ಘಟನೆಯ ಸ್ಥಳ 
ದೇಶ

ಭೀಕರ ಎನ್​ಕೌಂಟರ್; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನ ಇಬ್ಬರನ್ನು ಹೊಡೆದಾಕಿದ ಹರಿಯಾಣ ಪೊಲೀಸರು | Encounter

ಚಂಡೀಗಢ: ಹರಿಯಾಣದ ಬಹದ್ದೂರ್​ಗಢದಲ್ಲಿ ಇಂದು(ಜು. 05) ಬೆಳಗ್ಗೆ ಪೊಲೀಸರು ಮತ್ತು ಕ್ರಿಮಿನಲ್ಸ್​ಗಳ ಮಧ್ಯೆ ಭೀಕರ ಎನ್​ಕೌಂಟರ್(Encounter) ನಡೆದಿದ್ದು, ಘಟನೆಯಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನ ಇಬ್ಬರು ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ.
ದೆಹಲಿ ಪೊಲೀಸ್ ವಿಶೇಷ ಇಂಟೆಲಿಜೆನ್ಸ್ ಯೂನಿಟ್ ಮತ್ತು ಹರಿಯಾಣ ಎಸ್​ಐಟಿ ತಂಡ ಜಂಟಿಯಾಗಿ ಕಾರ್ಯಾಚರಣೆಯಲ್ಲಿ ನಡೆಸಿವೆ. ಹತ್ಯೆಯಾದ ಆರೋಪಿಗಳನ್ನು ಹಿಸಾರ್‌ನ ಪ್ರವೇಶ್ ಮತ್ತು ಜಾಖೋಡ್ ಖೇರಾ ಗ್ರಾಮದ ಹಿಮಾಂಶು ಎಂದು ಗುರುತಿಸಲಾಗಿದೆ. ಈ ಹಿಂದೆ ಇಬ್ಬರಿಗೆ ಹರಿಯಾಣ ಪೊಲೀಸರು ತಲಾ 1 ಲಕ್ಷ ರೂ. ಬಹುಮಾನ ಘೋಷಿಸಿದ್ದರು.
ಈ ಕುರಿತು ಮಾತನಾಡಿರುವ ಹರಿಯಾಣ ಎಸ್‌ಟಿಎಫ್ ಎಸ್‌ಪಿ ವಿಕ್ರಾಂತ್ ಭೂಷಣ್, ಮೃತಪಟ್ಟ ಆರೋಪಿಗಳು ಜೂನ್ 11ರಂದು ಹನ್ಸಿಯಲ್ಲಿ ನಡೆದ ಕಪಿಲ್ ಎಂಬ ಜಿಮ್ ಆಪರೇಟರ್‌ನ ಕೊಲೆ ಪ್ರಕರಣದಲ್ಲಿ ಇವರು ಪ್ರಮುಖ ಆರೋಪಿಗಳಾಗಿದ್ದು, ಇಂದು ಮತ್ತೊಂದು ಗಂಭೀರ ಅಪರಾಧ ಮಾಡಲು ಬಹದ್ದೂರ್‌ಗಢಕ್ಕೆ ಬಂದಿದ್ದರು.
ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಅವರನ್ನು ಸುತ್ತುವರೆದು ಶರಣಾಗಲು ಸೂಚಿಸಲಾಯಿತು. ಆದರೆ ಆರೋಪಿಗಳು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು. ಬಳಿಕ ಆತ್ಮರಕ್ಷಣೆಗಾಗಿ ಪೊಲೀಸರು ಪ್ರತಿಯಾಗಿ ಗುಂಡು ಹಾರಿಸಬೇಕಾಯಿತು. ದಾಳಿಯಲ್ಲಿ ಇಬ್ಬರು ಆರೋಪಿಗಳು ಮತ್ತು ದೆಹಲಿ ಪೊಲೀಸ್ ವಿಶೇಷ ಘಟಕದ ಕಾನ್‌ಸ್ಟೆಬಲ್ ಅಂಕಿತ್ ಅವರ ಕಾಲಿಗೆ ಗುಂಡೇಟು ತಗುಲಿದೆ ಎಂದು ಹೇಳಿದ್ದಾರೆ.
ಗಾಯಗೊಂಡ ಮೂವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದಾಗ್ಯೂ, ಚಿಕಿತ್ಸೆ ಪಡೆಯುತ್ತಿರುವಾಗ ಇಬ್ಬರೂ ಆರೋಪಿಗಳು ಸಾವನ್ನಪ್ಪಿದ್ದಾರೆ. ಕಾನ್‌ಸ್ಟೆಬಲ್ ಅಂಕಿತ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತು ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).