ಅಮರಾವತಿ: ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಸುಮಾರು 66 ಕಿಮೀ ದೂರದಲ್ಲಿರುವ ಯಲಮಂಚಿಲಿಯಲ್ಲಿ ಎರ್ನಾಕುಲಂ ಎಕ್ಸ್‌ಪ್ರೆಸ್‌ನ ಎರಡೂ ಬೋಗಿಗಳಲ್ಲಿ ಅಗ್ನಿ ಅವಘಡ(Fire accident) ಸಂಭವಿಸಿದ್ದು, ಬೋಗಿಯಲ್ಲಿದ್ದ ಪ್ರಯಾಣಿಕರ ಪೈಕಿ ಓರ್ವ ಮೃತಪಟ್ಟಿದ್ದಾನೆ ಎಂದು (ಡಿ. 29) ವರದಿಯಾಗಿದೆ.
ಭಾನುವಾರ ಮಧ್ಯರಾತ್ರಿ 12.30ಕ್ಕೆ ಘಟನೆ ನಡೆದಿದೆ. ಟಾಟಾನಗರ- ಎರ್ನಾಕುಲಂ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಲೋಕೋ ಪೈಲಟ್ ತಕ್ಷಣವೇ ರೈಲನ್ನು ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ ದುರಂತವನ್ನು ತಪ್ಪಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು, ಎಕ್ಸ್ಪ್ರೆಸ್ ರೈಲಿನಲ್ಲಿ ಅಗ್ನಿ ಪ್ರಮಾದದ ಬಗ್ಗೆ ಮಧ್ಯರಾತ್ರಿ 12:45 ಕ್ಕೆ ಮಾಹಿತಿ ಸಿಕ್ಕಿತು. ಬೆಂಕಿ ಹೊತ್ತಿಕೊಂಡ ರೈಲಿನ ಎರಡು ಬೋಗಿಗಳ ಪೈಕಿ ಒಂದು ಬೋಗಿಯಲ್ಲಿ 82 ಪ್ರಯಾಣಿಕರು ಮತ್ತು ಇನ್ನೊಂದು ಬೋಗಿಯಲ್ಲಿ 76 ಪ್ರಯಾಣಿಕರು ಇದ್ದರು. ಬಿ 1 ಬೋಗಿಯಿಂದ ಒಬ್ಬರ ಮೃತ ದೇಹ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಮೃತರನ್ನು ಚಂದ್ರಶೇಖರ್ ಸುಂದರಂ ಎಂದು ಗುರುತಿಸಲಾಗಿದೆ. ಹಾನಿಗೊಳಗಾದ ಎರಡು ಬೋಗಿಗಳನ್ನು ರೈಲಿನಿಂದ ಬೇರ್ಪಡಿಸಲಾಗಿದ್ದು, ಉಳಿದಂತೆ ರೈಲು ಎರ್ನಾಕುಲಂಗೆ ತೆರಳುತ್ತಿದೆ. ಬೆಂಕಿಯ ಕಾರಣವನ್ನು ಕಂಡುಹಿಡಿಯಲು ಎರಡು ವಿಧಿವಿಜ್ಞಾನ ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದ್ದಾರೆ (ಏಜೆನ್ಸೀಸ್).