ಜೈಪುರ: ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಭಿವಾಡಿಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಪಟಾಕಿ ಕಾರ್ಖಾನೆಯೊಂದರಲ್ಲಿ ಇಂದು (ಫೆ. 16) ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಏಳು ಮಂದಿ ಕಾರ್ಮಿಕರು ಸಜೀವ ದಹನವಾಗಿದ್ದಾರೆ(burnt alive). ಇನ್ನಿಬ್ಬರು ಒಳಗೆ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಭಿವಾಡಿಯ ಖುಷ್ಖೇರಾ-ಕರೋಲಿ ಕೈಗಾರಿಕಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಕಾರ್ಖಾನೆಯಲ್ಲಿ ಸುಮಾರು 25 ಕಾರ್ಮಿಕರಿದ್ದರು ಎನ್ನಲಾಗಿದೆ. ಬೆಂಕಿಯ ಹೊಗೆ ಹರಡಿದ ತಕ್ಷಣ ಕಾರ್ಮಿಕರು ಮತ್ತು ನೌಕರರು ಸ್ಥಳದಿಂದ ಹೊರಗಡೆ ಓಡಿದ್ದಾರೆ. ಆದರೆ ದುರಾದೃಷ್ಟವಾಶಾತ್ ಏಳು ಮಂದಿ ಬೆಂಕಿಯ ಕೆನ್ನಾಲೆಗೆಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಇನ್ನಿಬ್ಬರ ಮಾಹಿತಿ ತಕ್ಷಣಕ್ಕೆ ತಿಳಿದು ಬಂದಿಲ್ಲ.
ಇನ್ನೂ ಮಾಲೀಕರು ಕಟ್ಟಡವನ್ನು ಬಾಡಿಗೆ ಪಡೆದು ಅಕ್ರಮವಾಗಿ ಪಟಾಕಿ ಕಾರ್ಖಾನೆ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಕಾರ್ಖಾನೆಯೊಳಗೆ ಸಂಗ್ರಹಿಸಲಾಗಿದ್ದ ಗನ್‌ಪೌಡರ್ ಮತ್ತು ಕಾರ್ಡ್‌ಬೋರ್ಡ್‌ನ ದೊಡ್ಡ ದಾಸ್ತಾನಿನ ಸ್ಫೋಟದಿಂದ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಘಟನೆ ನಡೆದ ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ತೆಗೆಯಲಾಗಿದೆ. ಸ್ಥಳಕ್ಕಾಗಮಿಸಿ ಅಗ್ನಿ ಶಾಮಕದಳ ಮತ್ತು ಪೊಲೀಸರು ಹಲವು ಗಂಟೆಗಳ ಪ್ರಯತ್ನದಿಂದ ಬೆಂಕಿ ನಂದಿಸಿದ್ದಾರೆ. ಮೃತ ಕಾರ್ಮಿಕರು ಉತ್ತರ ಪ್ರದೇಶ ಮತ್ತು ಬಿಹಾರ ಮೂಲದವರು ಎನ್ನಲಾಗಿದೆ. ನಾಪತ್ತೆಯಾಗಿರುವ ಇನ್ನಿಬ್ಬರಿಗಾಗಿ ರಕ್ಷಣೆ ಕಾರ್ಯ ನಡೆದಿದೆ.
ಈ ಕುರಿತು ಮಾತನಾಡಿರುವ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಮಿತಾ ಮಿಶ್ರಾ, ಪೊಲೀಸರು ದಿನನಿತ್ಯದ ಗಸ್ತು ತಿರುಗುತ್ತಿದ್ದಾಗ ಈ ಘಟನೆಯ ಮಾಹಿತಿ ತಿಳಿಯಿತು. ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಒಂಬತ್ತು ಜನರು ಒಳಗೆ ಸಿಲುಕಿಕೊಂಡಿದ್ದರು. ಇಲ್ಲಿಯವರೆಗೆ ಏಳು ಶವಗಳನ್ನು ಹೊರತೆಗೆಯಲಾಗಿದೆ. ಉಳಿದ ಇಬ್ಬರು ಕಾರ್ಮಿಕರನ್ನು ರಕ್ಷಿಸಲು ತೀವ್ರ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ (ಏಜೆನ್ಸೀಸ್).