Pratima Mandal | ಜಯನಗರ ಕ್ಷೇತ್ರದ ಟಿಎಂಸಿ ಸಂಸದೆ ಪ್ರತಿಮಾ ಮಂಡಲ್
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಒಡೆದು, ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಲು ಸಜ್ಜಾಗಿದ್ದ ಬಂಡಾಯ ಸಂಸದರ ಪಾಳಯದಲ್ಲೇ ಈಗ ದೊಡ್ಡ ಬಿರುಕು ಕಾಣಿಸಿಕೊಂಡಿದ್ದು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಕೆಯಾಗಿದೆ ಎನ್ನಲಾದ 19 ಸಂಸದರ ಸಹಿ ಇರುವ ಪಟ್ಟಿಯಲ್ಲಿ ತಮ್ಮ ಹೆಸರೂ ಇದೆ ಎಂಬ ವರದಿಗಳನ್ನು ಜಯನಗರ ಕ್ಷೇತ್ರದ ಟಿಎಂಸಿ ಸಂಸದೆ ಪ್ರತಿಮಾ ಮಂಡಲ್ (Pratima Mandal) ನಿರಾಕರಿಸಿದ್ದಾರೆ.
ಕಾಕೊಳಿ ಘೋಷ್ ದಸ್ತಿದಾರ್ ನೇತೃತ್ವದ ಬಂಡಾಯ ಬಣದಲ್ಲಿ ತಾವು ಗುರುತಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿರುವ ಪ್ರತಿಮಾ ಮಂಡಲ್, ಈ ಎಲ್ಲಾ ವರದಿಗಳು ಸಂಪೂರ್ಣ ಸುಳ್ಳು ಎನ್ನುತ್ತಾ, ನಾನು ಕೋಲ್ಕತ್ತಾದಲ್ಲೇ ಇದ್ದೇನೆ, ದೆಹಲಿಯಲ್ಲಿ ಯಾರನ್ನೂ ಭೇಟಿಯಾಗಿಲ್ಲ ಎಂದು ಹೇಳಿದ್ದಾರೆ.
ಬಂಡಾಯಗಾರರಿಗೆ ನೇರ ಸವಾಲ್ ಎಸೆದ ಮಂಡಲ್
ಈ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವವರಿಗೆ ನಾನು ಸವಾಲು ಹಾಕುತ್ತೇನೆ. ಎಲ್ಲರ ಸಹಿ ಇದೆ ಎನ್ನಲಾಗುತ್ತಿರುವ ಆ ಪತ್ರವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಿ. ಆಗ ಜನರಲ್ಲೇ ನೋಡಲಿ, ಅದರಲ್ಲಿ ನನ್ನ ಸಹಿ ಇದೆಯೋ ಇಲ್ಲವೋ ಎಂಬುದು ಸ್ಪಷ್ಟವಾಗುತ್ತದೆ ಎಂದು ಪ್ರತಿಮಾ ಮಂಡಲ್ ಗುಡುಗಿದ್ದಾರೆ. ಜೂನ್ 4 ರಂದು ದೆಹಲಿಯಲ್ಲಿ ನಡೆದ ಸಮಿತಿ ಸಭೆಗೆ ಹಾಜರಾಗಿ ಅದೇ ದಿನ ಕೋಲ್ಕತ್ತಾಗೆ ಮರಳಿದ್ದಾಗಿ ತಿಳಿಸಿರುವ ಅವರು, ಅಂದಿನಿಂದ ಇಂದಿನವರೆಗೆ ತಾವು ದೆಹಲಿ ಕಡೆಗೆ ಮುಖ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಂಡಾಯಗಾರರು ತಮ್ಮನ್ನು ಸಂಪರ್ಕಿಸಿದ್ದರು ಎಂಬುದನ್ನು ಒಪ್ಪಿಕೊಂಡಿರುವ ಮಂಡಲ್, ಅವರ ಯೋಜನೆ ನನಗೆ ಇಷ್ಟವಾಗದ ಕಾರಣ ನಾನು ಆ ಪ್ರಸ್ತಾಪವನ್ನು ತಿರಸ್ಕರಿಸಿದ್ದೆ ಎಂದು ಬಹಿರಂಗಪಡಿಸಿದ್ದಾರೆ.
ತಪ್ಪು ಮಾಡಿದ್ದಕ್ಕೆ ಜನ ಆಶೀರ್ವದಿಸಲಿಲ್ಲ
ಬಂಗಾಳ ವಿಧಾನಸಭೆಯಲ್ಲಿ ಶಾಸಕರು ದ್ರೋಹ ಬಗೆದ ಬಳಿಕ, ಪಕ್ಷದ ಪರಿಸ್ಥಿತಿಯ ಕುರಿತು ಚರ್ಚಿಸಲು ಕೋಲ್ಕತ್ತಾದಲ್ಲೇ ಸಭೆ ಸೇರುವಂತೆ ತಾವು ಹಲವು ಸಂಸದರಿಗೆ ಕರೆ ಮಾಡಿದ್ದಾಗಿ ಪ್ರತಿಮಾ ಮಂಡಲ್ ಹೇಳಿದ್ದಾರೆ. ಆದರೆ, ಬಂಡಾಯಗಾರರು ಕೋಲ್ಕತ್ತಾ ಬಿಟ್ಟು ದೆಹಲಿಗೆ ಬರುವಂತೆ ತಮಗೆ ಒತ್ತಾಯಿಸಿದರು, ಅದಕ್ಕೆ ತಾವು ಒಪ್ಪಲಿಲ್ಲ ಎಂದಿದ್ದಾರೆ. ಪಕ್ಷದ ಸೋಲಿನ ಬಗ್ಗೆ ಮಾತನಾಡಿದ ಅವರು, ಖಂಡಿತವಾಗಿಯೂ ಪಕ್ಷದಿಂದ ತಪ್ಪುಗಳಾಗಿವೆ. ಅದಕ್ಕಾಗಿಯೇ ಜನ ನಮಗೆ ಆಶೀರ್ವದಿಸಲಿಲ್ಲ ಮತ್ತು ನಾವು ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
1998ರ ನಂತರ ಟಿಎಂಸಿಗೆ ಅತಿ ದೊಡ್ಡ ಗಂಡಾಂತರ!
ಪಶ್ಚಿಮ ಬಂಗಾಳ ವಿಧಾನಸಭೆಯಿಂದ ಶುರುವಾದ ಬಂಡಾಯದ ಕಿಡಿ ಈಗ ಸಂಸತ್ತಿಗೂ ವ್ಯಾಪಿಸಿದ್ದು, ಮಮತಾ ಬ್ಯಾನರ್ಜಿ ಅವರ ಪಕ್ಷ 1998 ರಲ್ಲಿ ಸ್ಥಾಪನೆಯಾದ ನಂತರದ ಅತಿ ದೊಡ್ಡ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇತ್ತೀಚೆಗೆ ಪಕ್ಷದಿಂದ ಉಚ್ಚಾಟಿತಗೊಂಡ ಶಾಸಕ ರಿತಬ್ರತಾ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲು 64 ಶಾಸಕರು ಸಹಿ ಹಾಕಿದ್ದರು. ಇದರ ನಡುವೆಯೇ ರಾಜ್ಯಸಭೆಯ ಸದಸ್ಯರಾದ ಸುಖೇಂದು ಶೇಖರ್ ರಾಯ್, ಸುಸ್ಮಿತಾ ದೇವ್ ಮತ್ತು ಪ್ರಕಾಶ್ ಚಿಕ್ ಬರೈಕ್ ಈಗಾಗಲೇ ತಮ್ಮ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಮಮತಾ ಬ್ಯಾನರ್ಜಿ ಪಾಳಯವನ್ನು ಸಂಪೂರ್ಣವಾಗಿ ಸಂಕಷ್ಟಕ್ಕೆ ದೂಡಿದೆ(ಏಜೆನ್ಸೀಸ್).