ಫುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿ 
ದೇಶ

ನಾಳೆ ಫುಟ್ಬಾಲ್​ ದಂತಕತೆ ಲಿಯೋನಲ್ ಮೆಸ್ಸಿ ಭಾರತ ಪ್ರವಾಸ; ಮೋದಿ, ಕೊಹ್ಲಿ ಸೇರಿ ಅನೇಕ ಸೆಲೆಬ್ರಿಟಿ ಭೇಟಿ; ಸಿಎಂ ರೇವಂತ್ ರೆಡ್ಡಿ ಜೊತೆ ಆಟ | Lionel Messi

ನವದೆಹಲಿ: ಫುಟ್ಬಾಲ್ ದಂತಕತೆ, ತಮ್ಮ ವೃತ್ತಿಜೀವನದ 48 ನೇ ಟ್ರೋಫಿಯನ್ನು ಗೆದ್ದ ಅರ್ಜೆಂಟೀನಾದ ಆಟಗಾರ ಲಿಯೋನೆಲ್ ಮೆಸ್ಸಿ(Lionel Messi) GOAT ಇಂಡಿಯಾ ಟೂರ್-2025 ಭಾಗವಾಗಿ ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದು, ಇಂದು ಮಧ್ಯರಾತ್ರಿ 1.30ರ ಸುಮಾರಿಗೆ ಕೋಲ್ಕತ್ತಾಗೆ ಆಗಮಿಸಲಿದ್ದಾರೆ.
ಡಿಸೆಂಬರ್ 13, 14 ಹಾಗೂ 15 ರಂದು ದೇಶದ ನಾಲ್ಕು ನಗರಗಳಲ್ಲಿ ಮೆಸ್ಸಿ ಪ್ರವಾಸ ಮಾಡಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ವಿರಾಟ ಕೊಹ್ಲಿ ಹಲವಾರು ಸೆಲೆಬ್ರಿಟಿಗಳು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದಾರೆ.
ಮೊದಲು ನಾಳೆ ಬೆಳಗ್ಗೆ ಕೋಲ್ಕತ್ತಾದಿಂದ ಪ್ರವಾಸ ಆರಂಭಿಸುವ ಮೆಸ್ಸಿ ಸಂಜೆ ಹೈದರಾಬಾದ್, ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿ, ಡಿ. 14ರಂದು ಮುಂಬೈಗೆ ಬಳಿಕ ಡಿ. 15ರಂದು ದೆಹಲಿಗೆ ಭೇಟಿ ನೀಡಲಿದ್ದಾರೆ.
ನಾಳೆ ಬೆಳಿಗ್ಗೆ 9:30ರಿಂದ 10.30ರವರೆಗೆ ಮೆಸ್ಸಿ ಕೋಲ್ಕತ್ತದಲ್ಲಿ ಸೌರವ್ ಗಂಗೂಲಿ, ಸಿಎಂ ಮಮತಾ ಬ್ಯಾನರ್ಜಿ ಸೇರಿ ಅನೇಕ ಜನರನ್ನು ಭೇಟಿ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಾಲ್ಟ್ ಲೇಕ್ ಕ್ರೀಡಾಂಗಣ ಆಗಮಿಸಲಿದ್ದು, ಅಲ್ಲಿ ಸ್ನೇಹಪರ ಪಂದ್ಯವನ್ನಾಡಲಿದ್ದಾರೆ. ಇದೇ ವೇಳೆ ಕ್ರೀಡಾಂಗಣದಲ್ಲಿ ಮೆಸ್ಸಿಯ 70 ಅಡಿ ಎತ್ತರದ ಬೃಹತ್ ಪ್ರತಿಮೆ ಅನಾವರಣಗೊಳ್ಳಲಿದೆ.
ಮಧ್ಯಾಹ್ನ 2 ಗಂಟೆಗೆ ಹೈದರಾಬಾದ್‌ಗೆ ತೆರಳುವ ಮೆಸ್ಸಿ, ಸಂಜೆ ಉಪ್ಪಾಳ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ 7v7 ಫುಟ್ಬಾಲ್ ಪಂದ್ಯದಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಜೊತೆ ಸ್ನೇಹಪರ ಪ್ರದರ್ಶನ ಪಂದ್ಯವಾಡಲಿದ್ದಾರೆ. ಸಂಜೆ ಮೆಸ್ಸಿ ಗೌರವಾರ್ಥ ಸಂಗೀತ ಕಾರ್ಯಕ್ರಮವೂ ನಡೆಯಲಿದೆ.
ಬಳಿಕ ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದು, ಡಿ. 14ರ ಬೆಳಗ್ಗೆ ಮುಂಬೈಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಅವರು ದಾನಕ್ಕಾಗಿ ಹಣವನ್ನು ಸಂಗ್ರಹಿಸಲು ಫ್ಯಾಷನ್ ಶೋನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಹೆಚ್ಚುವರಿ ಹಣವನ್ನು ಸಂಗ್ರಹಿಸಲು ಅವರು 2022ರ ವಿಶ್ವಕಪ್‌ನ ಆಯ್ದ ಸ್ಮರಣಿಕೆಗಳನ್ನು ಹರಾಜು ಹಾಕಲಿದ್ದಾರೆ. ಮುಂಬೈ ಲೆಗ್‌ನಲ್ಲಿ ಲೂಯಿಸ್ ಸುವಾರೆಜ್ ಒಳಗೊಂಡ ಸ್ಪ್ಯಾನಿಷ್ ಸಂಗೀತ ಕಾರ್ಯಕ್ರಮವೂ ಸೇರಿದೆ. ಧೋನಿ, ಕರೀಷ್ಮಾ ಕಪೂರ್ ಸೇರಿ ಅನೇಕ ಸೆಲೆಬ್ರಿಟಿಗಳು ಭೇಟಿಯಾಗುವ ನಿರೀಕ್ಷೆ ಇದೆ.
GOAT ಪ್ರವಾಸವು ಡಿ. 15ರಂದು ನವದೆಹಲಿಯಲ್ಲಿ ಮುಕ್ತಾಯಗೊಳ್ಳಲಿದ್ದು, ಅಲ್ಲಿ ಮೆಸ್ಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ (ಏಜೆನ್ಸೀಸ್).