ಜಿಂಕೆಗೆ ಅವಲಕ್ಕಿ (ಪೊಹಾ) ತಿನ್ನಿಸಿದ ಅರಣ್ಯಾಧಿಕಾರಿ ಸೇವೆಯಿಂದ ಅಮಾನತು
- ಜಿಂಕೆಗೆ ಅವಲಕ್ಕಿ (ಪೊಹಾ) ತಿನ್ನಿಸಿದ ಅರಣ್ಯಾಧಿಕಾರಿ ಸೇವೆಯಿಂದ ಅಮಾನತು
- ಮಧ್ಯಪ್ರದೇಶದ ಸಾತ್ಪುರಾ ಹುಲಿ ಸಂರಕ್ಷಣಾ ಪ್ರದೇಶದ ಪ್ರಭಾರಿ ಸಹಾಯಕ ನಿರ್ದೇಶಕ ವಿನೋದ್ ವರ್ಮಾ
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್ ಬಳಿಕ ಕಠಿಣ ಕ್ರಮ
ಮಧ್ಯಪ್ರದೇಶ: ಸಾಂಬಾರ್ ಜಿಂಕೆಗೆ ಅವಲಕ್ಕಿ (ಪೊಹಾ) ತಿನ್ನಿಸಿದ ಹಿನ್ನಲೆ ಸಾತ್ಪುರಾ ಹುಲಿ ಸಂರಕ್ಷಣಾ ಪ್ರದೇಶದ ಅರಣ್ಯಾಧಿಕಾರಿಯನ್ನು ಕೆಲಸದಿಂದ ಅಮಾನತು (Forest Officer Suspended) ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದೆ. ವನ್ಯ ಜೀವಿಯೊಟ್ಟಿಗೆ ಅನುಚಿತವಾಗಿ ವರ್ತಿಸಿದ ಹಿನ್ನಲೆ ಸಾತ್ಪುರಾ ಹುಲಿ ಸಂರಕ್ಷಣಾ ಪ್ರದೇಶದ ಪ್ರಭಾರಿ ಸಹಾಯಕ ನಿರ್ದೇಶಕನಾಗಿರುವ ವಿನೋದ್ ವರ್ಮಾ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದೆ.
ವಿಡಿಯೋ ತಂದ ಆಪತ್ತು!
ಕೆಲ ದಿನಗಳ ಹಿಂದೆ ಖುದ್ದು ವಿನೋದ್ ವರ್ಮಾ ಸಾಂಬಾರ್ ಜಿಂಕೆಗೆ ಅವಲಕ್ಕಿ (ಪೊಹಾ) ಯನ್ನು ತಿನ್ನಿಸುತ್ತಿರುವ ವಿಡಿಯೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಣಿ ಪ್ರೀಯರು ಹಾಗೈ ವನ್ಯಜೀವಿ ತಜ್ಞರು ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಅಧಿಕಾರಿ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಮಧ್ಯಪ್ರದೇಶ ಸರ್ಕಾರವು ವಿನೋದ್ ವರ್ಮಾರ 1965 ರ ಮಧ್ಯಪ್ರದೇಶ ನಾಗರಿಕ ಸೇವೆಗಳ (ನಡವಳಿಕೆ) ನಿಯಮ ಹಾಗೂ 1972 ರ ವನ್ಯಜೀವಿ ಸಂರಕ್ಷಣಾ ನಿಯಮಗಳನ್ನು ಉಲ್ಲಂಘಿಸಿರುವ ಕಾರಣ ಸೇವೆಯಿಂದ ತಕ್ಷಣ ಅಮಾನತುಗೊಳ್ಳುವಂತೆ ಆದೇಶ ಹೊರಡಿಸಿದೆ.
1972 ರ ವನ್ಯಜೀವಿ ಸಂರಕ್ಷಣಾ ಕಾಯಿದೆ ಬಗ್ಗೆ
ಭಾರತ ಸರ್ಕಾರವು ವನ್ಯಜೀವಿಗಳ ರಕ್ಷಣೆ, ಬೇಟೆ ನಿಯಂತ್ರಣ ಮತ್ತು ಜೀವವೈವಿಧ್ಯದ ಸಂರಕ್ಷಣೆಗಾಗಿ 1972 ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ (Wild Life Protection Act 1972) ಯನ್ನು ಜಾರಿಗೆ ತಂದಿತು. ಈ ಕಾಯ್ದೆಯು ದೇಶದಾದ್ಯಂತ ಕಾಡು ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯ ಪ್ರಭೇದಗಳಿಗೆ ಕಾನೂನಾತ್ಮಕ ರಕ್ಷಣೆಯನ್ನು ಒದಗಿಸುತ್ತದೆ.
ಇದರ ಮುಖ್ಯ ಉದ್ದೇಶವೆಂದರೆ ಅಳಿವಿನಂಚಿನಲ್ಲಿರುವ ಅಪರೂಪದ ಪ್ರಾಣಿ ಮತ್ತು ಪಕ್ಷಿಗಳ ಅಕ್ರಮ ಬೇಟೆ, ಹತ್ಯೆ ಮತ್ತು ಅವುಗಳ ಚರ್ಮ, ಕೊಂಬು, ದಂತ ಮುಂತಾದ ಅಂಗಾಂಗಗಳ ಕಳ್ಳಸಾಗಣೆಯನ್ನು ಸಂಪೂರ್ಣವಾಗಿ ತಡೆಗಟ್ಟುವುದು. ಈ ಕಾಯ್ದೆಯು ವನ್ಯಜೀವಿಗಳ ರಕ್ಷಣೆಯ ತೀವ್ರತೆಗೆ ಅನುಗುಣವಾಗಿ ವಿವಿಧ ಅನುಸೂಚಿಗಳನ್ನು ಹೊಂದಿದ್ದು, ಅತ್ಯಂತ ಅಪರೂಪದ ಪ್ರಾಣಿಗಳನ್ನು ಕೊಲ್ಲುವ ಅಥವಾ ಹಾನಿ ಮಾಡುವ ಅಪರಾಧಿಗಳಿಗೆ ಕಠಿಣ ಜೈಲು ಶಿಕ್ಷೆ ಮತ್ತು ಭಾರಿ ದಂಡವನ್ನು ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಿದೆ.
ಈ ಕಾಯ್ದೆಯ ಅಡಿಯಲ್ಲಿ ರಾಷ್ಟ್ರೀಯ ಉದ್ಯಾನವನಗಳು ವನ್ಯಜೀವಿ ಧಾಮಗಳು ಮತ್ತು ಹುಲಿ ಸಂರಕ್ಷಿತ ಪ್ರದೇಶಗಳನ್ನು ಸ್ಥಾಪಿಸಲು ಸರ್ಕಾರಕ್ಕೆ ಸಂಪೂರ್ಣ ಅಧಿಕಾರ ಸಿಕ್ಕಿದೆ. ಪ್ರಾಣಿಗಳ ನೈಸರ್ಗಿಕ ಆವಾಸಸ್ಥಾನಗಳನ್ನು ಮಾನವನ ಅತಿಕ್ರಮಣದಿಂದ ರಕ್ಷಿಸಲು ಮತ್ತು ಅವು ಮುಕ್ತವಾಗಿ ಬದುಕಲು ಸುರಕ್ಷಿತ ವಾತಾವರಣ ನಿರ್ಮಿಸಲು ಈ ಕಾಯ್ದೆ ಪ್ರಮುಖ ಪಾತ್ರ ವಹಿಸಿದೆ, (ಏಜನ್ಸೀಸ್).