Follow the alternative method.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚುತ್ತಿರುವುದು ಮತ್ತು ಮಧ್ಯಪ್ರಾಚ್ಯದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್ಜಿ ದರಗಳನ್ನು ಏರಿಸಿರುವುದು ಆರ್ಥಿಕ ಅನಿವಾರ್ಯತೆಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ತೈಲ ಕಂಪನಿಗಳು ಅನುಭವಿಸುತ್ತಿದ್ದ ನಷ್ಟವನ್ನು ಕಡಿಮೆ ಮಾಡಲು ಮತ್ತು ದೇಶದ ಹಣಕಾಸಿನ ಸ್ಥಿರತೆಯನ್ನು ಕಾಯ್ದುಕೊಳ್ಳಲು ಈ ಕ್ರಮ ಅಗತ್ಯವಾಗಿತ್ತು ಎಂದು ಸರ್ಕಾರ ಪ್ರತಿಪಾದಿಸಿದೆ. ಆದರೆ, ಈ ಹಠಾತ್ ದರ ಏರಿಕೆಯು ಕೋವಿಡ್ ನಂತರ ಚೇತರಿಸಿಕೊಳ್ಳುತ್ತಿರುವ ಸಾಮಾನ್ಯ ಜನರ ಮತ್ತು ಮಧ್ಯಮ ವರ್ಗದವರ ಮಾಸಿಕ ಬಜೆಟ್ ಮೇಲೆ ನೇರ ಪರಿಣಾಮ ಬೀರಲಿದೆ. ಸಾರಿಗೆ ವೆಚ್ಚ ಹೆಚ್ಚಾಗುವುದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಆತಂಕವೂ ಸಾರ್ವಜನಿಕರಲ್ಲಿದೆ. ಸರ್ಕಾರವು ಜಾಗತಿಕ ಸವಾಲುಗಳನ್ನು ನಿರ್ವಹಿಸುವ ಜತೆಗೆ, ಸಾರ್ವಜನಿಕರ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸಲು ತೆರಿಗೆ ಕಡಿತದಂತಹ ಪರ್ಯಾಯ ಕ್ರಮಗಳ ಮೂಲಕ ಪರಿಹಾರ ನೀಡುವತ್ತ ಗಮನ ಹರಿಸಬೇಕಿದೆ. ರಾಜ್ಯ ಸರ್ಕಾರಗಳು ಕೂಡ ಇಂತಹ ಪರಿಸ್ಥಿತಿಯಲ್ಲಿ ತಮ್ಮ ಪಾಲಿನ ತೆರಿಗೆ ಕಡಿತಕ್ಕೆ ಮುಂದಾಗಬೇಕಿದೆ.
ಭಾರತ ಕಚ್ಚಾ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ ಮತ್ತು ಇದಕ್ಕಾಗಿ ವರ್ಷಕ್ಕೆ 11 ಲಕ್ಷ ಕೋಟಿ ರೂಪಾಯಿಗಳಷ್ಟು ಭಾರಿ ಮೊತ್ತವನ್ನು ವೆಚ್ಚ ಮಾಡುತ್ತಿದೆ. ಹಾಗಾಗಿಯೇ, ವಿದೇಶಿ ವಿನಿಮಯ ಉಳಿಸಲು ಪ್ರಧಾನಿ ನರೇಂದ್ರ ಮೋದಿ ಮಿತವ್ಯಯದ ಸಂದೇಶ ನೀಡಿದ್ದಾರೆ. ಇಂಥ ಸಂಕಷ್ಟದ ಸಂದರ್ಭದಲ್ಲಿ ಇಂಥ ಕ್ರಮಗಳೇನೋ ಅಗತ್ಯ ಎಂಬುದು ಸರಿಯೇ. ಆದರೆ, ಬೆಲೆಯೇರಿಕೆಯ ಭಾರದಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸ್ಥಿತಿಯನ್ನು ಕೇಂದ್ರ, ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕಿದೆ. ಇಂಥ ಸಂದರ್ಭದಲ್ಲಿ ರಾಜಕೀಯ ಆರೋಪ, ಪ್ರತ್ಯಾರೋಪಗಳನ್ನು ಬದಿಗಿರಿಸಿ, ಜನರ ಹಿತವನ್ನು ರಕ್ಷಿಸುವ ಮತ್ತು ಅವರ ಸಂಕಷ್ಟಗಳಿಗೆ ಸ್ಪಂದಿಸುವ ತುರ್ತು ಅಗತ್ಯವಿದೆ.
ಏಪ್ರಿಲ್ನಲ್ಲಿ ಆಹಾರ ಹಣದುಬ್ಬರ 3.87%ರಿಂದ 4.2%ಕ್ಕೆ ತಲುಪಿದೆ. ಸಣ್ಣ ಹೋಟೆಲ್ಗಳಿಂದ ಹಿಡಿದು, ದೊಡ್ಡ ರೆಸ್ಟೋರೆಂಟ್ಗಳವರೆಗೂ ತಿಂಡಿ, ಊಟದ ದರ ದುಬಾರಿಯಾಗಿದೆ. ಮತ್ತೊಂದೆಡೆ, ಸಣ್ಣ ವ್ಯಾಪಾರಿಗಳು ಕೂಡ ಬೆಲೆಯೇರಿಕೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಗಟು ಹಣದುಬ್ಬರವು 42 ತಿಂಗಳ ಗರಿಷ್ಠ ಮಟ್ಟವಾದ ಶೇಕಡ 8.3ಕ್ಕೆ ಏರಿಕೆಯಾಗಿದೆ. ಕೈಗಾರಿಕೆಗಳ ಉತ್ಪಾದನಾ ವೆಚ್ಚ ಏರಿಕೆಯಾಗಿರುವುದರಿಂದ, ನಷ್ಟದ ಭೀತಿ ಕಾಡುತ್ತಿದೆ. ಹೀಗೆ ಅಷ್ಟದಿಕ್ಕುಗಳಿಂದಲೂ ಬೆಲೆಯೇರಿಕೆಯ ಪ್ರಹಾರವನ್ನು ಎದುರಿಸುವ ಸನ್ನಿವೇಶ ಎದುರಾಗಿದೆ. ಅದರಲ್ಲೂ, ಪೆಟ್ರೋಲ್ ಮತ್ತು ಡೀಸೆಲ್ನ ಬೆಲೆ ಏರಿಕೆ ಹಲವು ವಲಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸುವಂಥ ದಿಟ್ಟ ಮತ್ತು ಸಕಾಲಿಕ ಕ್ರಮಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳು ಮುಂದಾಗಬೇಕು. ಬೆಲೆಯೇರಿಕೆಯ ಭಾರ ಕಡಿಮೆಗೊಳಿಸಲು ಮತ್ತು ಶ್ರೀಸಾಮಾನ್ಯರ ಆರ್ಥಿಕ ಸ್ಥಿತಿ ಮತ್ತಷ್ಟು ಹಳಿ ತಪ್ಪದಂತೆ ಮಾಡಲು ಎಲ್ಲ ಅಗತ್ಯವಾದ ಪರ್ಯಾಯ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು.