ಪಿ. ಜಯರಾಜ್ ಮತ್ತು ಮಗ ಜೆ. ಬೆನಿಕ್ಸ್
ಚೆನ್ನೈ: 2020ರಲ್ಲಿ ತಮಿಳುನಾಡಿನಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಸಾತಂಕುಲಂನ ತಂದೆ-ಮಗನನ್ನು ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ(ಮಾ. 23) ಮಧುರೈನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು, ಠಾಣೆಯ ಇನ್ಸ್‌ಪೆಕ್ಟರ್ ಸೇರಿ ಎಲ್ಲಾ 9 ಮಂದಿ ಪೊಲೀಸರು ದೋಷಿಗಳೆಂದು ತೀರ್ಪು ನೀಡಿದೆ.
2020ರ ಜೂನ್ನಲ್ಲಿ ತೂತುಕುಡಿ ಜಿಲ್ಲೆಯ ಸಾತಂಕುಲಂನಲ್ಲಿ ಕಸ್ಟಡಿ ಚಿತ್ರಹಿಂಸೆಯ ನಂತರ ಪಿ. ಜಯರಾಜ್ ಮತ್ತು ಅವರ ಮಗ ಜೆ. ಬೆನಿಕ್ಸ್ ಮೃತಪಟ್ಟಿದ್ದರು. ಇದು ಲಾಕಪ್ ಡೆತ್ ಎಂದು ತಮಿಳುನಾಡಿನಲ್ಲಿ ಭಾರಿ ಸಂಚಲವನ್ನು ಸೃಷ್ಟಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಪೊಲೀಸರನ್ನು ಬಂಧಿಸಲಾಗಿತ್ತು, ನಂತರ ಅವರನ್ನು ಅಮಾನತುಗೊಳಿಸಲಾಗಿತ್ತು.
ಆರೋಪಿಗಳಾದ ಇನ್ಸ್‌ಪೆಕ್ಟರ್ ಶ್ರೀಧರ್, ಸಬ್ ಇನ್ಸ್‌ಪೆಕ್ಟರ್‌ಗಳಾದ ಬಾಲಕೃಷ್ಣನ್, ರಘು ಗಣೇಶ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಮುರುಗನ್ ಮತ್ತು ಎ ಸಮದುರೈ,ಕಾನ್‌ಸ್ಟೆಬಲ್‌ಗಳಾದ ಎಂ. ಮುತ್ತುರಾಜ, ಎಸ್ ಚೆಲ್ಲಾದುರೈ, ಎಕ್ಸ್ ಥಾಮಸ್ ಫ್ರಾನ್ಸಿಸ್ , ಎಸ್ ವೈರಮುತ್ತು ಹಾಗೂ ವಿಶೇಷ ಸಬ್ ಇನ್ಸ್‌ಪೆಕ್ಟರ್ ಪಾಲ್ದುರೈ ಮಧುರೈ ಜೈಲು ಸೇರಿದ್ದಾರೆ. ಕೋವಿಡ್-19 ವೇಳೆ ಪಾಲ್ದುರೈ ನಿಧನರಾಗಿದ್ದು, ಉಳಿದ 9 ಆರೋಪಿಗಳು ಜೈಲು ಪಾಲಾಗಿದ್ದಾರೆ.
ಪ್ರಕರಣದ ತನಿಖೆ ನಡೆಸಿದ್ದ ಕೇಂದ್ರ ತನಿಖಾ ದಳ(ಸಿಬಿಐ), 2020 ಸೆಪ್ಟೆಂಬರ್ 25ರಂದು 9 ಪೊಲೀಸರು ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿತ್ತು. ಅದರಲ್ಲಿ ತನ್ನ ತಂದೆ ಜಯರಾಜ್ ಅವರನ್ನು ಸಾಥನ್‌ಕುಲಂ ಪೊಲೀಸ್ ಠಾಣೆಯಲ್ಲಿ ಬಂಧಿಸಿದ ನಂತರ, ಬಂಧನಕ್ಕೆ ವಿವರಣೆಯನ್ನು ಕೋರಿ ಬೆನಿಕ್ಸ್ ಠಾಣೆಗೆ ಹೋಗಿದ್ದರು. ಈ ವೇಳೆ ಠಾಣೆಯಲ್ಲಿ ವಾಗ್ವಾದ ನಡೆದ ಬಳಿಕ ಪೊಲೀಸರು ತಂದೆ-ಮಗನನ್ನು ಕಸ್ಟಡಿಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮರುದಿನ ಬೆಳಿಗ್ಗೆ, ಸಂತ್ರಸ್ತರನ್ನು ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಇನ್ಸ್‌ಪೆಕ್ಟರ್ ಶ್ರೀಧರ್ ಪೊಲೀಸ್ ಠಾಣೆಯ ಮುಖ್ಯ ಸಭಾಂಗಣ ಮತ್ತು ಇತರ ಪ್ರದೇಶಗಳ ನೆಲವನ್ನು ಸ್ವಚ್ಛಗೊಳಿಸಲು ಕಸ ಗುಡಿಸುವವನಿಗೆ ಸೂಚಿಸಿ ಸಾಕ್ಷ್ಯಗಳನ್ನು ನಾಶಮಾಡಲು ಪ್ರಯತ್ನಿಸಿದರು ತನಿಖೆಯಲ್ಲಿ ತಿಳಿದು ಬಂದಿದ್ದು, ಬಲಿಪಶುಗಳ ರಕ್ತದ ಕಲೆಗಳಿರುವ ಬಟ್ಟೆಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಎರಡು ಬಾರಿ ಬದಲಾಯಿಸಲಾಯಿತು ಸಿಬಿಐ ಉಲ್ಲೇಖಿಸಿದೆ.
ಸಿಬಿಐ ಪ್ರಕಾರ, ಇಬ್ಬರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ತನಿಖೆಯಲ್ಲಿ ಜಯರಾಜ್ ಮತ್ತು ಬೆನಿಕ್ಸ್ ಕೋವಿಡ್-19 ಲಾಕ್‌ಡೌನ್ ಮಾನದಂಡಗಳನ್ನು ಉಲ್ಲಂಘಿಸಿಲ್ಲ ಮತ್ತು ಜೂನ್ 19 ರ ಸಂಜೆ ಸಾತಂಕುಲಂನ ಕಾಮರಾಜರ್ ಸಲೈನಲ್ಲಿ ಅವರ ಮತ್ತು ಪೊಲೀಸರ ನಡುವೆ ಯಾವುದೇ ವಾಗ್ವಾದ ನಡೆದಿಲ್ಲ. ವಿನಾಕಾರಣ ಬಂಧಿಸಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 116 ಸಾಕ್ಷ್ಯಗಳನ್ನು ಪರಿಗಣಿಸಿದ ಕೋರ್ಟ್ ಇಂದು ದೋಷಿ ಎಂದು ತೀರ್ಪು ನೀಡಿದೆ (ಏಜೆನ್ಸೀಸ್).