ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್
ನವದೆಹಲಿ: ದೆಹಲಿಯಲ್ಲಿರುವ ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ಅವರ ಅಧಿಕೃತ ನಿವಾಸದಲ್ಲಿ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದ್ದು, ಅಗ್ನಿ ಶಾಮಕದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ನಂದಿಸಿದ್ದಾರೆ ಎಂದು ವರದಿಯಾಗಿದೆ.
ದೆಹಲಿಯ ಮದರ್ ತೆರೇಸಾ ಕ್ರೆಸೆಂಟ್ ಮಾರ್ಗದಲ್ಲಿರುವ ಅಧಿಕೃತ ನಿವಾಸದಲ್ಲಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಈ ವೇಳೆ ಸಂಸದರು ಮನೆಯಲ್ಲಿದ್ದರೋ? ಇಲ್ಲವೋ ಎಂಬುದು ತಿಳಿದು ಬಂದಿಲ್ಲ.
ಈ ಕುರಿತು ಮಾಹಿತಿ ನೀಡಿರುವ ದೆಹಲಿ ಅಗ್ನಿಶಾಮಕದಳದ ಅಧಿಕಾರಿಗಳು, ಸಂಸದ ರವಿಶಂಕರ್ ಅವರ ಮನೆಯಲ್ಲಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡ ಬಗ್ಗೆ ಕರೆ ಬಂದಿತ್ತು. ಮನೆಯ ಒಂದು ಕೋಣೆಯಲ್ಲಿ ಇರಿಸಲಾಗಿದ್ದ ಪೀಠೋಪಕರಣಗಳಿಂದ ಬೆಂಕಿ ಕಾಣಿಸಿಕೊಂಡಿದೆ. ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿವೆ ಎಂದು ಹೇಳಿದ್ದಾರೆ (ಏಜೆನ್ಸೀಸ್).