ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಪವನ್ ಖೇರಾ
ನವದೆಹಲಿ: ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ವಿರುದ್ಧ ವಿದೇಶಿ ಪಾಸ್‌ಪೋರ್ಟ್ ಮತ್ತು ವಿದೇಶದಲ್ಲಿ ಕೋಟ್ಯಂತರ ರೂ. ಹಣ ಹೂಡಿಕೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರು, ನವದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ(Pawan Khera) ನಿವಾಸದ ಮೇಲೆ ದಾಳಿ ಮಾಡಿ ಶೋಧ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಪವನ್ ಖೇರಾ ಮಾಡಿದ್ದ ಆರೋಪವನ್ನು ಅಲ್ಲಗೆಳೆದಿರುವ ಸಿಎಂ ಶರ್ಮಾ ಅವರ ಪತ್ನಿ ರಿನಿಕಿ ಭೂಯಾನ್ ಶರ್ಮಾ ಅವರು. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಈ ಹಿನ್ನೆಲೆ ನಾಲ್ವರು ಸದಸ್ಯರ ಅಸ್ಸಾಂ ಪೊಲೀಸ್ ತಂಡವು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ದಾಳಿ ಮಾಡಿದೆ ಎನ್ನಲಾಗಿದೆ.
ಅಸ್ಸಾಂ ಪೊಲೀಸರ ದಾಳಿ ವೇಳೆ ಪವನ್ ಖೇರಾ ಮನೆಯಲ್ಲಿ ಇರಲಿಲ್ಲ. ಅವರಿಗಾಗಿ ಮನೆಯಲ್ಲಿಯೇ ಪೊಲೀಸರು ವಿಚಾರಣೆ ನಡೆಸಲು ಕಾಯುತ್ತಿದ್ದಾರೆ ಎನ್ನಲಾಗಿದೆ. ಚುನಾವಣೆಗೂ ಮುನ್ನ ಖೇರಾ ಮಾಡಿರುವ ಆರೋಪಗಳು ಅಸ್ಸಾಂನಲ್ಲಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿವೆ.
ಆರೋಪದ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿರುವ ಸಿಎಂ ಹಿಮಂತ ಬಿಸ್ವಾ ಶರ್ಮಾ, ಪವನ್ ಖೇರಾ ವಿರುದ್ಧ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಕಾಂಗ್ರೆಸ್ ನಾಯಕ ಖೇರಾ ಮಾಡಿರುವ ಆರೋಪಗಳು ಸುಳ್ಳು, ಈ ಕುರಿತಂತೆ ಈಗಾಗಲೇ ನಿನ್ನೆ ನನ್ನ ಪತ್ನಿ ಎಫ್ಐಆರ್ ದಾಖಲಿಸಿದ್ದಾರೆ. ಪೊಲೀಸರು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ನನಗೆ ಖಚಿತವಾಗಿದೆ ಎಂದು ಹೇಳಿದ್ದರು.
ಮುಂದುವರೆದು, ಕಾಂಗ್ರೆಸ್ ಪತ್ರಿಕಾಗೋಷ್ಠಿಗಳಲ್ಲಿ ಬಳಸಲಾದ ವಿಷಯಗಳು ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಗುಂಪುಗಳೊಂದಿಗೆ ಸಂಪರ್ಕ ಹೊಂದಿವೆ. ಕಳೆದ 10 ದಿನಗಳಲ್ಲಿ ಪಾಕಿಸ್ತಾನ ಚಾನೆಲ್ ಅಸ್ಸಾಂ ಚುನಾವಣೆಗೆ ಸಂಬಂಧಿಸಿದಂತೆ ಕನಿಷ್ಠ 11 ಟಾಕ್ ಶೋಗಳನ್ನು ಮಾಡಿದೆ. ಕಾಂಗ್ರೆಸ್ ಮಾಡಿದ ಆರೋಪಕ್ಕೂ ಪಾಕಿಸ್ತಾನಕ್ಕೂ ಸಂಬಂಧ ಇದೆ ಎಂದು ಆರೋಪಿಸಿದ್ದಾರೆ.
ಪವನ್ ಖೇರಾ ಮಾಡಿದ್ದ ಆರೋಪವೇನು?
ಭಾನುವಾರ ಸುದ್ದಿಗೊಷ್ಠಿ ನಡೆಸಿದ್ದ ಕಾಂಗ್ರೆಸ್ ನಾಯಕ ಪವನ್ ಖೇರಾ, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಎರಡು ಇಸ್ಲಾಮಿಕ್ ರಾಷ್ಟ್ರಗಳು ಸೇರಿದಂತೆ ಮೂರು ದೇಶಗಳ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದು, ದುಬೈನಲ್ಲಿ ಐಷಾರಾಮಿ ಆಸ್ತಿಗಳನ್ನು ಹೊಂದಿದ್ದಾರೆ. ಅಮೆರಿಕದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಸಿಎಂ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಮೂರು ಪಾಸ್‌ಪೋರ್ಟ್‌ಗಳಲ್ಲಿ ಒಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುಧಾಬಿಯಲ್ಲಿ ನೀಡಲಾದ ಗೋಲ್ಡನ್ ಕಾರ್ಡ್. ಎರಡನೆಯದು, ಆಂಟಿಗುವಾ ಮತ್ತು ಬಾರ್ಬುಡಾದ ಪಾಸ್‌ಪೋರ್ಟ್. ಮೂರನೇಯದು ಈಜಿಪ್ಟ್‌ನ ಪಾಸ್‌ಪೋರ್ಟ್ ಅನ್ನು ಹೊಂದಿದ್ದಾರೆ. ಜೊತೆಗೆ ದುಬೈನಲ್ಲಿ ಐಷಾರಾಮಿ ಆಸ್ತಿಗಳನ್ನು ಹೊಂದಿದ್ದು, ಅಮೆರಿಕದ ಕಂಪನಿಗಳಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ಹೇಳಿದ್ದರು (ಏಜೆನ್ಸೀಸ್).