ಆ ನಕ್ಷತ್ರಗಳಲ್ಲಿ ಹುಟ್ಟಿದವರು ವ್ಯಭಿಚಾರಿಗಳೆಂದ ಜ್ಯೋತಿಷಿ: ನರಕವಾಯ್ತು ಮಹಿಳೆಯ ಸುಂದರ ಸಂಸಾರ! Female Stars 
ದೇಶ

ಆ ನಕ್ಷತ್ರಗಳಲ್ಲಿ ಹುಟ್ಟಿದವರು ವ್ಯಭಿಚಾರಿಗಳೆಂದ ಜ್ಯೋತಿಷಿ: ನರಕವಾಯ್ತು ಮಹಿಳೆಯ ಸುಂದರ ಸಂಸಾರ! Female Stars

ಪ್ರಮುಖ ಮುಖ್ಯಾಂಶಗಳು

  • ಹೆಣ್ಣು ನಕ್ಷತ್ರಗಳಲ್ಲಿ ಹುಟ್ಟಿದ ಮಹಿಳೆಯರು ಹಲವು ಪುರುಷರೊಂದಿಗೆ ಅಕ್ರಮ ಸಂಬಂಧ ಹೊಂದಿರುತ್ತಾರೆಂದ ಜ್ಯೋತಿಷಿ
  • ಜ್ಯೋತಿಷಿಯ ಈ ಹೇಳಿಕೆಯಿಂದ ಗಂಡನಲ್ಲಿ ಮೂಡಿದ ಅನುಮಾನದಿಂದ ಮಹಿಳೆಯೊಬ್ಬರ ಸುಂದರ ಸಂಸಾರ ನರಕ
  • ಇಂತಹ ಸುಳ್ಳು ಅಪಪ್ರಚಾರ ಹರಡಿದ ಆ ಜ್ಯೋತಿಷಿಯನ್ನು ತರಾಟೆಗೆ ತೆಗೆದುಕೊಂಡ ಜ್ಯೋತಿಷಿ ಹರಿ ಪತ್ತನಾಪುರಂ
Female Stars : ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜನಪ್ರಿಯತೆ ಹಾಗೂ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಜ್ಯೋತಿಷಿ ಹರಿ ಪತ್ತನಾಪುರಂ ಅವರು, ಜ್ಯೋತಿಷ್ಯ ಶಾಸ್ತ್ರದ ಹೆಸರಿನಲ್ಲಿ ನಡೆಯುವ ಸುಳ್ಳುಗಳು ಮತ್ತು ವಂಚನೆಗಳನ್ನು ತೀವ್ರವಾಗಿ ಟೀಕಿಸುವ ತಮ್ಮ ಭಿನ್ನ ಶೈಲಿಯ ಧೋರಣೆಯಿಂದಾಗಿ ಸದಾ ಗಮನ ಸೆಳೆದಿದ್ದಾರೆ. ಮೂಢನಂಬಿಕೆಗಳನ್ನು ವಿರೋಧಿಸುತ್ತಾ ಜ್ಯೋತಿಷ್ಯವನ್ನು ವಿಭಿನ್ನ ಹಾಗೂ ತಾರ್ಕಿಕ ದೃಷ್ಟಿಕೋನದಿಂದ ಜನರಿಗೆ ತಲುಪಿಸುವ ಅವರ ಇತ್ತೀಚಿನ ಹೊಸ ವಿಡಿಯೋ ಕೂಡ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹೆಣ್ಣು ನಕ್ಷತ್ರಗಳಲ್ಲಿ ಹುಟ್ಟಿದ ಮಹಿಳೆಯರು ಹಲವು ಪುರುಷರೊಂದಿಗೆ ಅಕ್ರಮ ಸಂಬಂಧ ಹೊಂದಿರುತ್ತಾರೆ ಎಂದು ಜ್ಯೋತಿಷಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವಿಡಿಯೋವೊಂದರ ಬಗ್ಗೆ ಹರಿ ಪತ್ತನಾಪುರಂ ಅವರು ಮಾತನಾಡಿದ್ದಾರೆ. ಈ ವಿಡಿಯೋ ಪ್ರಕಟವಾದ ಬೆನ್ನಲ್ಲೇ, ತನ್ನ ಪತಿ ತನ್ನನ್ನು ಶಂಕಿಸುತ್ತಿರುವುದರಿಂದ ಕೌಟುಂಬಿಕ ಜೀವನ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ನೊಂದ ಮಹಿಳೆಯೊಬ್ಬರು ತಮಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದನ್ನು ಹರಿ ಬಹಿರಂಗಪಡಿಸಿದ್ದಾರೆ.
ಈ ಗಂಭೀರ ಸಮಸ್ಯೆಯನ್ನು ಇಷ್ಟಕ್ಕೇ ಬಿಡದ ಹರಿ ಪತ್ತನಾಪುರಂ ಅವರು, ಸಮಾಜದಲ್ಲಿ ಇಂತಹ ಸುಳ್ಳು ಅಪಪ್ರಚಾರ ಹರಡಿದ ಆ ಜ್ಯೋತಿಷಿಗೆ ನೇರವಾಗಿ ಫೋನ್ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಮಹಿಳೆಯೊಬ್ಬರು ನನಗೆ ವಿಡಿಯೋ ಲಿಂಕ್ ಒಂದನ್ನು ಕಳುಹಿಸಿ, ಆ ವಿಡಿಯೋದಿಂದಾಗಿ ತಮ್ಮ ಸಂಸಾರದಲ್ಲಿ ಭಾರಿ ಬಿರುಗಾಳಿ ಎದ್ದಿದೆ ಎಂದು ಅಳಲು ತೋಡಿಕೊಂಡಿದ್ದರು. ಆ ವಿಡಿಯೋವನ್ನು ನೋಡಿದಾಗ, ಮುಖ ತೋರಿಸದ ಜ್ಯೋತಿಷಿಯೊಬ್ಬರು ಹಿನ್ನೆಲೆ ಧ್ವನಿಯಲ್ಲಿ ಕೆಲವು ನಿರ್ದಿಷ್ಟ ನಕ್ಷತ್ರಗಳಲ್ಲಿ ಹುಟ್ಟಿದ ಮಹಿಳೆಯರು ಅಕ್ರಮ ಸಂಬಂಧ ಹೊಂದಿರುತ್ತಾರೆ ಮತ್ತು ಅವರು ವ್ಯಭಿಚಾರಿಗಳು ಎಂದು ಜ್ಯೋತಿಷ್ಯದ ಹೆಸರಿನಲ್ಲಿ ವಿಶ್ಲೇಷಿಸುತ್ತಿದ್ದರು.
ಈಗಾಗಲೇ ಅನುಮಾನದ ಕಾಯಿಲೆಯಿಂದ ಬಳಲುತ್ತಿದ್ದ ಆ ಮಹಿಳೆಯ ಪತಿ, ಈ ವಿಡಿಯೋ ನೋಡಿ ತನ್ನ ಹೆಂಡತಿಯನ್ನು ಮತ್ತಷ್ಟು ಶಂಕಿಸಲು ಶುರುಮಾಡಿದ್ದಾನೆ. ಹೀಗೆ ಜ್ಯೋತಿಷ್ಯದ ಹೆಸರಿನಲ್ಲಿ ಇಂತಹ ಸುಳ್ಳು ವಿಡಿಯೋಗಳನ್ನು ಮಾಡುವುದರಿಂದ ಕೌಟುಂಬಿಕ ಜೀವನದಲ್ಲಿ ಎಂಥಾ ದಾರುಣ ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂಬುದನ್ನು ಯೋಚಿಸಿ ಎಂದು ಹರಿ ಪತ್ತನಾಪುರಂ ತೀವ್ರ ಕಳಕಳಿ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋದಲ್ಲಿ ಹರಿ ಪತ್ತನಾಪುರಂ ಅವರು ಆ ಸುಳ್ಳು ವಿಡಿಯೋ ಮಾಡಿದ ವ್ಯಕ್ತಿಗೆ ನೇರವಾಗಿ ಫೋನ್ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿರುವ ಆಡಿಯೋ ರೆಕಾರ್ಡಿಂಗ್ ಕೂಡ ಇದೆ. ನಿರ್ದಿಷ್ಟ ನಕ್ಷತ್ರದವರು ಅಕ್ರಮ ಸಂಬಂಧ ಹೊಂದಿರುತ್ತಾರೆ ಎಂದು ನೀವು ವಿಡಿಯೋ ಮಾಡುವುದರಿಂದ, ಈಗಾಗಲೇ ಅನುಮಾನದ ಕಾಯಿಲೆ ಇರುವವರ ಕೌಟುಂಬಿಕ ಜೀವನ ಸಂಪೂರ್ಣ ನರಕವಾಗುತ್ತದೆ. ಜನರ ಬದುಕನ್ನು ಹಾಳುಮಾಡುವ ಇಂತಹ ಮಾತುಗಳನ್ನು ಆಡದಿರುವುದೇ ಒಳ್ಳೆಯದು ಎಂದು ಹರಿ ಆ ವ್ಯಕ್ತಿಗೆ ಎಚ್ಚರಿಕೆ ನೀಡಿದ್ದಾರೆ.
ಅಷ್ಟೇ ಅಲ್ಲದೆ, ಜ್ಯೋತಿಷ್ಯದ ಹೆಸರಿನಲ್ಲಿ ಜನರಿಗೆ ಇಲ್ಲದ ಸುಳ್ಳುಗಳನ್ನು ಹೇಳಿ ಹಣ ಸುಲಿಗೆ ಮಾಡುವ ಹಾಗೂ ಸಂಸಾರವನ್ನು ಒಡೆಯುವ ಇಂತಹ ವಂಚಕರ ವಿರುದ್ಧ ತಮ್ಮ ಹೋರಾಟ ಮತ್ತು ಧ್ವನಿ ಸದಾ ಮುಂದುವರಿಯುತ್ತದೆ ಎಂದು ಹರಿ ಈ ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್​).