Train Accident ಸಾಂದರ್ಭಿಕ ಚಿತ್ರ 
ದೇಶ

ಒಂದು ಸೆಕೆಂಡಿನ ಧೈರ್ಯ, ಮಗುವಿಗೆ ಮರುಜನ್ಮ: ಹಳಿಗಳ ನಡುವೆ ಮಗುವನ್ನು ರಕ್ಷಿಸಿದ ತಂದೆಯ ಸಾಹಸದ ವಿಡಿಯೋ ವೈರಲ್! Train Accident

ಬಾಂಗ್ಲಾದೇಶ: ಬಾಂಗ್ಲಾದೇಶದ ಕಿಶೋರ್‌ಗಂಜ್ ಜಿಲ್ಲೆಯ ಭೈರಬ್ ರೈಲು ನಿಲ್ದಾಣದಲ್ಲಿ ಎದೆ ಜಲ್​ ಎನ್ನುವ ಘಟನೆಯೊಂದು ನಡೆದಿದೆ. ಒಂದು ವರ್ಷದ ಪುಟ್ಟ ಕಂದಮ್ಮ ಮತ್ತು ಅದರ ತಂದೆ ರೈಲು ಹಾಗೂ ಪ್ಲಾಟ್‌ಫಾರ್ಮ್ ನಡುವಿನ ಕಿರಿದಾದ ಅಂತರಕ್ಕೆ ಬಿದ್ದಿದ್ದು, (Train Accident) ಈ ವೇಳೆ ಇಬ್ಬರೂ ಕೂದಲೆಳೆ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಸದ್ಯ ಈ ರೋಚಕ ರಕ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.

ಘಟನೆ ಏನು?

ವರದಿಗಳ ಪ್ರಕಾರ, ಕುಟುಂಬವು ಮಂಗಳವಾರ (ಏ.28) 3 ಗಂಟೆಯ ಸುಮಾರಿಗೆ ಢಾಕಾಗೆ ಹೋಗುವ ರೈಲಿಯಲ್ಲಿ ಪ್ರಯಾಣಿಸುತ್ತಿರುವಾಗ ಈ ಘಟನೆ ಸಂಭವಿಸಿದೆ. ಆದಾಗ್ಯೂ, ರೈಲು ಸುಮಾರು ಒಂದೂವರೆ ಗಂಟೆಗಳ ಕಾಲ ತಡವಾಗಿ ಬಂದಿದ್ದರಿಂದ ನಿಲ್ದಾಣದಲ್ಲಿ ಬಹಳ ಸಮಯ ನಿಲ್ಲಿಸಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬ ಆತುರದಿಂದ ಇಳಿಯಲು ನಿರ್ಧರಿಸಿತು.
ಈ ಅವಸರದಲ್ಲಿ ಅವರ ಮಗು ಕೈಯಿಂದ ಜಾರಿ ರೈಲು ಮತ್ತು ಫ್ಲಾಟ್​ಫಾರ್ಮ್​ ನಡುವಿನ ಕಿರಿದಾದ ಅಂತರಕ್ಕೆ ಬಿದ್ದಿತು. ಈ ಘಟನೆಯಿಂದ ಆಘಾತಗೊಂಡ ತಂದೆ ಯಾವುದೇ ರೀತಿಯಲ್ಲೂ ಸಮಯವನ್ನು ಹಾಳು ಮಾಡದೇ ಮಗುವನ್ನು ರಕ್ಷಿಸಲು ಕೆಳಗೆ ಹಾರಿ, ಮಗುವನ್ನು ಗಟ್ಟಿಯಾಗಿ ಹಿಡಿದು ಗೋಡೆಗೆ ಒರಗಿಕೊಂಡು ರೈಲು ಹೋಗುವವರೆಗೂ ಕಾದರು.
ಆದಾಗ್ಯೂ, ಚಲಿಸುವ ರೈಲಿನ ಬೋಗಿಗಳು ಅವರ ಮೇಲೆ ಹಾದುಹೋದರೂ, ತಂದೆ ಮತ್ತು ಮಗು ಇಬ್ಬರೂ ಪ್ರಾಣಾಪಾಯದಿಂದ ಪಾರಾದರು. ಸಂಪೂರ್ಣವಾಗಿ ರೈಲು ಹೋದ ನಂತರ ಜನರು ರಕ್ಷಣೆಗೆ ಧಾವಿಸಿ ಮಗು ಮತ್ತು ಅವರ ತಂದೆಯನ್ನು ಅಲ್ಲಿಂದ ಮೇಲೆತ್ತಿ ಯೋಗ ಕ್ಷೇಮ ವಿಚಾರಿಸಿದರು.
ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಅನೇಕ ನೆಟ್ಟಿಗರು, "ಮಗುವನ್ನು ಉಳಿಸಲು ತಂದೆ ತೋರಿದ ಧೈರ್ಯ ಅಪ್ರತಿಮ" ಎಂದು ಶ್ಲಾಘಿಸುತ್ತಿದ್ದಾರೆ. ಇನ್ನೂ ಕೆಲವರು ಚಲಿಸುವ ರೈಲನ್ನು ಹತ್ತುವ ಅಥವಾ ಇಳಿಯುವ ಸಾಹಸ ಮಾಡಬೇಡಿ ಎಂದು ರೈಲ್ವೆ ಇಲಾಖೆ ಪದೇ ಪದೇ ಎಚ್ಚರಿಸುತ್ತಿದ್ದರೂ ಇಂತಹ ಘಟನೆಗಳು ಮರುಕಳಿಸುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ.

ಎಚ್ಚರಿಕೆ ಮತ್ತು ಪಾಠ

ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವಿನ ಅಂತರವು ಯಾವಾಗಲೂ ಅಪಾಯಕಾರಿಯಾಗಿರುತ್ತದೆ. ತರಾತುರಿಯಲ್ಲಿ ರೈಲು ಹತ್ತುವುದು ಅಥವಾ ಇಳಿಯುವುದು ಜೀವಕ್ಕೆ ಕುತ್ತು ತರಬಲ್ಲದು. ಈ ಘಟನೆಯು ನಮಗೆ ಎಚ್ಚರಿಕೆಯ ಪಾಠವಾಗಿದೆ. ನಿಮ್ಮ ಒಂದು ಕ್ಷಣದ ಅವಸರವು ಇಡೀ ಕುಟುಂಬವನ್ನು ಸಂಕಷ್ಟಕ್ಕೆ ದೂಡಬಹುದು. ಅದೃಷ್ಟವಶಾತ್ ಈ ಘಟನೆಯಲ್ಲಿ ತಂದೆ-ಮಗು ಬದುಕುಳಿದಿದ್ದಾರೆ, ಆದರೆ ಪ್ರತಿ ಬಾರಿಯೂ ಅದೃಷ್ಟ ನಮ್ಮ ಪರವಾಗಿರುವುದಿಲ್ಲ (ಏಜೆನ್ಸೀಸ್​).