ರಾಜಸ್ಥಾನದಲ್ಲಿ ಭೀಕರ ಘರ್ಷಣೆ: ಬಿಜೆಪಿ ಮಾಜಿ ಶಾಸಕನನ್ನು ಹೊಡೆದು ಕೊಂದ ಗ್ರಾಮಸ್ಥರು  
ದೇಶ

ರಾಜಸ್ಥಾನದಲ್ಲಿ ಭೀಕರ ಘರ್ಷಣೆ: ಬಿಜೆಪಿ ಮಾಜಿ ಶಾಸಕನನ್ನು ಹೊಡೆದು ಕೊಂದ ಗ್ರಾಮಸ್ಥರು | Atar Singh Bhadana

ವೇರ್ ಪೊಲೀಸ್ ಠಾಣಾ ವ್ಯಾಪ್ತಿಯ ಬೋಂಡಾ ಗ್ರಾಮದ ಬಳಿ ಶಾಸಕರ ಕುಟುಂಬಕ್ಕೆ ಸೇರಿದ ಗಣಿಗಾರಿಕಾ ಪ್ರದೇಶದಲ್ಲಿ ಈ ದಾಳಿ ನಡೆದಿದ್ದಾಗಿ ವರದಿಯಾಗಿದೆ.

ಜೈಪುರ: ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ಗಣಿಗಾರಿಕೆ ಘಟಕ ಪುನಾರಂಭಿಸುವ ವಿಚಾರಕ್ಕೆ ಗ್ರಾಮಸ್ಥರೊಂದಿಗೆ ನಡೆದ ದೊಡ್ಡ ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಾಜಿ ಬಿಜೆಪಿ ಶಾಸಕ ಅತಾರ್ ಸಿಂಗ್ ಭದಾನಾ (Atar Singh Bhadana) ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ.

ಊರಿನ ಜನರೊಂದಿಗೆ ನಡೆದ ಮಾತಿನ ಚಕಮಕಿ ತಾರಕಕ್ಕೇರಿದ ಬೆನ್ನಲ್ಲೇ ಅತಾರ್ ಸಿಂಗ್​ ಮೇಲೆ ಗ್ರಾಮಸ್ಥರು ಮನಬಂದಂತೆ ಥಳಿಸಿದ್ದಾರೆ. ಈ ವೇಳೆ, ಗಂಭೀರವಾಗಿ ಹಲ್ಲೆಗೊಳಗಾದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದೇ ಆದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ವೇರ್ ಪೊಲೀಸ್ ಠಾಣಾ ವ್ಯಾಪ್ತಿಯ ಬೋಂಡಾ ಗ್ರಾಮದ ಬಳಿ ಶಾಸಕರ ಕುಟುಂಬಕ್ಕೆ ಸೇರಿದ ಗಣಿಗಾರಿಕಾ ಪ್ರದೇಶದಲ್ಲಿ ಈ ದಾಳಿ ನಡೆದಿದ್ದಾಗಿ ವರದಿಯಾಗಿದೆ.

ಏನಿದು ವಿವಾದ?

ಬಯಾನಾ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಭದಾನಾ ಅವರ ಪತ್ನಿ ಕಮಲೇಶ್ ಅವರ ಹೆಸರಿನಲ್ಲಿದ್ದ ಗಣಿ ಗುತ್ತಿಗೆ ಮತ್ತು ಗ್ರಾಮದ ಬೆಟ್ಟದ ಬಳಿ ಕಲ್ಲು ಗಣಿಗಾರಿಕೆ ಘಟಕವನ್ನು ತೆರೆಯುವ ವಿಚಾರಕ್ಕೆ ಬಹಳ ವರ್ಷಗಳಿಂದ ವಿವಾದವಿತ್ತು. ಗಣಿಗಾರಿಕೆಗೆ ಬಳಸುವ ವಾಹನಗಳು ಸಂಚರಿಸುವ ಜಾಗವು ಗ್ರಾಮ್ ಪಂಚಾಯತ್‌ಗೆ ಸೇರಿದ ಭೂಮಿಯಾಗಿದೆ ಎಂದು ಆರೋಪಿಸಿ ಬೋಂಡಾ ಮತ್ತು ರಾಯ್‌ಪುರ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿಂದೆ, ರಸ್ತೆ ತಡೆ ಹಾಗೂ ಪ್ರತಿಭಟನೆಗಳನ್ನು ನಡೆಸುವ ಮೂಲಕ ದಾರಿಯನ್ನು ತಡೆದಿದ್ದರು. ಇಷ್ಟಾದರೂ ವಿವಾದ ಬಗೆಹರಿಯಲಿಲ್ಲ.

ಕೋರ್ಟ್ ಆದೇಶದ ಬಳಿಕ ಕಾರ್ಯಾಚರಣೆ

ಕೋರ್ಟ್‌ನಿಂದ ಅನುಮತಿ ಸಿಕ್ಕ ಕೂಡಲೇ ಮಾಜಿ ಶಾಸಕ ಗಣಿಗಾರಿಕೆ ಘಟಕದ ಕಾರ್ಯಾಚರಣೆಯನ್ನು ಮರು ಆರಂಭಿಸಲು ತೆರಳಿದ್ದರು. ಈ ವೇಳೆ, ಸ್ಥಳಕ್ಕೆ ಓಡಿಬಂದ ಗ್ರಾಮಸ್ಥರು ಮತ್ತು ಭದಾನಾ ಬೆಂಬಲಿಗರ ನಡುವೆ ತೀವ್ರ ಘರ್ಷಣೆ ಉಂಟಾಯಿತು. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅತಾರ್ ಸಿಂಗ್​ರನ್ನು ಮೊದಲು ವೇರ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜೈಪುರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಗೆ ಸೇರಿಸಿದ್ದೇ ಆದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ಘಟನೆಯ ಬೆನ್ನಲ್ಲೇ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ಬೋಂಡಾ, ರಾಯ್‌ಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಬಿಡಾರ ಹೂಡಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ,(ಏಜೆನ್ಸೀಸ್).