ಕೇಂದ್ರ ಸಚಿವ ನಿತಿನ್ ಗಡ್ಕರಿ, ಸಾಂದರ್ಭಿಕ ಚಿತ್ರ  
ದೇಶ

ಸಂಚಾರ ದಟ್ಟಣೆ ತಗ್ಗಿಸಲು ಫ್ಲೈಯಿಂಗ್ ಬಸ್: ಸಚಿವ ನಿತಿನ್ ಗಡ್ಕರಿ

ನವದೆಹಲಿ: ದೇಶದ ನಗರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ನಿರ್ವಹಿಸಲು ಹಾರುವ ಬಸ್​ಗಳನ್ನು ಪರಿಚಯಿಸುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ. 
ಮಂಗಳವಾರ ಲಖನೌ-ಕಾನ್ಪುರ ಎಕ್ಸ್​ಪ್ರೆಸ್​ವೇ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಗಡ್ಕರಿ ‘ದೀರ್ಘಕಾಲದ ನಗರ ಸಂಚಾರ ದಟ್ಟಣೆ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುವ ಭವಿಷ್ಯದ ಸಮೂಹ ಕ್ಷಿಪ್ರ ವಿದ್ಯುತ್ ಚಾಲಿತ ಸಾರಿಗೆ ತಮ್ಮ ಯೋಜನೆಯ ಭಾಗವಾಗಿದೆ. ಭವಿಷ್ಯದ ಸಮೂಹ ಸಾರಿಗೆಗಳಲ್ಲಿ ನೀರಿನ ಮೇಲೆ ಇಳಿಯುವ ವಿಮಾನಗಳು (ಸೀಪ್ಲೇನ್) ಮತ್ತು ಆಧುನಿಕ ರೋಪ್​ವೇ ವ್ಯವಸ್ಥೆಯನ್ನು ಹೊಂದಿರಲಿದೆ. 
ಇದರೊಂದಿಗೆ ಹಾರುವ ಬಸ್​ಗಳನ್ನು ಪರಿಚಯಿಸಲಾಗುವುದು. ಇದು ಸಾಮಾನ್ಯ ಬಸ್​ಗಳಿಗೆ ಹೋಲಿಸಿದರೆ ವೈಮಾನಿಕ ಪಾಡ್ ಆಧಾರಿತ ಸೇವೆಯಾಗಿದ್ದು, ಇದು ವರ್ಟಿಕಲ್ ಟೇಕ್​ಆಫ್ ಮತ್ತು ಲ್ಯಾಂಡಿಂಗ್ ಮಾಡಲಿದೆ. ಹೈಪರ್​ಲೂಪ್​ಗಳು, ಕೇಬಲ್ ಬಸ್​ಗಳು ಮತ್ತು ಪ್ಯೂನಿಕುಲರ್ ರೈಲ್ವೆಗಳಂತಹ ಮೂಲಸೌಕರ್ಯ ಬೆಳವಣಿಗೆ ಜೊತೆಗೆ ಸಾರ್ವಜನಿಕ ಸಾರಿಗೆಯನ್ನು ಆಧುನೀಕರಿಸುವ ವ್ಯಾಪಕ ಪ್ರಯತ್ನದ ಭಾಗವಾಗಿದೆ’ ಎಂದರು. 
ಸಂಚಾರ ದಟ್ಟಣೆ ನಿರ್ವಹಣೆಗೆ ಹಲವು ಪರ್ಯಾಯ ಸಾರಿಗೆ ವ್ಯವಸ್ಥೆಗಳನ್ನು ಪರಿಚಯಿಸಲು ಗಡ್ಕರಿ ಪ್ರಯತ್ನಿಸುತ್ತಿದ್ದಾರೆ. ಇದರ ಭಾಗವಾಗಿ ದೆಹಲಿಯ ಧೌಲಾ ಕುವಾನ್​ನಿಂದ ಮಾನೇಸರ್​ವರೆಗೆ ಸ್ಕೈ ಟ್ರಾನ್ಸಿಟ್ ಪಾಡ್ ವ್ಯವಸ್ಥೆಯನ್ನು ರೂಪಿಸುವುದು, ಕೇವಲ 30 ಸೆಕೆಂಡ್​ಗಳಲ್ಲಿ ರೀಚಾರ್ಜ್ ಆಗುವ 135 ಆಸನಗಳ ಸಾಮರ್ಥ್ಯದ ಎಲೆಕ್ಟ್ರಿಕ್ ಬಸ್​ಗಳನ್ನು ನಾಗಪುರದಂತಹ ನಗರಗಳಲ್ಲಿ ಪ್ರಾಯೋಗಿಕವಾಗಿ ಓಡಿಸಲು ಯೋಜನೆ ರೂಪಿಸುತ್ತಿದ್ದಾರೆ.

ದೂರು ರಾಜಕೀಯ ಪ್ರೇರಿತ

ದೇಶದಲ್ಲಿ ಇ20 ಪೆಟ್ರೋಲ್ ಕುರಿತು ಆಕ್ರೋಶ ವ್ಯಕ್ತವಾಗುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಗಡ್ಕರಿ ಈ ದೂರುಗಳು ರಾಜಕೀಯ ಪ್ರೇರಿತ, ಎಥನಾಲ್ ಬೆರೆತ ಪೆಟ್ರೋಲ್ನಿಂದ ಇಂಜಿನ್ಗೆ ಹಾನಿಯಾಗುತ್ತದೆ ಎಂಬುದನ್ನು ಸಾಬೀತುಪಡಿಸಲಿ. ಬ್ರೆಜಿಲ್ ಮತ್ತು ಅಮೆರಿಕದಲ್ಲಿ ಈಗಾಗಲೇ ಎಥನಾಲ್ ಬಳಕೆಯಲ್ಲಿದೆ ಎಂದು ತಿಳಿಸಿದರು.