ಚಂಡೀಗಢ: ಮಹಿಳೆಯರ ವಿರುದ್ಧದ ಅಸಭ್ಯ ವರ್ತನೆಗಳನ್ನು ಕೇವಲ 'ತುಂಟಾಟ' ಎಂದು ನಿರ್ಲಕ್ಷಿಸುವ ಕಾಲ ಮುಗಿದಿದೆ. ಮಹಿಳೆಯ ಸಮ್ಮತಿಯಿಲ್ಲದೆ ಆಕೆಗೆ 'ಫ್ಲೈಯಿಂಗ್ ಕಿಸ್' (Flying Kiss) ನೀಡುವುದು ಅಥವಾ 'ಕಣ್ಣು ಹೊಡೆಯುವುದು' (Winking) ಕೂಡ ಲೈಂಗಿಕ ಕಿರುಕುಳದ ವ್ಯಾಪ್ತಿಗೆ ಬರುತ್ತದೆ ಎಂದು ಚಂಡೀಗಢದ ಜಿಲ್ಲಾ ನ್ಯಾಯಾಲಯವೊಂದು ಮಹತ್ವದ ತೀರ್ಪು ನೀಡಿದೆ. ಈ ಕೃತ್ಯವು ಮಹಿಳೆಯ ವೈಯಕ್ತಿಕ ಘನತೆಯನ್ನು ಉಲ್ಲಂಘಿಸುತ್ತದೆ ಎಂದು ಕೋರ್ಟ್ ಹೇಳಿದೆ.
ಘಟನೆ ನಡೆದಿದ್ದು 2021ರ ಆಗಸ್ಟ್ 28ರಂದು. ಚಂಡೀಗಢದ ನಿವಾಸಿಯೊಬ್ಬರು ಬೆಳಗ್ಗೆ 10:30ರ ಸುಮಾರಿಗೆ ತಮ್ಮ ಮನೆಯ ಮುಂದೆ ಕಸ ಗುಡಿಸುತ್ತಿದ್ದಾಗ, ಅಶೋಕ್ ಕುಮಾರ್ (62) ಎಂಬ ವ್ಯಕ್ತಿ ಅವರ ಬಳಿ ಬಂದು ಅಸಭ್ಯವಾಗಿ ವರ್ತಿಸಿದ್ದಾನೆ. ಆಕೆಯನ್ನು ನೋಡಿ ಕಣ್ಣು ಹೊಡೆಯುವುದು, ಫ್ಲೈಯಿಂಗ್ ಕಿಸ್ ನೀಡುವುದು ಮಾತ್ರವಲ್ಲದೆ, ಆಕೆಯತ್ತ 500 ರೂಪಾಯಿ ನೋಟನ್ನು ಎಸೆದು ಲೈಂಗಿಕವಾಗಿ ಕೆಣಕಿದ್ದಾನೆ.
ಮಹಿಳೆ ಸಿಟ್ಟಿನಿಂದ ಕಿರಿಚಿದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದ. ಆರಂಭದಲ್ಲಿ ಮುಜುಗರದಿಂದ ಸುಮ್ಮನಿದ್ದ ಮಹಿಳೆ, ನಂತರ ಆರೋಪಿಯ ಕುಟುಂಬದವರನ್ನು ಪ್ರಶ್ನಿಸಿದಾಗ ಅವರು ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರಿಂದ ನೊಂದ ಮಹಿಳೆ ಆಗಸ್ಟ್ 31ರಂದು ಪೊಲೀಸ್ ದೂರು ದಾಖಲಿಸಿದ್ದರು.
ನ್ಯಾಯಾಲಯದ ಕಟು ಎಚ್ಚರಿಕೆ
ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (CJM) ಸಚಿನ್ ಯಾದವ್ ಅವರು ಈ ಪ್ರಕರಣದ ವಿಚಾರಣೆ ನಡೆಸಿ ಜನೆವರಿ 28(2026)ರಂದು ಅಂತಿಮ ತೀರ್ಪು ನೀಡಿದ್ದಾರೆ. ವಿಚಾರಣೆ ವೇಳೆ ಆರೋಪಿ ಅಶೋಕ್ ಕುಮಾರ್ ತನ್ನ ತಪ್ಪನ್ನು ಮರೆಮಾಚಲು "ನಾನು ಮೊಮ್ಮಗನಿಗೆ ಐಸ್‌ಕ್ರೀಮ್ ಕೊಡಿಸಲು ಹೋದಾಗ ಹಣ ಆಕಸ್ಮಿಕವಾಗಿ ಬಿದ್ದಿದೆ" ಎಂಬ ಕುಂಟು ನೆಪ ಹೇಳಿದ್ದ. ಆದರೆ ಸತತ ವಿಚಾರಣೆ ಮತ್ತು ಸಾಕ್ಷ್ಯಾಧಾರಗಳ ಮುಂದೆ ಇದು ಸುಳ್ಳೆಂದು ಸಾಬೀತಾಯಿತು.
ನ್ಯಾಯಾಲಯದ ಪ್ರಮುಖ ಅಂಶಗಳು
ಫ್ಲೈಯಿಂಗ್ ಕಿಸ್ ಮತ್ತು ಕಣ್ಣು ಹೊಡೆಯುವುದು ಕೇವಲ ದೈಹಿಕ ಸ್ಪರ್ಶವಲ್ಲದಿದ್ದರೂ, ಇದು ಅಶಾಬ್ಧಿಕ ಲೈಂಗಿಕ ಕಿರುಕುಳವಾಗಿದೆ. ಇದು ಮಹಿಳೆಯ ಆತ್ಮಗೌರವಕ್ಕೆ ಧಕ್ಕೆ ತರುತ್ತದೆ. ಆರೋಪಿಯನ್ನು ಐಪಿಸಿ ಸೆಕ್ಷನ್ 354A (ಲೈಂಗಿಕ ಕಿರುಕುಳ) ಮತ್ತು 509 (ಮಹಿಳೆಯ ಶೀಲಕ್ಕೆ ಅಪಮಾನ) ಅಡಿಯಲ್ಲಿ ದೋಷಿ ಎಂದು ಘೋಷಿಸಲಾಗಿದೆ. 62 ವರ್ಷದ ಆರೋಪಿಗೆ 10,000 ರೂಪಾಯಿ ದಂಡ ವಿಧಿಸಲಾಗಿದ್ದು, ಈ ಹಣವನ್ನು ಸಂತ್ರಸ್ತ ಮಹಿಳೆಗೆ ಪರಿಹಾರವಾಗಿ ನೀಡಲು ಆದೇಶಿಸಿದೆ. ಅಲ್ಲದೆ, 6 ತಿಂಗಳ ಕಾಲ ಸನ್ನಡತೆಯನ್ನು ಕಾಪಾಡಿಕೊಳ್ಳುವಂತೆ ಪ್ರೊಬೇಷನ್ ಬಾಂಡ್ ನೀಡಲಾಗಿದೆ.
ಸಮಾಜಕ್ಕೆ ದೊಡ್ಡ ಸಂದೇಶ
ಈ ತೀರ್ಪು ಬೀದಿ ಕಾಮಣ್ಣರಿಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರನ್ನು ಕೆಣಕುವವರಿಗೆ ದೊಡ್ಡ ಎಚ್ಚರಿಕೆಯಾಗಿದೆ. "ಕೇವಲ ಮುಟ್ಟಿದರೆ ಮಾತ್ರ ಕಿರುಕುಳ" ಎಂಬ ತಪ್ಪು ಕಲ್ಪನೆಯನ್ನು ಇದು ಹೋಗಲಾಡಿಸಿದೆ. ಮಹಿಳೆಯರಿಗೆ ಮುಜುಗರ ಉಂಟುಮಾಡುವ ಯಾವುದೇ ಸನ್ನೆ ಅಥವಾ ಮಾತು ಕಾನೂನಿನ ಅಡಿಯಲ್ಲಿ ಗಂಭೀರ ಅಪರಾಧ ಎಂಬುದನ್ನು ನ್ಯಾಯಾಲಯ ಸ್ಪಷ್ಟಪಡಿಸಿದೆ,(ಏಜೆನ್ಸೀಸ್).