ಸಾಂದರ್ಭಿಕ ಚಿತ್ರ 
ದೇಶ

ವಿಮಾನಗಳ ಅವ್ಯವಸ್ಥೆ: ಇಂಡಿಗೋ ವಿಮಾನಗಳ ಕಾರ್ಯಾಚರಣೆಯ ನಾಲ್ವರು ಫ್ಲೈಟ್ ಇನ್ಸ್​ಪೆಕ್ಟರ್​ಗಳನ್ನು ವಜಾಗೊಳಿಸಿದ ಡಿಜಿಸಿಎ | DGCA

ನವದೆಹಲಿ: ಇಂಡಿಗೋ ವಿಮಾನಗಳ ಪ್ರಯಾಣ ಅವ್ಯವಸ್ಥೆಯ ವಿರುದ್ಧದ ಕ್ರಮವಾಗಿ ಶುಕ್ರವಾರ(ಡಿ. 12) ಭಾರತದ ವಾಯುಯಾನ ನಿಯಂತ್ರಕ, ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA), ಇಂಡಿಗೋ ವಿಮಾನಯಾನ ಸಂಸ್ಥೆಯ ಸುರಕ್ಷತೆ ಮತ್ತು ಕಾರ್ಯಾಚರಣೆಯ ಅನುಸರಣೆಯನ್ನು ನೋಡಿಕೊಳ್ಳುತ್ತಿದ್ದ ನಾಲ್ವರು ವಿಮಾನ ನಿರೀಕ್ಷಕರನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ.
ವಿಮಾನಯಾನ ಸಂಸ್ಥೆಯ ತಪಾಸಣೆ ಮತ್ತು ಮೇಲ್ವಿಚಾರಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಬಿಗಿಯಾದ ಸುರಕ್ಷತಾ ನಿಯಮಗಳನ್ನು ಯೋಜಿಸಲು ವಿಫಲವಾದ ಇಂಡಿಗೋ ಸಂಸ್ಥೆ ಈ ತಿಂಗಳು ಸಾವಿರಾರು ವಿಮಾನ ಪ್ರಯಾಣಗಳನ್ನು ರದ್ದುಗೊಳಿಸಿತ್ತು.
ಇದರಿಂದಾಗಿ ದೇಶಾದ್ಯಂತ ಹತ್ತಾರು ಸಾವಿರ ಪ್ರಯಾಣಿಕರು ಏರ್​​ಪೋರ್ಟ್​​ನಲ್ಲಿ ಸಿಲುಕಿಕೊಂಡು ಪರದಾಡಿದರು. ಡಿ. 05 ರಂದು ಸುಮಾರು 1500 ನೂರು ಪ್ರಯಾಣಗಳನ್ನು ರದ್ದು ಪಡಿಸಿತ್ತು. ಬಳಿಕ ಅಂದಿನಿಂದ ಕಡಿಮೆಯಾಗಿದ್ದು, ಮಂಗಳವಾರ ಎಂದಿನಂತೆ ಕಾರ್ಯಾಚರಣೆ ಮುಂದುರೆದಿದೆ ಎಂದು ಸಂಸ್ಥೆ ತಿಳಿಸಿದೆ.
ಸಿಬ್ಬಂದಿ ಬಳಕೆ ಮತ್ತು ಮರುಪಾವತಿ ಸೇರಿದಂತೆ ವಿವಿಧ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಲು ಡಿಜಿಸಿಎ ಗುರುಗ್ರಾಮ್‌ನಲ್ಲಿರುವ ವಾಹಕ ಕಚೇರಿಯಲ್ಲಿ ಎರಡು ತಂಡಗಳನ್ನು ನಿಯೋಜಿಸಿದೆ. ಈ ಮೇಲ್ವಿಚಾರಣಾ ತಂಡಗಳು ಸಂಜೆ 6 ಗಂಟೆಯೊಳಗೆ ನಿಯಂತ್ರಕರಿಗೆ ದೈನಂದಿನ ವರದಿಯನ್ನು ಸಲ್ಲಿಸಲಿವೆ ಎನ್ನಲಾಗಿದೆ.
ಮೊದಲ ತಂಡವು ಒಟ್ಟು ವಿಮಾನಗಳ ಸಂಖ್ಯೆ, ಪೈಲಟ್ ಬಲ, ಸಿಬ್ಬಂದಿ ಬಳಕೆ (ಗಂಟೆಗಳಲ್ಲಿ), ತರಬೇತಿಯಲ್ಲಿರುವ ಸಿಬ್ಬಂದಿ, ವಿಭಜಿತ ಕರ್ತವ್ಯಗಳು, ಯೋಜಿತವಲ್ಲದ ರಜೆಗಳು, ಸ್ಟ್ಯಾಂಡ್‌ಬೈ ಸಿಬ್ಬಂದಿ, ದಿನಕ್ಕೆ ವಿಮಾನಗಳು ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಪರಿಣಾಮ ಬೀರುವ ಒಟ್ಟು ವಲಯಗಳ ಸಂಖ್ಯೆ ಮುಂತಾದ ಅಂಶಗಳನ್ನು ಪರಿಶೀಲಿಸುತ್ತಿದೆ.
ಎರಡನೇ ತಂಡವು ಬಿಕ್ಕಟ್ಟಿನಿಂದ ಉಂಟಾದ ಸಮಸ್ಯೆಗಳನ್ನು ಪರಿಶೀಲಿಸುತ್ತಿದೆ. ಇದರಲ್ಲಿ ಮರುಪಾವತಿ ಸ್ಥಿತಿ (ವಿಮಾನಯಾನ ಸಂಸ್ಥೆಯ ಕಡೆಯಿಂದ ಮತ್ತು ವೆಬ್‌ಸೈಟ್‌ಗಳು/ಏಜೆಂಟ್‌ಗಳಿಂದ), ನಾಗರಿಕ ವಿಮಾನಯಾನ ಅಗತ್ಯತೆಗಳ (CAR) ಅಡಿಯಲ್ಲಿ ಪ್ರಯಾಣಿಕರಿಗೆ ಪರಿಹಾರ, ಸಮಯಕ್ಕೆ ಸರಿಯಾಗಿ ಕಾರ್ಯಕ್ಷಮತೆ, ಕಳೆದುಹೋದ ಸಾಮಾನುಗಳನ್ನು ಹಿಂದಿರುಗಿಸುವುದು ಮತ್ತು ವಿವಿಧ ವಿಮಾನಗಳ ರದ್ದತಿ ಬಗ್ಗೆ ಪರಿಶೀಲಿಸುತ್ತಿವೆ (ಏಜೆನ್ಸೀಸ್).