ಅಯ್ಯೋ ಇವನು ಅವನಲ್ಲ... ಮಂಟಪದಲ್ಲಿ ನೇರವಾಗಿ ವರನ ನೋಡುತ್ತಿದ್ದಂತೆ ಮದುವೆ ಬೇಡವೆಂದ ವಧು! Bride Calls Off Wedding 
ದೇಶ

ಅಯ್ಯೋ ಇವನು ಅವನಲ್ಲ... ಮಂಟಪದಲ್ಲಿ ನೇರವಾಗಿ ವರನ ನೋಡುತ್ತಿದ್ದಂತೆ ಮದುವೆ ಬೇಡವೆಂದ ವಧು! Bride Calls Off Wedding

ಪ್ರಮುಖ ಮುಖ್ಯಾಂಶಗಳು

  • ಮದುವೆ ಮಂಟಪಕ್ಕೆ ಬಂದ ವರನನ್ನು ನೋಡಿ ಕೊನೆಯ ಕ್ಷಣದಲ್ಲಿ ಮದುವೆಯಾಗಲು ವಧು ನಿರಾಕರಣೆ
  • ತೋರಿಸಿದ ಫೋಟೋದ ವ್ಯಕ್ತಿ ಬೇರೆ ಮಂಟಪಕ್ಕೆ ಬಂದ ವರನು ಬೇರೆ ಎಂದು ವಧುವಿನ ಗಂಭೀರ ಆರೋಪ
  • ಫೋಟೋ ಬದಲಿಸಿ ಮೋಸ ಮಾಡಲಾಗಿದೆ ಎಂದು ವಧು ವಾದಿಸಿದ ಹಿನ್ನೆಲೆಯಲ್ಲಿ ಕಲ್ಯಾಣ ಮಂಟಪದಲ್ಲಿ ಗೊಂದಲ
  • ವರನ ಕಡೆಯವರು ಆರೋಪ ತಳ್ಳಿಹಾಕಿದ ಕಾರಣ ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಚಿತ್ರ ವಿವಾಹ ಪ್ರಕರಣ
  • ಪೊಲೀಸರ ಸಮ್ಮುಖದಲ್ಲಿ ಮಾತುಕತೆ ನಡೆಸಿ ಮದುವೆ ರದ್ದುಗೊಳಿಸಿ ವಾಪಸಾದ ಎರಡೂ ಕುಟುಂಬಗಳು
Bride Calls Off Wedding : ಮದುವೆ ಮಂಟಪಕ್ಕೆ ಬಂದ ವರನ ಮುಖ ನೋಡಿ ಬೆಚ್ಚಿಬಿದ್ದ ವಧುವೊಬ್ಬಳು ಕೊನೆಯ ಕ್ಷಣದಲ್ಲಿ ಮದುವೆಯಾಗಲು ನಿರಾಕರಿಸಿದ ಅಚ್ಚರಿಯ ಘಟನೆ ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ನಿಗದಿಯಾಗಿದ್ದ ಮದುವೆಗೆ ರಾಜಸ್ಥಾನದ ಛತ್ತರ್‌ಗಢದಿಂದ ವರ ಹಾಗೂ ಆತನ ಕಡೆಯವರು ಅತ್ಯಂತ ಸಂಭ್ರಮದಿಂದ ಆಗಮಿಸಿದ್ದರು. ಆದರೆ, ಮಂಟಪದಲ್ಲಿ ನಡೆದ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಮದುವೆ ಶಾಸ್ತ್ರಗಳು ಆರಂಭವಾಗುವ ಮುನ್ನವೇ ಎಲ್ಲಾ ಸಡಗರಗಳು ಕ್ಷಣಾರ್ಧದಲ್ಲಿ ಕೊನೆಗೊಂಡವು.
ಮದುವೆ ವೇದಿಕೆಯಲ್ಲಿ ನಿಂತಿದ್ದ ವರನನ್ನು ಹತ್ತಿರದಿಂದ ಕಂಡ ವಧು ಒಂದು ಕ್ಷಣ ಆಘಾತಕ್ಕೆ ಒಳಗಾದಳು. ಏಕೆಂದರೆ, ಮದುವೆಗೂ ಮುನ್ನ ಆಕೆಗೆ ತೋರಿಸಿದ ಫೋಟೋದಲ್ಲಿ ಇದ್ದ ವರ ಹಾಗೂ ಈಗ ಮಂಟಪದಲ್ಲಿರುವ ವರ ಬೇರೆ ಬೇರೆ ಎಂಬುದು ವಧುವಿನ ವಾದ. ಅಂತಿಮವಾಗಿ ವಧು ಆ ಮದುವೆಯನ್ನೇ ನಿರಾಕರಿಸಿದಳು.
ಮುಂಬೈನಲ್ಲಿ 60 ರೂ.ಗೆ ಪಾನಿಪುರಿ ತಿಂದು ದುಬಾರಿ ಎಂದಿದ್ದ ರಷ್ಯಾ ಮಾಡೆಲ್ ದುಬೈನಲ್ಲಿ ಅದರ ಬೆಲೆ ಕೇಳಿ ದಂಗು! Russian model
ಮಧ್ಯವರ್ತಿಗಳು ನನಗೆ ಹಾಗೂ ನನ್ನ ತಾಯಿಗೆ ಬೇರೆ ಯುವಕನ ಸುಂದರವಾದ ಫೋಟೋ ತೋರಿಸಿ ವಂಚನೆ ಮಾಡಿದ್ದಾರೆ. ಕೊನೆಯ ಕ್ಷಣದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಮದುವೆಗಾಗಿ ಕರೆತರಲಾಗಿದೆ ಎಂದು ವಧು ವಾದಿಸಿದಳು. ಇದರಿಂದ ಕಲ್ಯಾಣ ಮಂಟಪದಲ್ಲಿ ಕೆಲ ಕಾಲ ಹೈಡ್ರಾಮ ಕೂಡ ನಡೆಯಿತು. ಮತ್ತೊಂದೆಡೆ ವರನ ಕಡೆಯವರು ಈ ಆರೋಪವನ್ನು ತಳ್ಳಿಹಾಕಿದ್ದು, ಮದುವೆಗೆ ಮುಂಚೆ ಎರಡೂ ಕುಟುಂಬಗಳ ನಡುವೆ ಮೊಬೈಲ್ ಮೂಲಕ ನಿರಂತರ ಮಾತುಕತೆ ನಡೆದಿತ್ತು ಎಂದೂ ಹಾಗೂ ವರನ ಅಸಲಿ ಫೋಟೋಗಳನ್ನು ಮೊದಲೇ ವಧುವಿನ ಕಡೆಯವರಿಗೆ ಕಳುಹಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿದರು.
ವಿವಾದ ಉಲ್ಬಣಗೊಂಡು ಪರಿಸ್ಥಿತಿ ಕೈಮೀರಿದಾಗ ಈ ಪ್ರಕರಣವು ಪೊಲೀಸ್ ಠಾಣೆಯ ಮೆಟ್ಟಿಲೇರಿತು. ಗುರು ಹರ್ ಸಹೈ ಉಪ ಪೊಲೀಸ್ ವರಿಷ್ಠಾಧಿಕಾರಿ (DSP) ತೇಜಿಂದರ್‌ಪಾಲ್ ಸಿಂಗ್ ನೇತೃತ್ವದಲ್ಲಿ ಎರಡೂ ಕಡೆಯವರ ಹೇಳಿಕೆಗಳನ್ನು ಪಡೆದು ತನಿಖೆ ಆರಂಭಿಸಲಾಯಿತು. ಅಂತಿಮವಾಗಿ ಪೊಲೀಸರ ಸಮ್ಮುಖದಲ್ಲಿಯೇ ಎರಡೂ ಕುಟುಂಬಗಳು ಪರಸ್ಪರ ಮಾತುಕತೆ ನಡೆಸಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡಿದ್ದು, ಯಾವುದೇ ಮದುವೆ ನೆರವೇರದೆ ಎರಡೂ ಕಡೆಯವರು ಬೇರ್ಪಡುವ ಮೂಲಕ ಈ ವಿಚಿತ್ರ ಪ್ರಸಂಗಕ್ಕೆ ತೆರೆಬಿದ್ದಿದೆ, (ಏಜೆನ್ಸೀಸ್​).