ನೇಹಾ ಸಿಂಗ್ ರಾಥೋಡ್ ಮತ್ತು ಸುಪ್ರಿಯಾ ಶ್ರೀನಾಟೆ 
ದೇಶ

ಬಿಜೆಪಿ ಬಾವುಟ ಹಾರಿಸಿದ ಬಗ್ಗೆ ಫೇಕ್ ಪೋಸ್ಟ್: ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ಸುಪ್ರಿಯಾ ಶ್ರೀನಾಟೆ, ನೇಹಾ ಸಿಂಗ್ ರಾಥೋಡ್ ವಿರುದ್ಧ ಎಫ್‌ಐಆರ್ | FIR

ರಾಯ್​ಪುರ: ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವದ ವೇಳೆ ಭಾರತದ ಬಾವುಟ ಬದಲಿಗೆ ಬಿಜೆಪಿ ಬಾವುಟ ಹಾರಿಸಲಾಗಿದೆ ಎಂದು ಹಳೆ ವಿಡಿಯೋ ಪೋಸ್ಟ್ ಮಾಡಿ ಸಾರ್ವಜನಿಕವಾಗಿ ಸುಳ್ಳು ಮಾಹಿತಿ ಹರಡಿದ ಆರೋಪದ ಮೇಲೆ ಕಾಂಗ್ರೆಸ್ ಐಟಿ ಸೆಲ್​ ಮುಖ್ಯಸ್ಥೆ ಸುಪ್ರಿಯಾ ಶ್ರೀನಾಟೆ ಮತ್ತು ಜನಪ್ರಿಯ ಜನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ವಿರುದ್ಧ ಎಫ್​ಐಆರ್(FIR) ದಾಖಲಾಗಿದೆ.
ಬಿಜೆಪಿ ವಕ್ತಾರ ಉಜ್ವಲ್ ದೀಪಕ್ ಅವರು ನೀಡಿದ ದೂರಿನನ್ವಯ ಛತ್ತೀಸ್​ಗಢದ ರಾಯ್ಪುರ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಸಂಬಂಧಿತ ಸೆಕ್ಷನ್ 336(4), 353(2), ಮತ್ತು 196 ರ ಅಡಿಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ. ಜನರಲ್ ಝಡ್ ಆಫ್ ಇಂಡಿಯಾ' ಹೆಸರಿನ 'ಎಕ್ಸ್' ಖಾತೆಯ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಧಮತರಿ ಜಿಲ್ಲೆಯ ಕುರುದ್‌ನಲ್ಲಿ ಮಾಜಿ ಸಚಿವ ಮತ್ತು ಹಿರಿಯ ಬಿಜೆಪಿ ಶಾಸಕ ಅಜಯ್ ಚಂದ್ರಕರ್ ಅವರು ಬಿಜೆಪಿ ಪಕ್ಷದ ಧ್ವಜವನ್ನು ಹಾರಿಸುತ್ತಿರುವ ವಿಡಿಯೋಗೆ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬಿಜೆಪಿ ಪ್ರತಿನಿಧಿಗಳು ರಾಷ್ಟ್ರೀಯ ತ್ರಿವರ್ಣ ಧ್ವಜದ ಬದಲಿಗೆ ತಮ್ಮ ಪಕ್ಷದ ಧ್ವಜವನ್ನು ಹಾರಿಸಿದ್ದಾರೆ ಎಂದು ವಿಡಿಯೋವನ್ನೂ ವೈರಲ್ ಮಾಡಲಾಗಿದೆ.
ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿರುವ ಸುಪ್ರಿಯಾ ಶ್ರೀನಾಟೆ ಮತ್ತು ಉತ್ತರ ಭಾರತದ ಹಿಂದಿ ಜನಪದದ ಜನಪ್ರಿಯ ಗಾಯಕಿ ನೇಹಾ ಸಿಂಗ್ ರಾಥೋಡ್ ಸಹ ತಮ್ಮ ಸಾಮಾಜಿಕ ಖಾತೆಗಳಲ್ಲಿ ಈ ವಿಡಿಯೋ ಹಂಚಿಕೊಂಡು, ಆಡಳಿತ ಪಕ್ಷವು ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿದೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.
ವೈರಲ್ ವಿಡಿಯೋ ಕುರಿತು ಸ್ಪಷ್ಟೀಕರಣ ನೀಡಿರುವ ಬಿಜೆಪಿ ಶಾಸಕ ಅಜಯ್ ಚಂದ್ರಕರ್ ಅವರು, ಸ್ವಾತಂತ್ರ್ಯ ದಿನದಂದು ಧಮತರಿಯ ಏಕಲವ್ಯ ಕ್ರೀಡಾ ಮೈದಾನದಲ್ಲಿ ನಡೆದ ಸರ್ಕಾರಿ ಸಮಾರಂಭದಲ್ಲಿ ಆಡಳಿತಾತ್ಮಕ ಶಿಷ್ಟಾಚಾರವನ್ನು ಅನುಸರಿಸಿ ರಾಷ್ಟ್ರಧ್ವಜವನ್ನು ಹಾರಿಸಿದ್ದೇನೆ. ವೈರಲ್ ವಿಡಿಯೋ ಮಾರ್ಚ್ 22ರಂದು ಕುರುಡ್‌ನಲ್ಲಿ ನಡೆದ ಬಿಜೆಪಿ ತರಬೇತಿ ಶಿಬಿರದ ವಿಡಿಯೋ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಪಕ್ಷದ ಕಾರ್ಯಕ್ರಮವೊಂದರಲ್ಲಿ ನಡೆಸಿದ ಧ್ವಜಾರೋಹಣದ ವಿಡಿಯೋವನ್ನು ಸ್ವಾತಂತ್ರ್ಯೋತ್ಸವದ ದಿನಕ್ಕೆ ಸಂಬಂಧಿಸಿದ ವಿಡಿಯೋ ಎಂದು ಸಾರ್ವಜನಿಕವಾಗಿ ಸುಳ್ಳು ಮಾಹಿತಿ ಹರಡಿದ ಆರೋಪದ ಮೇಲೆ ಸುಪ್ರಿಯಾ ಶ್ರೀನಾಟೆ, ನೇಹಾ ಸಿಂಗ್ ರಾಥೋಡ್ ವಿರುದ್ಧ ದೂರು ದಾಖಲಾಗಿದೆ (ಏಜೆನ್ಸೀಸ್).