ತಮಿಳುನಾಡಿನಲ್ಲಿ ಅಂತಿಮ ಎಸ್‌ಐಆರ್ ಪಟ್ಟಿ ಬಿಡುಗಡೆ: 74 ಲಕ್ಷ ಮತದಾರರ ಹೆಸರು ಡಿಲೀಟ್ 
ದೇಶ

ತಮಿಳುನಾಡಿನಲ್ಲಿ ಅಂತಿಮ ಎಸ್‌ಐಆರ್ ಪಟ್ಟಿ ಬಿಡುಗಡೆ: 74 ಲಕ್ಷ ಮತದಾರರ ಹೆಸರು ಡಿಲೀಟ್ | SIR in Tamil Nadu

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಭಾರತೀಯ ಚುನಾವಣಾ ಆಯೋಗವು ರಾಜ್ಯದ ಅಂತಿಮ ಮತದಾರರ ಪಟ್ಟಿಯನ್ನು(SIR in Tamil Nadu) ಬಿಡುಗಡೆ ಮಾಡಿದೆ. ಈ ಬಾರಿ ನಡೆಸಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಅಭಿಯಾನದಲ್ಲಿ ಬರೋಬ್ಬರಿ 74 ಲಕ್ಷಕ್ಕೂ ಅಧಿಕ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಮೂಲಕ ಆಯೋಗವು ಭಾರಿ ಸಂಚಲನ ಮೂಡಿಸಿದೆ.

6.41 ಕೋಟಿಯಿಂದ 5.67 ಕೋಟಿಗೆ ಕುಸಿದ ಮತದಾರರ ಸಂಖ್ಯೆ!

ಪರಿಷ್ಕರಣೆಗೂ ಮುನ್ನ ತಮಿಳುನಾಡಿನಲ್ಲಿ ಒಟ್ಟು 6.41 ಕೋಟಿ ನೋಂದಾಯಿತ ಮತದಾರರಿದ್ದರು. ಆದರೆ, ಅಂತಿಮ ಪಟ್ಟಿ ಪ್ರಕಟವಾದ ನಂತರ ಈ ಸಂಖ್ಯೆ 5.67 ಕೋಟಿಗೆ ಇಳಿಕೆಯಾಗಿದೆ. ತಮಿಳುನಾಡು ಮುಖ್ಯ ಚುನಾವಣಾಧಿಕಾರಿ ಅರ್ಚನಾ ಪಟ್ನಾಯಕ್ ಅವರು ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಅಂಕಿಅಂಶಗಳನ್ನು ಹಂಚಿಕೊಂಡಿದ್ದಾರೆ.

ಅಂತಿಮ ಪಟ್ಟಿಯ ವಿವರ

ಪುರುಷ ಮತದಾರರು: 2.77 ಕೋಟಿ
ಮಹಿಳಾ ಮತದಾರರು: 2.89 ಕೋಟಿ (ಪುರುಷರಿಗಿಂತ ಮಹಿಳೆಯರೇ ಹೆಚ್ಚು)
ತೃತೀಯ ಲಿಂಗಿಗಳು: 7,617

ಹೆಸರುಗಳನ್ನು ಕೈಬಿಟ್ಟಿದ್ದೇಕೆ..?

ದಾಖಲೆಗಳ ಪರಿಶೀಲನೆ, ಮರಣ ಹೊಂದಿದವರು, ಸ್ಥಳಾಂತರಗೊಂಡವರು ಮತ್ತು ಎರಡು ಬಾರಿ ಹೆಸರು ನೋಂದಾಯಿಸಿಕೊಂಡವರನ್ನು ಪತ್ತೆ ಹಚ್ಚಿ ಈ ಕ್ರಮ ಕೈಗೊಳ್ಳಲಾಗಿದೆ. ವಿಶೇಷವೆಂದರೆ, 2025 ಡಿಸೆಂಬರ್ 19 ರಿಂದ 2026 ಜನವರಿ, 30 ರ ನಡುವೆ ಸಾರ್ವಜನಿಕರಿಂದಲೇ ಸುಮಾರು 4.38 ಲಕ್ಷ ಜನರು ತಮ್ಮ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 4.23 ಲಕ್ಷ ಅರ್ಜಿಗಳನ್ನು ಅಂಗೀಕರಿಸಿ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ.

ಸುಪ್ರೀಂ ಕೋರ್ಟ್ ಆದೇಶದಂತೆ ಪಾರದರ್ಶಕತೆ

ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದಂತೆ, ಮತದಾರರ ಪಟ್ಟಿಯಲ್ಲಿರುವ ತಾರ್ಕಿಕ ವ್ಯತ್ಯಾಸಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗಿತ್ತು. ಗ್ರಾಮ ಪಂಚಾಯತ್ ಕಚೇರಿಗಳು ಮತ್ತು ವಾರ್ಡ್ ಕಚೇರಿಗಳಲ್ಲಿ ಪಟ್ಟಿಯನ್ನು ಪ್ರದರ್ಶಿಸಿ, ಸಾರ್ವಜನಿಕರ ಆಕ್ಷೇಪಣೆಗಳನ್ನು ಆಲಿಸಿದ ನಂತರವೇ ಈ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಚುನಾವಣಾ ಕಣ ಸಿದ್ಧ

ಈ ವರ್ಷದ ಬೇಸಿಗೆಯಲ್ಲಿ ತಮಿಳುನಾಡು ಮಾತ್ರವಲ್ಲದೆ ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿಯೂ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ನಿಖರವಾದ ಮತದಾರರ ಪಟ್ಟಿಯು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).