ನವದೆಹಲಿ: ಗುರುವಾರ(ಮೇ 21) ಸಂಜೆ ಬೆಂಗಳೂರಿನಿಂದ ದೆಹಲಿ ತೆರಳಿದ್ದ ಏರ್ ಇಂಡಿಯಾ ವಿಮಾನವೊಂದರ(Air India flight) ಇಂಜಿನ್ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಫೈಲಟ್ ಸುರಕ್ಷಿತವಾಗಿ ವಿಮಾನ ಲ್ಯಾಂಡಿಂಗ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಏರ್ ಇಂಡಿಯಾಕ್ಕೆ ಸಂಬಂಧಿಸಿದಂತೆ ನಡೆದ ಎರಡನೇ ಘಟನೆ ಇದಾಗಿದೆ. ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಇಳಿಯುವಾಗ ವಿಮಾನಯಾನ ಸಂಸ್ಥೆಯ ಮತ್ತೊಂದು ವಿಮಾನವು ಟೈಲ್ ಸ್ಟ್ರೈಕ್‌ಗೆ ಒಳಗಾಗಿತ್ತು.
ನಿನ್ನೆ ಸಂಜೆಯ ಬೆಂಕಿ ಅವಘಡ ಕುರಿತು ಮಾಹಿತಿ ನೀಡಿರುವ ಏರ್ ಇಂಡಿಯಾ, ಒಂದು ಎಂಜಿನ್‌ನಿಂದ ಬೆಂಕಿಯ ಸೂಚನೆ ಪೈಲಟ್‌ಗಳಿಗೆ ಕಂಡುಬಂದ ಬಳಿಕ ವಿಮಾನವನ್ನು ತುರ್ತು ಪರಿಸ್ಥಿತಿ ಕ್ರಮಕೈಗೊಂಡು ಸಂಜೆ ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಯಿತು ಎಂದು ತಿಳಿಸಿದೆ.
ದೆಹಲಿಯಲ್ಲಿ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆದ ವಿಮಾನ ಸಂಖ್ಯೆ AI2802 ಬೆಂಗಳೂರಿನಿಂದ ಬಂದಿತ್ತು. ವಿಮಾನವು ದೆಹಲಿಗೆ ಕೊನೆಯ ಬಾರಿಗೆ ಸಮೀಪಿಸಿದಾಗ, ಕಾಕ್‌ಪಿಟ್ ಸಿಬ್ಬಂದಿಗೆ ಒಂದು ಎಂಜಿನ್‌ನಿಂದ ಬೆಂಕಿ ಹೊತ್ತಿಕೊಂಡ ಸೂಚನೆ ಸಿಕ್ಕಿತು. ನಂತರ ಈ ಸೂಚನೆ ನಿಜವೆಂದು ದೃಢಪಡಿಸಲಾಯಿತು.
ಸಿಬ್ಬಂದಿ ಎಲ್ಲಾ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ಅನುಸರಿಸಿದರು. ಮತ್ತು ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದರು. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಮತ್ತು ಅವರು ಸಾಮಾನ್ಯವಾಗಿ ಇಳಿದಿದ್ದಾರೆ. ಘಟನೆಯ ಕಾರಣದ ಬಗ್ಗೆ ನಿಯಂತ್ರಣ ಅಧಿಕಾರಿಗಳ ಸಮನ್ವಯದೊಂದಿಗೆ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಹೇಳಿದೆ (ಏಜೆನ್ಸೀಸ್).