ಲೋನಾರ್ ಸರೋವರ 
ದೇಶ

ಉಪ್ಪು ನೀರಿನ ಸರೋವರದಲ್ಲಿ ಮೀನುಗಳು ಪತ್ತೆ: ವಿಶ್ವ ಪ್ರಸಿದ್ಧ ಲೋನಾರ್ ಲೇಕ್​ನಲ್ಲಿ ಏನಾಗ್ತಿದೆ? Lonar Lake

ಪ್ರಮುಖ ಮುಖ್ಯಾಂಶಗಳು

  • ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿರುವ ವಿಶ್ವಪ್ರಸಿದ್ಧ ಲೋನಾರ್ ಸರೋವರ
  • ಸರೋವರದಲ್ಲಿ ನೀರಿನ ಮಟ್ಟ ಆತಂಕಕಾರಿ ಪ್ರಮಾಣದಲ್ಲಿ ಏರುತ್ತಿರುವುದಾಗಿ ವರದಿಯಾಗಿದೆ
  • ನೀರಿನ ಮಟ್ಟ ಏರಿಕೆಯಿಂದ ಜೀವವೈವಿಧ್ಯತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುಬಹುದು
  • ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ನೋಂದಾಯಿಸಲು ಆದೇಶ
ಮುಂಬೈ: ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿರುವ ವಿಶ್ವಪ್ರಸಿದ್ಧ ಲೋನಾರ್ ಸರೋವರದ ( Lonar Lake ) ನೀರಿನ ಮಟ್ಟ ಆತಂಕಕಾರಿ ಪ್ರಮಾಣದಲ್ಲಿ ಏರುತ್ತಿರುವುದಾಗಿ ವರದಿಯಾಗಿದೆ. ನೀರಿನ ಮಟ್ಟ ಏರಿಕೆಯಿಂದ ಜೀವವೈವಿಧ್ಯತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುಬಹುದು ಎಂಬ ಆಧಾರದ ಮೇಲೆ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ನೋಂದಾಯಿಸಲು ಆದೇಶಿಸಿದೆ.
ಕಳೆದ ಸೆಪ್ಟೆಂಬರ್‌ನಿಂದ ಸರೋವರದ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಸರೋವರದ ಸುತ್ತಲು ಇರುವ ನಾಲ್ಕು ದೀರ್ಘಕಾಲಿಕ ಬುಗ್ಗೆಗಳಿಂದ ನಿರಂತರವಾಗಿ ನೀರು ಹರಿದುಬರುತ್ತಿದ್ದು, ಸರೋವರದಲ್ಲಿ ಸುಮಾರು 15 ರಿಂದ 20 ಅಡಿಗಳಷ್ಟು ನೀರು ಹೆಚ್ಚಾಗಿದೆ ಎಂದು ವರದಿಗಳು ಸೂಚಿಸುತ್ತವೆ. ಇದರ ಪರಿಣಾಮವಾಗಿ, ದಡದಲ್ಲಿರುವ ಹಲವಾರು ಪ್ರಾಚೀನ ಶಿವ ದೇವಾಲಯಗಳು ನೀರಿನಲ್ಲಿ ಮುಳುಗಿವೆ. ವಿಶ್ವಪ್ರಸಿದ್ಧ ಕಮಲಜಾ ದೇವಿ ದೇವಾಲಯದ ಗರ್ಭಗುಡಿಯೂ ನೀರಿನಲ್ಲಿ ಮುಳುಗಿದೆ. ದೇವಾಲಯದ ಮುಂಭಾಗದಲ್ಲಿರುವ ದೀಪಸ್ತಂಭವು ಮೊದಲು ಗೋಚರಿಸುತ್ತಿತ್ತು ಆದರೆ, ಈಗ ಅದು ಕೂಡ ಅರ್ಧದಷ್ಟು ನೀರಿನಲ್ಲಿ ಮುಳುಗಿದೆ. ಇದರಿಂದ ಜೀವವೈವಿಧ್ಯತೆಗೆ ಕಂಟಕ ಎದುರಾಗುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಪರಿಸರವಾದಿಗಳ ಪ್ರಕಾರ, ಲೋನಾರ್ ಒಂದು ಉಪ್ಪುನೀರಿನ ಸರೋವರ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ನಿರಂತರವಾಗಿ ಬುಗ್ಗೆಗಳಿಂದ ಸಿಹಿನೀರು ಬರುತ್ತಿರುವುದರಿಂದ, ಸರೋವರದ ಲವಣಾಂಶಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಪರಿಸರವಾದಿಗಳು ಹೇಳಿದ್ದಾರೆ. ಇದೇ ಸಮಯದಲ್ಲಿ, ಸರೋವರದಲ್ಲಿ ಮೀನುಗಳು ಸಹ ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. ಸಾಮಾನ್ಯವಾಗಿ ಉಪ್ಪು ನೀರಿನಲ್ಲಿ ಮೀನುಗಳು ಇರುವುದಿಲ್ಲ. ಇದೀಗ ಲೋನಾರ್​ ಸರೋವರದಲ್ಲಿ ಮೀನುಗಳು ಕಾಣಿಸಿಕೊಂಡಿರುವುದು ಉಪ್ಪುನೀರಿನ ಸರೋವರದ ನೈಸರ್ಗಿಕ ಪರಿಸರ ರಚನೆಗೆ ಹಾನಿಕಾರಕವಾಗಬಹುದು ಎಂದು ಅಂದಾಜಿಸಲಾಗಿದೆ.
ನ್ಯಾಯಮೂರ್ತಿ ಅನಿಲ್ ಕಿಲೋರ್ ಮತ್ತು ನ್ಯಾಯಮೂರ್ತಿ ರಾಜ್ ವಕೋಡ್ ಅವರನ್ನೊಳಗೊಂಡ ಪೀಠವು ವಕೀಲ ಮೋಹಿತ್ ಖಜಾಂಜಿ ಅವರನ್ನು 'ಅಮಿಕಸ್ ಕ್ಯೂರಿ' (ನ್ಯಾಯಾಲಯದ ಸ್ನೇಹಿತ) ಆಗಿ ನೇಮಿಸಿ, ಮುಂದಿನ ಏಳು ದಿನಗಳಲ್ಲಿ ವಿವರವಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವಂತೆ ನಿರ್ದೇಶಿಸಿದೆ. ಸರ್ಕಾರಿ ಆದೇಶಗಳನ್ನು ಅನುಸರಿಸಿ, ಛತ್ರಪತಿ ಸಂಭಾಜಿನಗರದ ಅಂತರ್ಜಲ ತಜ್ಞ ಪ್ರೊಫೆಸರ್ ಅಶೋಕ್ ತೇಜಂಕರ್ ಮತ್ತು ತಹಸೀಲ್ದಾರ್ ಭೂಷಣ್ ಪಾಟೀಲ್ ಸರೋವರವನ್ನು ಪರಿಶೀಲಿಸಿದರು. ನೀರಿನ ಮಟ್ಟ ಏರಿಕೆಗೆ ನಿಖರವಾದ ವೈಜ್ಞಾನಿಕ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆಳವಾದ ಸಂಶೋಧನೆಯ ಅಗತ್ಯವನ್ನು ತಜ್ಞರು ಎತ್ತಿ ತೋರಿಸಿದ್ದಾರೆ. 
ಐತಿಹಾಸಿಕವಾಗಿ, ಲೋನಾರ್ ಸರೋವರವು ಉಲ್ಕಾಶಿಲೆಯ ಪ್ರಭಾವದಿಂದ ರೂಪುಗೊಂಡಿತು. ಇದು ಪ್ರಪಂಚದಾದ್ಯಂತದ ವಿಜ್ಞಾನಿಗಳು ಮತ್ತು ಪ್ರವಾಸಿಗರನ್ನು ಇಂದಿಗೂ ಆಕರ್ಷಿಸುತ್ತದೆ, (ಏಜೆನ್ಸೀಸ್​).