್ರ ರಾಜಧಾನಿಯಾದ್ಯಂತ ಹದ್ದಿನ ಕಣ್ಣಿಟ್ಟಿದ್ದಾರೆ. ಜಂತರ್ ಮಂತರ್ ಪ್ರದೇಶದಲ್ಲಿ ಬಿಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿಯಾದ್ಯಂತ ಪೊಲೀಸರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) 20,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿಭಟನಾಕಾರರು ನಗರ ಪ್ರವೇಶಿಸದಂತೆ ತಡೆಯಲು ದೆಹಲಿಯ ಎಲ್ಲಾ ಗಡಿ ಭಾಗಗಳಲ್ಲಿ ತೀವ್ರ ತಪಾಸಣೆ ಕೈಗೊಳ್ಳಲಾಗಿದ್ದು, ಹೊರಗಿನಿಂದ ಬರುವ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಪ್ರತಿಭಟನೆಯಲ್ಲಿ ಭಾಗವಹಿಸಬೇಕಿದ್ದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠೀ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಗುರುಗ್ರಾಮದಲ್ಲಿರುವ ಅವರ ನಿವಾಸದಲ್ಲಿ ಬಂಧಿಸಲಾಗಿದೆ. ಅಲ್ಲದೆ, ಸಿಜೆಪಿ ನಾಯಕರಾದ ಅಭಿಜಿತ್ ದಿಪ್ಕೆ, ಸೌರವ್ ದಾಸ್ ಹಾಗೂ ಅಶುತೋಷ್ ರಂಕಾ ಅವರಿದ್ದ ವಿಮಾನವು ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಭದ್ರತಾ ಪಡೆಗಳು ಅವರನ್ನು ವಶಕ್ಕೆ ಪಡೆದಿವೆ.
ದೆಹಲಿಯ ಮಂಡಿ ಹೌಸ್‌ನಿಂದ ಜಂತರ್ ಮಂತರ್‌ವರೆಗಿನ ಇಡೀ ಪ್ರದೇಶದಲ್ಲಿ ಕಠಿಣ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಮಂಡಿ ಹೌಸ್ ವೃತ್ತದಿಂದ ಜಂತರ್ ಮಂತರ್‌ಗೆ ಸಂಪರ್ಕ ಕಲ್ಪಿಸುವ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಬೃಹತ್ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಫಿರೋಜ್ ಶಾ ರಸ್ತೆ, ಬಾರಾಖಂಬಾ ರಸ್ತೆ ಮತ್ತು ಕನ್ನಾಟ್ ಪ್ಲೇಸ್ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ತಡೆಹಿಡಿದ ಪೊಲೀಸರು, ಪ್ರತಿಭಟನಾಕಾರರು ಆ ಕಡೆಗೆ ತೆರಳದಂತೆ ಹಗಲಿರುಳು ಕಟ್ಟುನಿಟ್ಟಿನ ಕಣ್ಣಾವಲು ಇರಿಸಿದ್ದಾರೆ, (ಏಜೆನ್ಸೀಸ್).