Fathers Love ಸಾಂದರ್ಭಿಕ ಚಿತ್ರ 
ದೇಶ

ಅಪ್ಪ ಎಲ್ಲಿ ಅಂತ ಕೇಳಬೇಡ...: ಕ್ಯಾನ್ಸರ್‌ನಿಂದ ಕಣ್ಮುಚ್ಚುವ ಮುನ್ನ ತಂದೆ ಹೇಳಿದ ಆ ಮಾತು ಕಣ್ಣೀರು ತರಿಸುತ್ತೆ! Fathers Love

Fathers Love: ಮಾರಕ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ತಂದೆಯೊಬ್ಬರು, ತಮ್ಮ ಸಾವು ಹತ್ತಿರದಲ್ಲಿದೆ ಎಂದು ತಿಳಿದಾಗ ತಮ್ಮ ಚಿಕ್ಕ ಮಗನೊಂದಿಗೆ ನಡೆಸಿದ ಹೃದಯಸ್ಪರ್ಶಿ ಸಂಭಾಷಣೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಭಾವನಾತ್ಮಕ ದೃಶ್ಯವು ಲಕ್ಷಾಂತರ ಜನರ ಮನ ಕರಗಿಸುವಂತೆ ಮಾಡಿದೆ.

ವೈರಲ್​ ವಿಡಿಯೋದಲ್ಲೇನಿದೆ?

'ವೋಕ್ ಎಮಿನೆಂಟ್' (Woke Eminent) ಎಂಬ ಎಕ್ಸ್ (X) ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮಾಸ್ಕ್ ಧರಿಸಿರುವ ತಂದೆ, ತಮ್ಮ ಪಕ್ಕದಲ್ಲೇ ಕುಳಿತಿರುವ ಸಣ್ಣ ಮಗನೊಂದಿಗೆ ಅತ್ಯಂತ ಶಾಂತವಾಗಿ ಮಾತನಾಡುತ್ತಿರುವುದನ್ನು ಕಾಣಬಹುದು.
ಮಗುವಿಗೆ ತಾನು ಸಾಯುತ್ತಿದ್ದೇನೆ ಎಂಬ ಆಘಾತಕಾರಿ ವಿಷಯವನ್ನು ನೇರವಾಗಿ ಹೇಳದೆ, ಮೃದುವಾಗಿ ವಿಷಯ ತಿಳಿಸಿದ ತಂದೆ, "ಮಂತ್ರ, ನಾನು ಎಲ್ಲಾದರೂ ದೂರ ಹೋದರೆ ಅಮ್ಮ ಹೇಳಿದಂತೆ ಕೇಳು, ಹಠ ಮಾಡಬೇಡ. ನಿನ್ನ ಅಮ್ಮ ಮತ್ತು ಇಬ್ಬರು ಸಹೋದರಿಯರನ್ನು ಚೆನ್ನಾಗಿ ನೋಡಿಕೋ. ಅಪ್ಪ ಎಲ್ಲಿಗೆ ಹೋದರು ಎಂದು ಕೇಳಬಾರದು. ನೀನು ನನ್ನನ್ನು ನೆನಪಿಸಿಕೊಂಡಾಗಲೆಲ್ಲಾ ನಾನು ನಿನ್ನ ಸುತ್ತಲೂ ಇರುತ್ತೇನೆ" ಎಂದು ಧೈರ್ಯ ತುಂಬಿದ್ದಾರೆ.
ಅಲ್ಲದೆ, ತಾನಿಲ್ಲದಿದ್ದರೂ ಮಗ ಯಾವಾಗಲೂ ಉತ್ಸಾಹದಿಂದಿರಬೇಕು ಎಂದು ಭರವಸೆ ನೀಡಿದ್ದಾರೆ. "ತಂದೆಯೊಬ್ಬರು ತಮ್ಮ ಮಗನೊಂದಿಗೆ ಕೊನೆಯ ಬಾರಿಗೆ ಮಾತನಾಡುತ್ತಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಪೋಸ್ಟ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್

ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆಯಾಗುತ್ತಿದ್ದಂತೆ ಬಳಕೆದಾರರ ವ್ಯಾಪಕ ಗಮನ ಸೆಳೆಯಿತು. ಕಾಮೆಂಟ್‌ಗಳಲ್ಲಿ ಹಲವರು "ನಾವು ಇತ್ತೀಚೆಗೆ ನೋಡಿದ ಅತ್ಯಂತ ಭಾವನಾತ್ಮಕ ವಿಡಿಯೋ ಇದಾಗಿದೆ" ಎಂದು ಬರೆದುಕೊಂಡಿದ್ದಾರೆ. ಇನ್ನು ಕೆಲವರು, "ಯಾವ ತಂದೆ ಮತ್ತು ಮಗನಿಗೂ ಇಂತಹ ಕಠಿಣ ಸನ್ನಿವೇಶ ಎದುರಾಗಬಾರದು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತಂದೆಯ ಮಾತಿನ ಆಳ ತಿಳಿಯದ ಆ ಮಗುವಿನ ಮುಗ್ಧ ಮುಖ ನೋಡಿದರೆ ಎಂಥವರ ಕಣ್ಣಲ್ಲೂ ನೀರು ಬರುತ್ತದೆ. ಆ ತಂದೆ ತನ್ನಿಲ್ಲದ ಜೀವನಕ್ಕೆ ಮಗನನ್ನು ಸಿದ್ಧಪಡಿಸುವುದು ಎಷ್ಟು ಕಷ್ಟಕರವಾಗಿರಬಹುದು ಎಂದು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎನ್ನುತ್ತಾ, ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಕುಟುಂಬಕ್ಕೆ ದೇವರು ನೀಡಲಿ ಎಂದು ನೆಟ್ಟಿಗರು ಪ್ರಾರ್ಥಿಸುತ್ತಿದ್ದಾರೆ (ಏಜೆನ್ಸೀಸ್​).