ಮಾಜಿ ಸೇನಾ ಮುಖ್ಯಸ್ಥ ಎಂ.ಎಂ.ನರವಾಣೆ ಪುಸ್ತಕ 
ದೇಶ

ಮಾಜಿ ಸೇನಾ ಮುಖ್ಯಸ್ಥ ಎಂ.ಎಂ.ನರಾವಣೆ ಅವರ ಅಪ್ರಕಟಿತ ಪುಸ್ತಕ ಸೋರಿಕೆ; ಪ್ರಕರಣ ದಾಖಲಿಸಿಕೊಂಡ ಪೊಲೀಸರು | M M Naravane

ಪ್ರಮುಖ ಮುಖ್ಯಾಂಶಗಳು

  • ರಾಜಕೀಯ ವಿವಾದಕ್ಕೆ ಕಾರಣವಾಗಿರುವ ಎಂ.ಎಂ.ನರವಾಣೆ ಬಯೋಗ್ರಾಫಿ
  • 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಎಂಬ ಪುಸ್ತಕ ಬಿಡುಗಡೆ ಮುನ್ನವೇ ಸೋರಿಕೆ
  • ಎಫ್​ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ದೆಹಲಿ ಪೊಲೀಸರು
ನವದೆಹಲಿ: ದೇಶದಲ್ಲಿ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿರುವ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ(M M Naravane) ಅವರ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಎಂಬ ಪುಸ್ತಕ ಬಿಡುಗಡೆಗೂ ಮುನ್ನವೇ ಸೋರಿಕೆ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ನರವಾಣೆಯವರ ಅಪ್ರಕಟಿತ ಆತ್ಮಚರಿತ್ರೆಯ ಆಯ್ದ ಭಾಗಗಳನ್ನು ಕ್ಯಾರವಾನ್ ಮ್ಯಾಗ್​ಜಿನ್ ವರದಿ ಉಲ್ಲೇಖಿಸಿ, 2020ರ ಭಾರತ-ಚೀನಾ ಮಿಲಿಟರಿ ಘರ್ಷಣೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಜವಾಬ್ದಾರಿಯನ್ನು ಪೂರೈಸಲಿಲ್ಲ ಎಂದು ಆರೋಪಿಸಿದ್ದರು. ಇದು ಲೋಕಸಭೆಯಲ್ಲಿ ತೀವ್ರ ಕೋಲಾಹಲವನ್ನು ಸೃಷ್ಟಿಸಿತ್ತು.
ಗೃಹಸಚಿವ ಅಮಿತ್ ಶಾ ಮತ್ತು ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು ಇದು ಅಪ್ರಕಟಿತ ಪುಸ್ತಕವಾಗಿದ್ದು, ಸದನದ ನಿಯಮಗಳ ಪ್ರಕಾರ ಅಪ್ರಕಟಿತ ಪುಸ್ತಕವನ್ನು ಉಲ್ಲೇಖಿಸಿ ಮಾತನಾಡಲು ಸಾಧ್ಯವಿಲ್ಲ ಎಂದು ವಾದಿಸಿದ್ದರು. ಸ್ಪೀಕರ್ ಓಂ ಬಿರ್ಲಾ ಕೂಡ ಅದನ್ನು ಅನುಮೋದಿಸಿ ರಾಹುಲ್ ಗಾಂಧಿಗೆ ಮಾತನಾಡಲು ಅವಕಾಶ ನಿರಾಕರಿಸಿದ್ದರು.
ಏತನ್ಮಧ್ಯೆ, ಪುಸ್ತಕದ ಪ್ರಕಾಶನ ಹಕ್ಕುಗಳನ್ನು ಹೊಂದಿರುವ ಪೆಂಗ್ವಿನ್ ರಾಂಡಮ್ ಹೌಸ್, ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಆತ್ಮಚರಿತ್ರೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಪುಸ್ತಕದ ಏಕೈಕ ಪ್ರಕಾಶನ ಹಕ್ಕುಗಳನ್ನು ನಾವು ಹೊಂದಿದ್ದೇವೆ. ಪುಸ್ತಕವು ಪ್ರಕಟಣೆಗೆ ಹೋಗಿಲ್ಲ. ಪುಸ್ತಕದ ಯಾವುದೇ ಪ್ರತಿಗಳನ್ನು ಮುದ್ರಣ ಅಥವಾ ಡಿಜಿಟಲ್ ರೂಪದಲ್ಲಿ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪ್ರಕಟಿಸಿಲ್ಲ, ವಿತರಿಸಿಲ್ಲ, ಮಾರಾಟ ಮಾಡಿಲ್ಲ ಅಥವಾ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. 
ಪ್ರಸ್ತುತ ಮಾಹಿತಿ ಪ್ರಕಾರ ನರವಾಣೆಯವರ ಆತ್ಮಚರಿತ್ರೆ ಪುಸ್ತಕ ಪ್ರಕಟಣೆಗೆ ರಕ್ಷಣಾ ಇಲಾಖೆ ಅನುಮತಿ ನೀಡಿಲ್ಲ ಎನ್ನಲಾಗಿದೆ. ಆದಾಗ್ಯೂ ಪುಸ್ತಕ ಮುದ್ರಣಗೊಂಡು, ವಿವಿಧ ಆನ್​ಲೈನ್ ಮಾರಾಟ ಮಳಿಗೆಗಳಲ್ಲಿ ಲಭ್ಯವಿರುವ ಬಗ್ಗೆ, ಅದು ರಾಹುಲ್ ಗಾಂಧಿ ಕೈಸೇರಿರುವ ಬಗ್ಗೆ ಚರ್ಚೆಗಳು ಎದ್ದಿವೆ. ಅಧಿಕಾರಿಗಳ ಅನುಮೋದನೆಗಾಗಿ ಬಾಕಿ ಇರುವ ಪುಸ್ತಕವನ್ನು ಅನುಮತಿ ಪಡೆಯದೇ ಪುಸ್ತಕ ಮುದ್ರಿಸಿ, ಮಾರಾಟ ಮಾಡಿದ್ದರ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ (ಏಜೆನ್ಸೀಸ್).