ಬಂಧಿತ ನಿವೃತ್ತ ಅಧಿಕಾರಿ ಕುಲೇಂದ್ರ ಶರ್ಮಾ
ಗುವಾಹಟಿ: ಪಾಕಿಸ್ತಾನ ಪರ ಬೇಹುಗಾರಿಕೆ(spying) ನಡೆಸಿದ ಮತ್ತು ಅದರ ಜಾಲದೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಅಸ್ಸಾಂ ಪೊಲೀಸರು ಶುಕ್ರವಾರ(ಡಿ. 12) ರಾತ್ರಿ ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿಯೊಬ್ಬರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಆರೋಪಿಯನ್ನು ತೇಜ್‌ಪುರದ ಪಾಟಿಯಾ ಪ್ರದೇಶದ ನಿವಾಸಿ ಕುಲೇಂದ್ರ ಶರ್ಮಾ ಎಂದು ಗುರುತಿಸಲಾಗಿದ್ದು, ಪೊಲೀಸರ ನಿರಂತರ ಕಣ್ಗಾವಲು ಮತ್ತು ಪ್ರಾಥಮಿಕ ತನಿಖೆಯ ನಂತರ ಆತನನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆಯೊಂದಕ್ಕೆ ಸಂಬಂಧಿಸಿದ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದು, ಸೂಕ್ಷ್ಮ ಮಾಹಿತಿಯನ್ನು ನೀಡುತ್ತಿದ್ದನು ಎಂದು ಹೇಳಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಅಸ್ಸಾಂನ ಸೋನಿತ್‌ಪುರದ ಉಪ ಪೊಲೀಸ್ ವರಿಷ್ಠಾಧಿಕಾರಿ ಹರಿಚರಣ್ ಭೂಮಿಜ್, ಬಂಧಿತ ವ್ಯಕ್ತಿಯ ಮೇಲೆ ನಾವು ನಿಗಾ ಇಟ್ಟಿದ್ದೇವೆ. ಆತನ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ನಿಂದ ಅನುಮಾನಾಸ್ಪದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ, ಆದರೂ ಕೆಲವು ಡೇಟಾವನ್ನು ಅಳಿಸಲಾಗಿದೆ. ಶರ್ಮಾ ಅವರ ಪಾಕಿಸ್ತಾನ ಸಂಪರ್ಕಗಳ ಬಗ್ಗೆ ಅನುಮಾನ ಪ್ರಬಲವಾಗಿದ್ದರೂ, ತನಿಖೆ ಪೂರ್ಣಗೊಳ್ಳುವವರೆಗೆ ಅದನ್ನು ದೃಢೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಿವೃತ್ತಿಯಾಗುವ ಮೊದಲು ಶರ್ಮಾ ತೇಜ್‌ಪುರದ ವಾಯುಪಡೆ ನಿಲ್ದಾಣದಲ್ಲಿ ಜೂನಿಯರ್ ವಾರಂಟ್ ಅಧಿಕಾರಿಯಾಗಿದ್ದನು. ಅಲ್ಲಿ ಸುಖೋಯ್ 30 ಸ್ಕ್ವಾಡ್ರನ್ ಸೇರಿದಂತೆ ಪ್ರಮುಖ ವಾಯುಪಡೆಯ ಆಸ್ತಿಗಳಿವೆ. 2002ರಲ್ಲಿ ನಿವೃತ್ತರಾದರು. ನಂತರ ಅವರು ತೇಜ್‌ಪುರ ವಿಶ್ವವಿದ್ಯಾಲಯದಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಹಲವಾರು ವಿಭಾಗಗಳ ಅಡಿಯಲ್ಲಿ ಶರ್ಮಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ (ಏಜೆನ್ಸೀಸ್).