ಹೋರಾಡುತ್ತೇನೆ ಇಲ್ಲವೇ ಸಾಯುತ್ತೇನೆ! ಕೋಲ್ಕತ್ತಾದಲ್ಲಿ ಮಮತಾ ಸತ್ಯಾಗ್ರಹ! ಮೈಕ್, ಸ್ಟೇಜ್ ನಿರಾಕರಿಸಿದ ಪೊಲೀಸರ ವಿರುದ್ಧ ದೀದಿ ಕಿಡಿ! 
ದೇಶ

ಹೋರಾಡುತ್ತೇನೆ ಇಲ್ಲವೇ ಸಾಯುತ್ತೇನೆ! ಕೋಲ್ಕತ್ತಾದಲ್ಲಿ ಮಮತಾ ಸತ್ಯಾಗ್ರಹ! ಮೈಕ್, ಸ್ಟೇಜ್ ನಿರಾಕರಿಸಿದ ಪೊಲೀಸರ ವಿರುದ್ಧ ದೀದಿ ಕಿಡಿ! Mamata Protest In Kolkata

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಗದ್ದುಗೆಯಿಂದ ಕೆಳಗಿಳಿದ ತಕ್ಷಣವೇ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ ಸುಪ್ರೀಂ ಮಮತಾ ಬ್ಯಾನರ್ಜಿ (Mamata Protest In Kolkata) ಮತ್ತೊಮ್ಮೆ ಬೀದಿ ಹೋರಾಟಕ್ಕೆ ಧುಮುಕಿದ್ದಾರೆ. ತಮ್ಮ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಮೇಲೆ, ಅದರಲ್ಲೂ ಮುಖ್ಯವಾಗಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ನಡೆಯುತ್ತಿರುವ ಸರಣಿ ದಾಳಿಗಳು ಹಾಗೂ ಚುನಾವಣೋತ್ತರ ಹಿಂಸಾಚಾರವನ್ನು ಖಂಡಿಸಿ ಮಂಗಳವಾರ ಕೋಲ್ಕತ್ತಾದ ಹೃದಯಭಾಗದಲ್ಲಿ ದೀದಿ ಧರಣಿ ಆರಂಭಿಸಿದ್ದಾರೆ.

ಖೆಲಾ ಹೋಬೆ ಬೆನ್ನಲ್ಲೇ ಮರೋ ಇಲ್ಲವೇ ಮಡಿಯೋ ಮಂತ್ರ; ರಸ್ತೆ ಮಧ್ಯದಲ್ಲೇ ಕುಳಿತ ದೀದಿ!

ಕೋಲ್ಕತ್ತಾದ ಎಸ್‌ಪ್ಲನೇಡ್‌ನ ವೈ-ಚಾನೆಲ್ ವೃತ್ತದಲ್ಲಿ ಮಮತಾ ತಮ್ಮ ನೂರಾರು ಬೆಂಬಲಿಗರೊಂದಿಗೆ ಧರಣಿ ಕುಳಿತಿದ್ದಾರೆ. ಟಿಎಂಸಿ ಮೂಲಗಳ ಪ್ರಕಾರ, ಮೊದಲು ರಾಣಿ ರಾಶ್ಮೋನಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಕೋರಲಾಗಿತ್ತು. ಆದರೆ, ಕೋಲ್ಕತ್ತಾ ಪೊಲೀಸರು ಭದ್ರತೆಯ ನೆಪವೊಡ್ಡಿ ಇಡೀ ಸತ್ಯಾಗ್ರಹಕ್ಕೆ ಅನುಮತಿ ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಮಮತಾ ಬ್ಯಾನರ್ಜಿ, ರಸ್ತೆ ಮಧ್ಯದಲ್ಲೇ ಕುಳಿತು, ನಾನು ಬಂಗಾಳದ ಜನರಿಗಾಗಿ ಹೋರಾಡುತ್ತೇನೆ ಇಲ್ಲವೇ ಸಾಯುತ್ತೇನೆ ಎಂದು ಘೋಷಣೆಗಳನ್ನು ಕೂಗುತ್ತಾ ಮೈದಾನಕ್ಕಿಳಿದಿದ್ದಾರೆ.
ವೇದಿಕೆ ನಿರ್ಮಿಸಲು ಹಾಗೂ ಮೈಕ್ರೋಫೋನ್ ಬಳಸಲು ಪೊಲೀಸರು ಬಿಡದಿದ್ದಾಗ, ಮಮತಾ ಬ್ಯಾನರ್ಜಿ ಅವರು ಕೈಯಲ್ಲೇ ಹ್ಯಾಂಡ್ ಮೆಗಾಫೋನ್ ಹಿಡಿದು ನೆರೆದಿದ್ದ ಸಹಸ್ರಾರು ಕಾರ್ಯಕರ್ತರನ್ನು ಉದ್ದೇಶಿಸಿ ಘರ್ಜಿಸಿದ್ದಾರೆ. ಈ ವೇಳೆ ಇಡೀ ಕೋಲ್ಕತ್ತಾ ನಗರ ಟಿಎಂಸಿ ಕಾರ್ಯಕರ್ತರ ಗದ್ದಲ ಹಾಗೂ ಘೋಷಣೆಗಳಿಂದ ನಡುಗಿಹೋಯಿತು.

ಅಭಿಷೇಕ್ ಮೇಲಿನ ದಾಳಿ ಮತ್ತು ಬೀದಿಬದಿ ವ್ಯಾಪಾರಿಗಳ ತೆರವು: ಮುಂದುವರಿದ ಪ್ರತಿಭಟನಾ ಕಿಡಿ!

ಕಳೆದ ಶನಿವಾರ ಸೋನಾರ್‌ಪುರದಲ್ಲಿ ಟಿಎಂಸಿ ಸಂಸದ ಹಾಗೂ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ನಡೆದ ಭೀಕರ ಮೊಟ್ಟೆ ಮತ್ತು ಕಲ್ಲು ತೂರಾಟದ ಘಟನೆಯೇ ಈ ಮಹಾ ಧರಣಿಗೆ ಮುಖ್ಯ ಕಾರಣವಾಗಿದೆ. ಇದರೊಂದಿಗೆ ರಾಜ್ಯಾದ್ಯಂತ ಟಿಎಂಸಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ಎಸಗಲಾಗುತ್ತಿದೆ ಮತ್ತು ಬೀದಿಬದಿ ವ್ಯಾಪಾರಿಗಳನ್ನು ಕಾನೂನುಬಾಹಿರವಾಗಿ ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಮಮತಾ ತೀವ್ರ ಆಪಾದನೆ ಮಾಡಿದ್ದಾರೆ.
ಈ ಧರಣಿ ಸತ್ಯಾಗ್ರಹದಲ್ಲಿ ಮಮತಾ ಅವರಿಗೆ ಪಕ್ಷದ ಹಿರಿಯ ನಾಯಕರಾದ ಮದನ್ ಮಿತ್ರಾ, ಡೆರೆಕ್ ಒಬ್ರಿಯನ್, ಕಲ್ಯಾಣ್ ಬ್ಯಾನರ್ಜಿ ಮತ್ತು ಡೋಲಾ ಸೇನ್ ಸೇರಿದಂತೆ ಘಟಾನುಘಟಿ ನಾಯಕರು ಸಾಥ್ ನೀಡಿದ್ದಾರೆ. ಪೂರ್ವಯೋಜಿತವಾಗಿ ಇಡೀ ಸಂಜೆಯವರೆಗೂ ಈ ಪ್ರತಿಭಟನೆ ಮುಂದುವರಿಯಲಿದೆ ಎಂದು ಟಿಎಂಸಿ ಘೋಷಿಸಿದೆ.
ಪಶ್ಚಿಮ ಬಂಗಾಳದಲ್ಲಿ ೧೫ ವರ್ಷಗಳ ಸುದೀರ್ಘ ಆಡಳಿತ ಮುಕ್ತಾಯವಾಗಿ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಎದ್ದಿರುವ ಈ ಪ್ರತಿಭಟನೆಯ ಕಿಡಿ, ಮುಂಬರುವ ದಿನಗಳಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆಗೆ ಭೀಕರ ಸವಾಲಾಗಿ ಪರಿಣಮಿಸುವುದರಲ್ಲಿ ಯಾವುದೇ ಸಂಶಯವಿಲ್ಲ,(ಏಜೆನ್ಸೀಸ್​).