ಸಾಂದರ್ಭಿಕ ಚಿತ್ರ 
ದೇಶ

ಆರ್ಥಿಕ ಸಂಕಷ್ಟ; ತಂದೆ-ತಾಯಿಯನ್ನು ಕೊಂದು ಬಳಿಕ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಅಣ್ಣ-ತಮ್ಮ | Suicide

ಮುಂಬೈ: ಮಹಾರಾಷ್ಟ್ರದ ನಾಂದೇಡ್​ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು, ತನಿಖೆಯಲ್ಲಿ ಇಬ್ಬರು ಸಹೋದರರು ಆರ್ಥಿಕ ಸಂಕಷ್ಟದಿಂದಾಗಿ ಮೊದಲು ತಂದೆ-ತಾಯಿಯನ್ನು ಕತ್ತು ಹಿಸುಕಿ ಕೊಂದು ಬಳಿಕ, ಇಬ್ಬರು ಚಲಿಸುವ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶನಿವಾರ(ಡಿ. 27) ವರದಿಯಾಗಿದೆ.
ಡಿ. 25ರಂದು ಮುದ್ಖೇಡ್ ತಹಸಿಲ್‌ನ ಜವಾಲಾ ಮುರಾರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಂದು ಬೆಳಗ್ಗೆ 8 ಗಂಟೆ ಸುಮಾರಿಗೆ ತಂದೆ ರಮೇಶ್ ಸೋನಾಜಿ ಲಾಖೆ(51) ಮತ್ತು ಅವರ ಪತ್ನಿ ರಾಧಾಬಾಯಿ ಲಾಖೆ(45) ಅವರ ಶವಗಳು ಮನೆಯಲ್ಲಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಅವರ ಪುತ್ರರಾದ ಉಮೇಶ್(25), ಬಜರಂಗ್(23) ಅವರ ಶವಗಳು ಗ್ರಾಮದಿಂದ ಕೆಲವೇ ಕಿಮೀ ದೂರದಲ್ಲಿರುವ ರೈಲ್ವೆ ಹಳಿಯಲ್ಲಿ ಪತ್ತೆಯಾಗಿವೆ ಎನ್ನಲಾಗಿದೆ.
ಈ ಕುರಿತು ಪಿಟಿಐ ಜೊತೆ ಮಾತನಾಡಿರುವ ಬರಾದ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದತ್ತಾತ್ರೇ ಮಂಥಲೆ, ನಮ್ಮ ತನಿಖೆಯಲ್ಲಿ ಮತ್ತು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮೊದಲು ಮಕ್ಕಳಾದ ಉಮೇಶ್ ಮತ್ತು ಬಜರಂಗ್ ಅವರು ತಮ್ಮ ತಂದೆ-ತಾಯಿ ಮಲಗಿದ್ದಾಗ ಅಲ್ಲಿಯೇ ಕತ್ತು ಹಿಸುಕಿ ಕೊಂದು, ಬಳಿಕ ಚಲಿಸುವ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ದೃಢಪಟ್ಟಿದೆ ಎಂದು ಹೇಳಿದ್ದಾರೆ.
ತಂದೆ ರಮೇಶ್ ಲಾಖೆ ಪಾರ್ಶ್ವವಾಯು ಆಗಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದು ಕುಟುಂಬವನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ದೂಡಿತ್ತು ಎನ್ನಲಾಗಿದೆ. ಗುರುವಾರ ಮುಂಜಾನೆ ಇಬ್ಬರು ಸಹೋದರರು ತಮ್ಮ ಪ್ರಾಣವನ್ನು ಕೊನೆಗೊಳಿಸಿದ ಹಳಿಗಳಿಗೆ ಹೋಗುವ ದಾರಿಯಲ್ಲಿ ಅಡಿಕೆ ಅಂಗಡಿಯವನ ಹೇಳಿಕೆ ಸೇರಿ ಅನೇಕ ಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).