ಅಬುಧಾಬಿ: ದುಬೈನಲ್ಲಿ ವಾಸಿಸುವ ಭಾರತೀಯ ವ್ಯಕ್ತಿಯೊಬ್ಬರು ಆರ್ಡರ್ ಮಾಡಿದ ಆಹಾರವನ್ನು ಒಬ್ಬ ಡೆಲಿವರಿ ಬಾಯ್ ಬದಲಿಗೆ (Robot Food Delivery) 'ರೋಬೋಟ್' ಹೊತ್ತು ತಂದಾಗ ಆಶ್ಚರ್ಯಚಕಿತನಾಗಿದ್ದು, ತಮ್ಮ ವಿಶಿಷ್ಟ ಅನುಭವದ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಆರ್ಡ್ರ್ ಮಾಡಿದಾಗ ವಿಳಾಸ ಕೇಳಲು ಅಥವಾ ಲೊಕೇಶನ್ ಸಿಗದಿದ್ದಾಗ ಡೆಲಿವರಿ ಪಾರ್ಟ್‌ನರ್‌ನಿಂದ ಕನಿಷ್ಠ ಒಂದೆರಡು ಕರೆಗಳಾದರೂ ಬರುತ್ತವೆ. ಆದರೆ, ಇಲ್ಲಿ ಮಾನವನ ಯಾವುದೇ ಸೂಚನೆಗಳಿಲ್ಲದೇ, ಸರಿಯಾದ ಸ್ಥಳಕ್ಕೆ ಆರ್ಡರ್ ಹೇಗೆ ತಲುಪಿತು ಎಂಬುದನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲೇನಿದೆ?
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ವಿಳಾಸ ಅಥವಾ ಲೊಕೇಶನ್ ಕೇಳಲು ಯಾವುದೇ ಕರೆಗಳು ನನಗೆ ಬರಲಿಲ್ಲ ಎಂದು ಆ ವ್ಯಕ್ತಿ ವಿವರಿಸಿದ್ದಾರೆ. ಬದಲಿಗೆ ಅಪ್ಲಿಕೇಶನ್ ಮೂಲಕ ಆರ್ಡರ್ ತಲುಪಿದೆ ಎಂದು ತಿಳಿಯಿತು. ಈ ವೇಳೆ ಹೊರಗೆ ಹೋದಾಗ ರೋಬೋಟ್ ತನ್ನ ಆಹಾರದೊಂದಿಗೆ ಕಾಯುತ್ತಿರುವುದನ್ನು ನೋಡಬಹುದು.
ಆದಾಗ್ಯೂ, ತಮ್ಮ ಈ ಅನುಭವವನ್ನು ಶುದ್ಧ ತಂತ್ರಜ್ಞಾನ ಎಂದು ವಿವರಿಸಿದ್ದು, ಯಾವುದೇ ಹಸ್ತಚಾಲಿತ ಸಮನ್ವಯವಿಲ್ಲದೆ ಸ್ವಯಂಚಾಲಿತ ವ್ಯವಸ್ಥೆಗಳಿಂದ ಇವು ಮನೆ ಮನೆಗೆ ಡೆಲಿವರಿಯನ್ನು ತಲುಪಿಸುತ್ತವೆ. ಗ್ರಾಹಕರು ಬಂದ ನಂತರವೇ ರೋಬೋಟ್ ತನ್ನ ಶೇಖರಣಾ ಸ್ಥಳವನ್ನು ತೆರೆಯುವುದನ್ನು ತೋರಿಸಿದ್ದಾರೆ.
ರೋಬೋಟ್ ವಿತರಣೆ ಹೇಗೆ ಕೆಲಸ ಮಾಡುತ್ತದೆ
ಈ ವಿತರಣಾ ರೋಬೋಟ್ ಯಾವುದೇ ಮಾನವ ಚಾಲಕನ ನೆರವಿಲ್ಲದೆ, ಸುಧಾರಿತ ಸೆನ್ಸಾರ್‌ಗಳು ಮತ್ತು ಎಐ (AI) ತಂತ್ರಜ್ಞಾನ ಬಳಸಿ ಜನನಿಬಿಡ ಪಾದಚಾರಿ ಮಾರ್ಗಗಳಲ್ಲಿ ಸುರಕ್ಷಿತವಾಗಿ ಸಂಚರಿಸುತ್ತದೆ. ಜಿಪಿಎಸ್ (GPS) ಮೂಲಕ ನಿಖರವಾದ ವಿಳಾಸವನ್ನು ಪತ್ತೆಹಚ್ಚುವ ಈ ರೋಬೋಟ್, ನೇರವಾಗಿ ಗ್ರಾಹಕನ ಮನೆ ಬಾಗಿಲಿಗೆ ಬಂದು ನಿಲ್ಲುತ್ತದೆ.
ಗ್ರಾಹಕರು ರೋಬೋಟ್ ತಮ್ಮ ಮನೆಯ ಬಾಗಿಲ ಬಳಿ ಬಂದಿದೆ ಎಂದು ದೃಢಪಡಿಸಿದ ನಂತರ ಆಹಾರವಿರುವ ಸುರಕ್ಷಿತ ವಿಭಾಗವು (Compartment) ತಾನಾಗಿಯೇ ಅನ್ಲಾಕ್ ಆಗುತ್ತದೆ. ನಂತರ ಆಹಾರವನ್ನು ಹಸ್ತಾಂತರಿಸಿ ಮುಂದಿನ ಕಾರ್ಯಕ್ಕೆ ಸ್ವತಂತ್ರವಾಗಿ ಮರಳುತ್ತದೆ.
ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು ಭಾರತದಲ್ಲಿ ನಮಗೆ ಇದು ಬೇಕು. ನಮ್ಮ ಪಾರ್ಸೆಲ್‌ಗಳನ್ನು ಕದ್ದು ಹಾನಿ ಮಾಡುವವರಿಗೆ ಇದು ದೊಡ್ಡ ಫೂ" ಎಂದು ಬರೆದರೆ, ಮತ್ತೊಬ್ಬರು ಅದು ತುಂಬಾ ಚೆನ್ನಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ (ಏಜೆನ್ಸೀಸ್).