ಆ.1ರಿಂದ 7 ಮಹತ್ವದ ಆರ್ಥಿಕ ಬದಲಾವಣೆಗಳು 
ದೇಶ

ಎಲ್​ಪಿಜಿ ಸಿಲಿಂಡರ್​, ಐಟಿಆರ್ ದಂಡ​... ಆ.1ರಿಂದ 7 ಮಹತ್ವದ ಆರ್ಥಿಕ ಬದಲಾವಣೆಗಳು! Financial Changes

ಪ್ರಮುಖ ಮುಖ್ಯಾಂಶಗಳು

  • ಹೊಸ ಎಲ್​ಪಿಜಿ, ATF ಬೆಲೆಗಳು ಆಗಸ್ಟ್ 1ರಿಂದ ಜಾರಿಗೆ
  • ರೈಲ್ವೆ ತತ್ಕಾಲ್ ಬುಕಿಂಗ್ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆ
  • CKYC 2.0 ಅನುಷ್ಠಾನದೊಂದಿಗೆ KYC ಪ್ರಕ್ರಿಯೆ ಸುಲಭ
  • ಜುಲೈ 31ರ ನಂತರ ಐಟಿಆರ್ ಸಲ್ಲಿಕೆಗೆ ಭಾರಿ ದಂಡ
Financial Changes: ಸಾಮಾನ್ಯ ಜನರಿಗೆ ಮತ್ತು ತೆರಿಗೆದಾರರಿಗೆ ಆಗಸ್ಟ್​ 01ರಿಂದಲೇ ಸಾಕಷ್ಟು ಹೊಸ ಬದಲಾವಣೆಗಳು ಗೋಚರಿಸಲಿವೆ. ಮೊದಲ ದಿನದಿಂದ ದೇಶಾದ್ಯಂತ ಹಲವು ಆರ್ಥಿಕ ಬದಲಾವಣೆಗಳು ಬರಲಿದ್ದು, ಅಡುಗೆ ಮನೆಯ ಎಲ್​ಪಿಜಿಯಿಂದ ಹಿಡಿದು ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟದವರೆಗೆ ಎಲ್ಲದರ ಮೇಲೆ ಭಾರಿ ಪರಿಣಾಮ ಬೀರಲಿದೆ.
ಎಲ್​ಪಿಜಿ ಸಿಲಿಂಡರ್ ಬೆಲೆಯಿಂದ ಬ್ಯಾಂಕಿಂಗ್ ಸೇವೆಗಳು, ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್ ಮತ್ತು ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಬದಲಾವಣೆಗಳು ಸಾಮಾನ್ಯ ಜನರ ನಿತ್ಯದ ವೆಚ್ಚಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಸಂಪೂರ್ಣ ವಿವರ ಹೀಗಿದೆ ಗಮನಿಸಿ.

ಎಲ್​ಪಿಜಿ ಸಿಲಿಂಡರ್ ಬೆಲೆ

ಪ್ರತಿ ತಿಂಗಳ ಮೊದಲನೆಯ ದಿನ, ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ದೇಶೀಯ ಮತ್ತು ವಾಣಿಜ್ಯ ಗ್ಯಾಸ್​ ಸಿಲಿಂಡರ್‌ಗಳ ಬೆಲೆಗಳನ್ನು ಪರಿಶೀಲಿಸುತ್ತವೆ ಮತ್ತು ಹೊಸ ಬೆಲೆಗಳನ್ನು ಪ್ರಕಟಿಸುತ್ತವೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ದರದಲ್ಲಿ ನಡೆಯುತ್ತಿರುವ ಏರಿಳಿತಗಳು ಮತ್ತು ಭೌಗೋಳಿಕ ಪರಿಸ್ಥಿತಿಗಳ ಪ್ರಭಾವದಿಂದ ಈ ಬಾರಿಯೂ ಅನಿಲ ಬೆಲೆಯಲ್ಲಿ ಭಾರಿ ಬದಲಾವಣೆಯಾಗಬಹುದು ಎಂದು ಮಾರುಕಟ್ಟೆಯ ಮೂಲಗಳು ಭವಿಷ್ಯ ನುಡಿದಿವೆ. ಆಗಸ್ಟ್ 1ರಂದು ಏರಿಕೆ ಅಥವಾ ಇಳಿಕೆಯ ಬಗ್ಗೆ ಸ್ಪಷ್ಟತೆ ಸಿಗಲಿದೆ.

ಎಟಿಎಫ್ ಬೆಲೆ, ವಿಮಾನ ದರ ಮೇಲೆ ಪರಿಣಾಮ

ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲನೆಯ ದಿನ ಏವಿಯೇಷನ್ ಟರ್ಬೈನ್ ಇಂಧನ (ATF) ಬೆಲೆಗಳನ್ನು ಪರಿಷ್ಕರಿಸುತ್ತವೆ. ಎಟಿಎಫ್ ಬೆಲೆಗಳಲ್ಲಿ ಹೆಚ್ಚಳ ಅಥವಾ ಇಳಿಕೆ ನೇರವಾಗಿ ವಿಮಾನ ಟಿಕೆಟ್ ದರಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಆಗಸ್ಟ್ 1ರಿಂದ ವಿಮಾನ ಪ್ರಯಾಣ ವೆಚ್ಚದಲ್ಲಿ ಭಾರಿ ಬದಲಾವಣೆ ಆಗುವ ನಿರೀಕ್ಷೆಗಳಿವೆ.

ರೈಲ್ವೆ ತತ್ಕಾಲ್ ಟಿಕೆಟ್ ಬುಕ್ಕಿಂಗ್​ನಲ್ಲಿ ಹೊಸ ನಿಯಮ

ಆ.1ರಿಂದ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಸುಲಭವಾಗಲಿದೆ. ಭಾರತೀಯ ರೈಲ್ವೆ ಹೊಸ ನೀತಿಯನ್ನು ಜಾರಿಗೆ ತರುತ್ತಿದ್ದು, ಮೀಸಲಾತಿ ಕೌಂಟರ್‌ಗಳಲ್ಲಿ ಟೋಕನ್‌ಗಳ ವಿತರಣೆಯ ಸಮಯವನ್ನು ತತ್ಕಾಲ್ ಬುಕಿಂಗ್‌ನ ಪ್ರಾರಂಭದ ಸಮಯಕ್ಕೆ ಲಿಂಕ್ ಮಾಡಲಾಗುತ್ತದೆ. ಇದರಿಂದ ಪ್ರಯಾಣಿಕರು ಪ್ರತ್ಯೇಕ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಕಡಿಮೆಯಾಗುತ್ತದೆ. ಬುಕ್ಕಿಂಗ್ ಪ್ರಕ್ರಿಯೆ ಕೂಡ ಅತ್ಯಂತ ವೇಗವಾಗಿ ಆಗುವ ಸಾಧ್ಯತೆ ಇದೆ.

ಕ್ರೆಡಿಟ್ ಕಾರ್ಡ್ ಶುಲ್ಕ, ಬ್ಯಾಂಕ್ ಸೇವೆಗಳಲ್ಲಿ ಬದಲಾವಣೆ

ಕೆಲವು ಬ್ಯಾಂಕ್‌ಗಳು ಸೇವಾ ಶುಲ್ಕಗಳು, ಕ್ರೆಡಿಟ್ ಕಾರ್ಡ್ ಆಫರ್​ಗಳು, ಎಸ್​ಎಂಎಸ್​ ಎಚ್ಚರಿಕೆ ಶುಲ್ಕಗಳು ಮತ್ತು ಇತರ ಸೇವಾ ಶುಲ್ಕಗಳಲ್ಲಿ ಬದಲಾವಣೆಗಳು ಆಗಲಿವೆ. ಇದರಿಂದ ಕೆಲವು ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳಬಹುದು. ಗ್ರಾಹಕರು ತಮ್ಮ ಬ್ಯಾಂಕ್‌ನಿಂದ ಇತ್ತೀಚಿನ ಅಧಿಸೂಚನೆಗಳನ್ನು ಪರಿಶೀಲಿಸುವುದು ಉತ್ತಮ.

CKYC 2.0 ಅನುಷ್ಠಾನ

ಕೇಂದ್ರೀಯ ಕೆವೈಸಿ (CKYC 2.0) ವ್ಯವಸ್ಥೆಯು ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ಹೀಗಾಗಿ, ಬ್ಯಾಂಕ್‌ಗಳು, ವಿಮಾ ಕಂಪನಿಗಳು ಮತ್ತು ಮ್ಯೂಚುವಲ್ ಫಂಡ್ ಕಂಪನಿಗಳೊಂದಿಗೆ ಹೊಸ ಖಾತೆಗಳನ್ನು ತೆರೆಯುವಾಗ ಅಥವಾ ಹೊಸ ಹೂಡಿಕೆಗಳನ್ನು ಮಾಡುವಾಗ ಪದೇ ಪದೇ ಕೆವೈಸಿ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ. ಒಮ್ಮೆ ನೋಂದಾಯಿಸಿದ ನಂತರ, ವಿವರಗಳನ್ನು ಇತರ ಉದ್ದೇಶಗಳಿಗಾಗಿ ಸುಲಭವಾಗಿ ಬಳಸಬಹುದು.

ತಡವಾಗಿ ಐಟಿಆರ್ ಸಲ್ಲಿಸಿದ್ರೆ ದಂಡ

ಲೆಕ್ಕಪರಿಶೋಧನೆಯ ಅಗತ್ಯವಿಲ್ಲದ ವೈಯಕ್ತಿಕ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಅನ್ನು ಸಲ್ಲಿಸಲು ಜುಲೈ 31 ರವರೆಗೆ ಕಾಲಾವಕಾಶವಿದೆ. ಅದಾದ ಬಳಿಕ, ಅಂದರೆ ಆಗಸ್ಟ್ 1ರಿಂದ, ಐಟಿಆರ್ ಅನ್ನು ಸಲ್ಲಿಸುವವರು ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ಅನ್ವಯವಾಗುವ ದಂಡ, ಬಡ್ಡಿ ಅಥವಾ ಇತರ ದಂಡವನ್ನು ಪಾವತಿಸಬೇಕು.

FMCG, ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಹೆಚ್ಚಳ

ಹಬ್ಬ ಹರಿದಿನಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ಹಲವು ಗ್ರಾಹಕ ವಸ್ತುಗಳ ಬೆಲೆಯೂ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಎಫ್‌ಎಂಸಿಜಿ ಉತ್ಪನ್ನಗಳಾದ ಚಹಾ, ಸಾಬೂನು ಮತ್ತು ಹೇರ್​ ಆಯಿಲ್​ ಬೆಲೆಗಳು ಶೇ.6ರಿಂದ 8 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಇದಲ್ಲದೆ, ಟಿವಿ, ರೆಫ್ರಿಜರೇಟರ್‌ ಮತ್ತು ವಾಷಿಂಗ್ ಮಿಷನ್​ನಂತಹ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಗಳು ಶೇ.4ರಿಂದ 6ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಮೆಮೊರಿ ಚಿಪ್ ಬೆಲೆಯ ಪ್ರಭಾವದಿಂದ ಸ್ಮಾರ್ಟ್ ಫೋನ್​ಗಳು ಕೂಡ ದುಬಾರಿಯಾಗಲಿವೆ ಎನ್ನುತ್ತವೆ ಮಾರುಕಟ್ಟೆಯ ಮೂಲಗಳು. ಇನ್‌ಪುಟ್ ವೆಚ್ಚಗಳು ಹೆಚ್ಚಾದಂತೆ ಕೆಲವು ಆಟೋಮೊಬೈಲ್ ಕಂಪನಿಗಳು ಕಾರು ಬೆಲೆಗಳನ್ನು ಪರಿಷ್ಕರಿಸುವ ಸಾಧ್ಯತೆಯಿದೆ,(ಏಜೆನ್ಸೀಸ್).