ಮಸೂದೆಗೆ ಜೈ ಎಂದ ಎನ್​ಸಿಪಿ ವಿರುದ್ಧ 'ಕೈ' ಕೆಂಡಾಮಂಡಲ  
ದೇಶ

ಪ್ರಜಾಪ್ರಭುತ್ವ ನಾಶ ಮಾಡಿದವರ ಪಟ್ಟಿಯಲ್ಲಿ ಶರದ್ ಪವಾರ್ ಹೆಸರೂ ಇರುತ್ತೆ! ಮಸೂದೆಗೆ ಜೈ ಎಂದ ಎನ್​ಸಿಪಿ ವಿರುದ್ಧ 'ಕೈ' ಕೆಂಡಾಮಂಡಲ | Delimitation Bill

ಮುಂಬೈ: ಕ್ಷೇತ್ರ ಪುನರ್ವಿಂಗಡಣೆ (ಡಿಲಿಮಿಟೇಶನ್) ಕುರಿತ ಕೇಂದ್ರ ಸರ್ಕಾರದ ಪ್ರಸ್ತಾವಿತ ಮಸೂದೆಗೆ ಬೆಂಬಲ ನೀಡುವುದಾಗಿ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ-ಎಸ್‌ಪಿ) ಘೋಷಿಸಿರುವುದು ಇಂಡಿಯಾ ಒಕ್ಕೂಟದಲ್ಲಿ ದೊಡ್ಡ ಮಟ್ಟದಲ್ಲಿ ಬಿರುಕು ಮೂಡಿಸಿದೆ. ವಿಪಕ್ಷಗಳ ಪಾಳಯದ ನಿರ್ಧಾರ ದಿಕ್ಕರಿಸಿ, ಕೇಂದ್ರ ಸರ್ಕಾರದ ಮಸೂದೆಯನ್ನು ಬೆಂಬಲಿಸಲು ಮುಂದಾಗಿರುವ ಎನ್‌ಸಿಪಿ ನಿರ್ಧಾರದ ವಿರುದ್ಧ ಮಹಾರಾಷ್ಟ್ರ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಎನ್‌ಸಿಪಿ ನಡೆಯನ್ನು ಖಂಡಿಸಿರುವ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ವಿಜಯ್ ವಡೆಟ್ಟಿವಾರ್, ಶರದ್ ಪವಾರ್ ಅವರ ಪಕ್ಷ ಅಧಿಕಾರದಾಹಿಯಾಗಿದೆ ಎಂದು ಟೀಕಿಸಿದ್ದಾರೆ. ಶರದ್ ಪವಾರ್ ಅವರಿಗೆ ಜನರ ಬೆನ್ನಿಗೆ ಚೂರಿ ಹಾಕುವ ಇತಿಹಾಸವಿದೆ. ಅವರು ನೀರಿನಿಂದ ಹೊರಬಿದ್ದ ಮೀನಿನಂತಾಗಿದ್ದಾರೆ ಮತ್ತು ಅವರಿಗೆ ಯಾವುದೇ ನಿಜವಾದ ಸಿದ್ಧಾಂತವಿಲ್ಲ. ನಾವು ಪವಾರ್ ಅವರನ್ನು ರಾಜ್ಯಸಭೆಗೆ ಕಳುಹಿಸಿದ್ದೆವು, ಆದರೆ ಪ್ರಜಾಪ್ರಭುತ್ವದ ನಾಶಕ್ಕೆ ಕಾರಣರಾದವರ ಇತಿಹಾಸವನ್ನು ಬರೆಯುವಾಗ ಅವರ ಹೆಸರೂ ಆ ಪಟ್ಟಿಯಲ್ಲಿ ಖಂಡಿತ ಇರುತ್ತದೆ ಎಂದು ವಡೆಟ್ಟಿವಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಸಭಾ ಚುನಾವಣೆಯ ತ್ಯಾಗ ನೆನಪಿಸಿದ ಕಾಂಗ್ರೆಸ್!

ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಮಹಾ ಕಾಂಗ್ರೆಸ್​, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಅವರಿಗೆ ಈ ವರ್ಷದ ಆರಂಭದಲ್ಲಿ ನಡೆದ ರಾಜ್ಯಸಭಾ ಚುನಾವಣೆಯ ಬೆಂಬಲವನ್ನು ನೆನಪಿಸಿದೆ.

ಈ ವರ್ಷದ ಮಾರ್ಚ್‌ನಲ್ಲಿ ಮಹಾರಾಷ್ಟ್ರದ 7 ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲ್ಲಲು 36 ಮತಗಳ ಅಗತ್ಯವಿತ್ತು. ಆಗ ಎನ್‌ಸಿಪಿ (ಎಸ್‌ಪಿ) ಬಳಿ ಕೇವಲ 10 ಶಾಸಕರಿದ್ದರು. ಕಾಂಗ್ರೆಸ್ ಬಳಿ 16 ಮತ್ತು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಬಳಿ 20 ಶಾಸಕರಿದ್ದರು. ಸುಪ್ರಿಯಾ ಸುಳೆ ಅವರು ಖುದ್ದಾಗಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ತಮ್ಮ ತಂದೆಯ ಉಮೇದುವಾರಿಕೆಗೆ ಬೆಂಬಲ ಕೋರಿದ್ದರು.

85 ವರ್ಷದ ಹಿರಿಯ ನಾಯಕ ಶರದ್ ಪವಾರ್ ಅವರನ್ನು ಮತ್ತೊಮ್ಮೆ ಮೇಲ್ಮನೆಗೆ ಕಳುಹಿಸಲು ಕಾಂಗ್ರೆಸ್ ತನ್ನದೇ ಸ್ಥಾನದ ಹಕ್ಕನ್ನು ತ್ಯಾಗ ಮಾಡಿತ್ತು. ಶಿವಸೇನೆ (ಉದ್ಧವ್ ಬಣ) ಕೂಡ ಬೆಂಬಲ ನೀಡಿದ್ದರಿಂದ ಮಹಾ ವಿಕಾಸ್ ಅಘಾಡಿ ಒಮ್ಮತದಿಂದ ಅವರನ್ನು ಆಯ್ಕೆ ಮಾಡಿತ್ತು. ಆದರೆ ಈಗ ಅದೇ ಶರದ್ ಪವಾರ್, ಸುಪ್ರಿಯಾ ಸುಳೆ ಮತ್ತು ಅವರ ಪಕ್ಷ ಕ್ಷೇತ್ರ ಪುನರ್ವಿಂಗಡಣೆ ಕಾನೂನಿನ ವಿಚಾರದಲ್ಲಿ ಬಿಜೆಪಿ ಸರ್ಕಾರವನ್ನು ಬೆಂಬಲಿಸುತ್ತಿರುವುದು ದುರದೃಷ್ಟಕ ಎಂದು ಮಹಾರಾಷ್ಟ್ರ ಕಾಂಗ್ರೆಸ್ ತನ್ನ ಪೋಸ್ಟ್‌ನಲ್ಲಿ ಅಸಮಾಧಾನ ಹೊರಹಾಕಿದೆ.

ಸಂಸತ್ತಿನ ಸಂಖ್ಯಾಬಲ ಮತ್ತು ರಾಜಕೀಯ ಲೆಕ್ಕಾಚಾರ

ಇನ್ನೆರಡು ದಿನಗಳಲ್ಲಿ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಪರಿಷ್ಕೃತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಮಂಡಿಸಲು ಸಿದ್ಧತೆ ನಡೆಸಿದೆ. ಕಳೆದ ಏಪ್ರಿಲ್‌ನಲ್ಲಿ ಒಗ್ಗಟ್ಟಾಗಿದ್ದ ವಿರೋಧ ಪಕ್ಷಗಳು ಈ ಮಸೂದೆಯನ್ನು ಸೋಲಿಸಿದ್ದವು. ಆದರೆ ಈ ಬಾರಿ ಮಸೂದೆಯನ್ನು ಅಂಗೀಕರಿಸಲು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಎನ್‌ಸಿಪಿ (ಎಸ್‌ಪಿ) ಪಕ್ಷದ 8 ಸಂಸದರು ಮತ್ತು ಡಿಎಂಕೆ ಪಕ್ಷದ 22 ಸಂಸದರ ಬೆಂಬಲ ನಿರ್ಣಾಯಕವಾಗಿದೆ.

ಕ್ಷೇತ್ರ ಪುನರ್ವಿಂಗಡಣೆಯ ನಂತರ ಎಲ್ಲಾ ರಾಜ್ಯಗಳಿಗೂ ಶೇ. 50ರಷ್ಟು ಸ್ಥಾನಗಳನ್ನು ಹೆಚ್ಚಿಸುವುದಾಗಿ ಕೇಂದ್ರ ಸರ್ಕಾರ ನೀಡಿರುವ ಭರವಸೆಗೆ ಡಿಎಂಕೆ ಮತ್ತು ಶರದ್ ಪವಾರ್ ಬಣಗಳು ಒಲವು ತೋರಿರಬಹುದು ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯಾ ಒಕ್ಕೂಟದ ಸಭೆಗೆ ಎನ್‌ಸಿಪಿ ಗೈರು

ಈ ಬೆಳವಣಿಗೆಗಳ ನಡುವೆ, ಸಂಸತ್ತಿನ ಕಾರ್ಯತಂತ್ರದ ಕುರಿತು ಚರ್ಚಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಶನಿವಾರ ಕರೆಯಲಾಗಿದ್ದ ಇಂಡಿಯಾ ಒಕ್ಕೂಟದ ಸಭೆಯಿಂದ ದೂರ ಉಳಿಯಲು ಎನ್‌ಸಿಪಿ ನಿರ್ಧರಿಸಿದೆ.

ಮತ್ತೊಂದೆಡೆ, ಮಸೂದೆಯನ್ನು ವಿರೋಧಿಸುವ ತನ್ನ ನಿಲುವಿಗೆ ಕಾಂಗ್ರೆಸ್ ಬದ್ಧವಾಗಿದೆ. ಶುಕ್ರವಾರ ಸಂಜೆ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ನಮ್ಮ ಬಳಿ ಸಂಖ್ಯಾಬಲ ಇರಲಿ ಅಥವಾ ಇಲ್ಲದಿರಲಿ, ಕಾಂಗ್ರೆಸ್ ಪಕ್ಷವು ಈ ಮಸೂದೆಯನ್ನು ಬಲವಾಗಿ ವಿರೋಧಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆಯಾಗಿ, ಕ್ಷೇತ್ರ ಪುನರ್ವಿಂಗಡಣೆ ಮಸೂದೆಯು ರಾಷ್ಟ್ರ ಮತ್ತು ಮಹಾರಾಷ್ಟ್ರ ರಾಜಕಾರಣದಲ್ಲಿ ಹೊಸ ಸಮೀಕರಣಗಳಿಗೆ ನಾಂದಿ ಹಾಡಿದೆ(ಏಜೆನ್ಸೀಸ್​).