ಬಿಜೆಪಿ ಶಾಸಕ ಬಚುಭಾಯಿ ಖಬದ್ ನಿವಾಸವನ್ನು ಸ್ವಚ್ಛಗೊಳಿಸಲು ಬಳಸಲಾದ ಅಗ್ನಿಶಾಮಕ ದಳದ ವಾಹನ 
ದೇಶ

BJP ಶಾಸಕನ ಬಂಗಲೆ ತೊಳೆಯಲು ಹೋದ ಅಗ್ನಿಶಾಮಕ ದಳ! ವಿಡಿಯೋ ವೈರಲ್‌ ಬೆನ್ನಲ್ಲೇ 2,700 ದಂಡ; ನೆಟ್ಟಿಗರು ಕೆಂಡ! MLA Bachubhai Khabad

ಶಾಸಕರ ಬಂಗಲೆ ತೊಳೆಯಲು ಅಗ್ನಿಶಾಮಕ ವಾಹನ ಬಳಕೆ! ವಿಡಿಯೋ ವೈರಲ್ ಬೆನ್ನಲ್ಲೇ ₹2,700 ದಂಡ ವಿಧಿಸಿದ ಇಲಾಖೆ; ಸಾರ್ವಜನಿಕ ಆಸ್ತಿ ದುರ್ಬಳಕೆ ವಿರುದ್ಧ ನೆಟ್ಟಿಗರ ಆಕ್ರೋಶದ ಸಂಪೂರ್ಣ ವಿವರ ಇಲ್ಲಿದೆ.

ಗುಜರಾತ: ತನ್ನ ಬಂಗಲೆಯ ಗೋಡೆಗಳನ್ನು ಸ್ವಚ್ಛಗೊಳಿಸಲು ಅಗ್ನಿಶಾಮಕ ದಳವನ್ನು ಕರೆಯಿಸಿ, ಅಂತೆಯೇ ಬಂಗಲೆ ಸುತ್ತಲೂ ಸ್ವಚ್ಛತೆ ನಡೆಸಿದ ಆರೋಪವನ್ನು ದೇವಭರಿಯಾ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಚುಭಾಯಿ ಖಬದ್ (Bachubhai Khabad) ಎದುರಿಸುತ್ತಿದ್ದಾರೆ.

ಧಾನಪುರ್​ ತಾಲ್ಲೂಕಿನಲ್ಲಿರುವ ಶಾಸಕ ಖಬದ್ ಅವರ ಬಂಗಲೆ ಎದುರಿಗೆ ಅಗ್ನಿಶಾಮಕ ದಳದ ವ್ಯಾನ್​ ನಿಂತಿದ್ದು, ಅಗ್ನಿಶಾಮಕ ಸಿಬ್ಬಂದಿ ಪೈಪ್​ನಿಂದ ಬಂಗಲೆಯ ಗೋಡೆಗಳನ್ನು ಸಚ್ಛಗೊಳಿಸುತ್ತಿರುವ ವಿಡಿಯೋಗಳು ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ವೈರಲ್​ ಆಗುತ್ತಿದೆ. ಈ ವಿಡಿಯೋಗಳು ಲಕ್ಷಗಟ್ಟಲೆ ವೀಕ್ಷಣೆಯನ್ನು ಪಡೆದುಕೊಳ್ಳುತ್ತಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ ಬೃಹತ್​ ಬಂಗಲೆಯೊಂದರ ಎದುರಿಗೆ ಅಗ್ನಿಶಾಮಕ ದಳದ ವ್ಯಾನ್​ನಿಂತಿದ್ದು, ಸಿಬ್ಬಂದಿಗಳು ಪೈಪ್​ ಹಿಡಿದುಕೊಂಡು ಬಂಗಲೆಯ ಕಂಪೌಂಡ್​ ಹಾಗೂ ಗೋಡೆಗಳಿಗೆ ನೀರನ್ನು ಸಿಂಪಡಿಸುವ ಮೂಲಕ ಸ್ವಚ್ಛಗೊಳಿಸುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.

ಲಭ್ಯ ಮಾಹಿತಿ ಪ್ರಕಾರ, ಪುರಸಭೆ ಅಧ್ಯಕ್ಷ ಧರ್ಮೇಶ್​ ಕಲಾಲ್​ ಅವರ ನಿರ್ದೇಶನದ ಮೇರೆಗೆ ಮಾಜಿ ಪಂಚಾಯತ್​ ಹಾಗೂ ಕೃಷಿ ಸಚಿವ ಬಚುಭಾಯಿ ಖಬದ್ ಅವರ ಬಂಗಲೆಯತ್ತ ಅಗ್ನಿಶಾಮಕ ದಳದ ವ್ಯಾನ್​ ತೆರಳಿದೆ ಎನ್ನಲಾಗಿದೆ. ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದಂತೆ, ತಮ್ಮ ಕಚೇರಿಗೆ ರಾಜಕಾರಣಿಯೊಬ್ಬರ ಕರೆಬಂದ ಹಿನ್ನಲೆ ತಾವು ವಾಹನವನ್ನು ತೆಗೆದುಕೊಂಡು ಹೋದೆವು. ಆದರೆ ಬಂಗಲೆ ಸ್ವಚ್ಛತೆಗಾಗಿ ನಮ್ಮನ್ನು ಕರೆಸಿಕೊಳ್ಳಲಾಗಿತ್ತೆಂದು ತಮಗೆ ತಿಳಿದಿರಲಿಲ್ಲ ಎಂದು ಆ ಅಧಿಕಾರಿ ಮಾಹಿತಿ ನೀಡಿದ್ದಾರೆ.

2,700 ರೂಪಾಯಿ ದಂಡ!

ಅಗ್ನಿಶಾಮಕ ದಳದವರಿಂದ ಶಾಸಕ ಬಚುಭಾಯಿ ಖಬದ್ ಅವರ ಬಂಗಲೆ ಸ್ವಚ್ಛಗೊಳಿಸಿದ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಭಾರೀ ವೈರಲ್​ ಆಗಿ ಸಾರ್ವಜನಿಕರ ಆಕ್ರೋಶ ವ್ಯಕ್ತವಾದ ಹಿನ್ನಲೆ ಶಾಸಕರಿಗೆ 2,700 ರೂಪಾಯಿ ದಂಡ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ. ಅಗ್ನಿಶಾಮಕ ದಳಕ್ಕೆ ಯಾರದರೂ ಕರೆ ಮಾಡಿ ತುರ್ತಾಗಿ ಬರುವಂತೆ ಕೇಳಿದರೆ, ನಾನು ತಡಮಾಡದೇ ಘಟನಾ ಸ್ಥಳಕ್ಕೆ ಹೋಗುತ್ತೇವೆ. ಆದರೆ, ಇಲ್ಲಿ ಬಂಗಲೆ ತೊಳಿಯಬೇಕೆಂದು ನಮಗೆ ಮುಂಚಿತವಾಗಿ ತಿಳಿದಿರಲಿಲ್ಲ. ಹೀಗಾಗಿ ಈ ಅಚಾತುರ್ಯ ನಡೆದುಹೋಗಿದೆ. ಈಗ ನಾವು ತಪ್ಪಿತಸ್ಥರಿಂದ ದಂಡವನ್ನು ವಸೂಲು ಮಾಡಿದ್ದೇವೆಂದು ಇಲಾಖೆ ಸ್ಪಷ್ಟನೆ ನೀಡಿದೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರು ಶಾಸಕರಿಗೆ ಮತ್ತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಒಂದು ಶಾಸಕ ತನ್ನ ಬಂಗಲೆ ಸ್ವಚ್ಛತೆಗಾಗಿ ಕರೆದಿದ್ದಾನೆ, ನಾಳೆ ತನ್ನನ್ನು ಸ್ನಾಮ ಮಾಡಿಸಲೂ ಕರೆಯುತ್ತಾನೆ ಎಂದು ಒಬ್ಬ ಬಳಕೆದಾರರು ಕಿಡಿ ಕಾರಿದ್ದಾರೆ. ಅವರು ಕರೆದರಂತೆ, ಇವರು ಹೋಗಿ ಸ್ವಚ್ಛಮಾಡಿ ಬಂದರಂತೆ, ಸರ್ಕಾರದ ಜತೆ ಈ ಇಲಾಖೆಯವರಿಗೂ ಮಾರ್ಯಾದೆ ಇಲ್ಲ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

ಇದೇ ಕೆಲಸವನ್ನು ಸಾಮಾನ್ಯ ಜನ ಮಾಡಿದ್ದರೆ, ಕೇಸು, ಕೋರ್ಟು ಜೊತೆಗೆ ಮೂರು ತಲೆ ಮಾರಿಗಾಗುವಷ್ಟು ದಂಡ ಹಾಕುತ್ತಿದ್ದರು. ಆದರೆ ಶಾಸಕರಿಗೆ ಕೇವಲ 2,700 ರೂ. ದಂಡ ವಿಧಿಸಿದ್ದಾರೆ. ನಾಳೆ ನಾನು ಇಷ್ಟೇ ದಂಡ ಕಟ್ಟುತ್ತೇನೆ, ನನ್ನ ಮನೆಯನ್ನು ಸ್ವಚ್ಛ ಮಾಡಲು ಬರುತ್ತೀರಾ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ, (ಏಜೆನ್ಸೀಸ್​).