ನವದೆಹಲಿ: ಭಾರತದ ವಿರುದ್ಧ ಟೀಕೆ ಮಾಡಿದ್ದಾರೆ ಎಂದು ಹೇಳಲಾದ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಫೇಕ್ ವಿಡಿಯೋವೊಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಆರೋಪದ ಮೇಲೆ ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಬುಧವಾರ(ನ. 04) ವರದಿಯಾಗಿದೆ.
ಮಂಗಳವಾರ(ನ. 03) ಡಿ ಕೋಟ್ಸ್ ನ್ಯೂಸ್ ಎಂಬ ಸಾಮಾಜಿಕ ಜಾಲತಾಣದ ಖಾತೆಯೊಂದರಲ್ಲಿ ಹಂಚಿಕೊಂಡಿದ್ದ ನಕಲಿ ವಿಡಿಯೋವನ್ನು ಪ್ರಶಾಂತ್ ಭೂಷಣ್ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ದಾರಿತಪ್ಪಿಸುವ ಮತ್ತು ಪ್ರಚೋದನಕಾರಿ ವಿಷಯಗಳಿದ್ದವು ಎನ್ನಲಾಗಿದೆ. ಈ ಹಿನ್ನೆಲೆ ಸ್ಪೆಷಲ್ ಸೆಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 336(4) (ನಕಲಿ ದಾಖಲೆ ಸೃಷ್ಟಿಸುವುದು/ಫೋರ್ಜರಿ), 353(1)(c) (ಸಾರ್ವಜನಿಕ ಗೊಂದಲಕ್ಕೆ ಕಾರಣವಾಗುವ ಹೇಳಿಕೆಗಳು), 356 (ಮಾನಹಾನಿ) ಮತ್ತು 340(2) (ನಕಲಿ ದಾಖಲೆಯನ್ನು ಅಸಲಿ ಎಂದು ಬಳಸುವುದು) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66C (ಗುರುತಿನ ಕಳ್ಳತನ ಅಥವಾ 'ಐಡೆಂಟಿಟಿ ಥೆಫ್ಟ್'ಗೆ ಶಿಕ್ಷೆ) ಅಡಿಯಲ್ಲಿ 'ಸ್ಪೆಷಲ್ ಸೆಲ್' ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಿಸಲಾಗಿದೆ.
ವಿಡಿಯೋದಲ್ಲಿ ರಷ್ಯಾದ ವಿದೇಶಾಂಗ ಸಚಿವರು ಭಾರತದ ಆಂತರಿಕ ವ್ಯವಹಾರಗಳು ಮತ್ತು ತೈಲ ಖರೀದಿಗೆ ಸಂಬಂಧಿಸಿದಂತೆ ಅವರು ಟೀಕೆ ಮಾಡುತ್ತಿದ್ದಾರೆ ಎಂಬಂತೆ ಎಐ ಮೂಲಕ ರಚಿಸಲಾಗಿದೆ. ಪೊಲೀಸರು ಈ ಕುರಿತು ತನಿಖೆ ಮುಂದುವರೆಸಿದ್ದಾರೆ (ಏಜೆನ್ಸೀಸ್).