Delhi Police Families | ಜಂತರ್ ಮಂತರ್ ಗಲಭೆಯಲ್ಲಿ ಗಾಯಗೊಂಡ ಪೊಲೀಸರ ಪರ ಧ್ವನಿ ಎತ್ತಿದ ಕುಟುಂಬಸ್ಥರು
ನವದೆಹಲಿ: ಇತ್ತೀಚೆಗೆ ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ಗಾಯಗೊಂಡ ದೆಹಲಿ ಪೊಲೀಸ್ ಸಿಬ್ಬಂದಿಯ ಕುಟುಂಬಸ್ಥರು ಶುಕ್ರವಾರ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಪ್ರತಿಭಟನೆಯ ಸಮಯದಲ್ಲಿ ತಮ್ಮ ಕುಟುಂಬದ ಪೊಲೀಸ್ ಅಧಿಕಾರಿಗಳ (Delhi Police Families) ಮೇಲೆ ಭೀಕರ ದೌರ್ಜನ್ಯ ಮತ್ತು ಹಿಂಸಾಚಾರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ಪೊಲೀಸ್ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದರೂ, ಅವರ ಕಷ್ಟ ಮತ್ತು ವೇದನೆಗೆ ಸಾರ್ವಜನಿಕವಾಗಿ ಯಾವುದೇ ಗಮನ ಸಿಕ್ಕಿಲ್ಲ ಎಂದು ಅವರು ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಟುಂಬಸ್ಥರು, ಪೊಲೀಸರ ಮೇಲಿನ ದಾಳಿಯ ವೀಡಿಯೊ ತುಣುಕುಗಳನ್ನು ಪ್ರದರ್ಶಿಸಿದರು. ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಸಮಾಜಘಾತುಕ ಶಕ್ತಿಗಳು ನುಸುಳಿ ಈ ಹಿಂಸಾಚಾರವನ್ನು ನಡೆಸಿವೆ ಎಂದು ಆರೋಪಿಸಿದರು. ಇಂದಿಗೂ ಹಲವು ಅಧಿಕಾರಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಾಯಗೊಂಡ ಪೊಲೀಸರಿಗೂ ಸೂಕ್ತ ನ್ಯಾಯ ಸಿಗಬೇಕು ಎಂದು ಅವರೆಲ್ಲಾ ಒತ್ತಾಯಿಸಿದರು.
ಖಳನಾಯಕರ ರೀತಿ ಬಿಂಬಿಸುವುದನ್ನು ತಕ್ಷಣವೇ ನಿಲ್ಲಿಸಿ!...
ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಅತಿಯಾದ ಬಲಪ್ರಯೋಗ ಮಾಡಿದ್ದಾರೆ ಎಂಬ ಆರೋಪಿಸಿದ ಕುಟುಂಬಸ್ಥರು, ಸಾರ್ವಜನಿಕರು ದೆಹಲಿ ಪೊಲೀಸ್ ಸಿಬ್ಬಂದಿಯನ್ನು ಖಳನಾಯಕರ ರೀತಿ ಬಿಂಬಿಸುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಮನವಿ ಮಾಡಿದರು. ಪ್ರತಿಭಟನೆಯ ವೇಳೆ ಗಾಯಗೊಂಡ ದೆಹಲಿ ಪೊಲೀಸರ ಸಬ್ ಇನ್ಸ್‌ಪೆಕ್ಟರ್ ಪುತ್ರಿ (ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ) ಮಾತನಾಡಿ, ಜಂತರ್ ಮಂತರ್‌ನ ಮುಖ್ಯ ಪ್ರತಿಭಟನಾ ಸ್ಥಳದ ಮುಂಚೂಣಿಯಲ್ಲಿ ಬ್ಯಾರಿಕೇಡ್‌ಗಳ ಬಳಿ ಕರ್ತವ್ಯದಲ್ಲಿದ್ದ ತಮ್ಮ ತಂದೆಯ ಮೇಲೆ ಗೂಂಡಾ ಗುಂಪೊಂದು ಎಳೆದಾಡಿ ಮಾರಣಾಂತಿಕ ದಾಳಿ ನಡೆಸಿತು ಎಂದು ವಿವರಿಸಿದರು.
ನಾಲ್ಕು ಗಂಟೆಗಳ ಕಾಲ ಆರ್‌ಎಂಎಲ್ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ರಾತ್ರಿ ಸಹೋದ್ಯೋಗಿಗಳು ಮನೆಗೆ ಕರೆತಂದಾಗ, ಅವರ ಯೂನಿಫಾರ್ಮ್ ಸಂಪೂರ್ಣವಾಗಿ ರಕ್ತದಿಂದ ತೊಯ್ದುಹೋಗಿತ್ತು. ತಮ್ಮ ತಂದೆ ಹಿಂದೆ ಮರೈನ್ ಕಮಾಂಡೋ ಆಗಿ ಸೇವೆ ಸಲ್ಲಿಸಿದವರಾಗಿದ್ದು, ಇಷ್ಟೆಲ್ಲಾ ದೌರ್ಜನ್ಯ ಅನುಭವಿಸಿದ ಮೇಲೆಯೂ ವಿದ್ಯಾರ್ಥಿಗಳ ವಿರುದ್ಧವಾಗಿ ಮಾತನಾಡದೆ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ತಂದೆಯನ್ನೇ ಅಪರಾಧಿಯಂತೆ ಬಿಂಬಿಸಲಾಗುತ್ತಿದ್ದು, ದಾಳಿ ಮಾಡಿದವರೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದನ್ನು ಪ್ರಶ್ನಿಸಿ ತಮಗೂ ಸಮಾನ ನ್ಯಾಯ ಸಿಗಬೇಕು ಎಂದು ಅವರು ಒತ್ತಾಯಿಸಿದರು.
ದೇಶದ ಆಂತರಿಕ ಭದ್ರತೆ ಕಾಯುವವರ ಬಗ್ಗೆಯೂ ಚರ್ಚೆಯಾಗಲಿ!
ಇದೇ ವೇಳೆ 33 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಪತ್ನಿ ಸೀಮಾ ಮಾತನಾಡಿ, ಸಂಸತ್ತಿನತ್ತ ಮೆರವಣಿಗೆ ಮಾಡಲು ಯತ್ನಿಸಿದ ಪ್ರತಿಭಟನಾಕಾರರು ಮತ್ತು ಅವರೊಂದಿಗೆ ಸೇರಿಕೊಂಡ ಸಮಾಜಘಾತುಕ ಅಂಶಗಳು ಹೂವಿನ ಕುಂಡಗಳು, ಚಪ್ಪಲಿಗಳು ಹಾಗೂ ಕಲ್ಲುಗಳಿಂದ ಪೊಲೀಸರ ಮೇಲೆ ದಾಳಿ ನಡೆಸಿದರು ಎಂದು ಹೇಳಿದರು. ಕಲ್ಲಿನ ಹೊಡೆತಕ್ಕೆ ತಮ್ಮ ಪತಿಯ ಹೆಲ್ಮೆಟ್ ಸಂಪೂರ್ಣವಾಗಿ ಚೂರುಚೂರಾಗಿದ್ದು, ಪತಿ ಗಾಯಗೊಂಡು ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಸತ್ತಿನಲ್ಲಿ ದೇಶದ ಆಂತರಿಕ ಭದ್ರತೆ ಕಾಯುವ ಪೊಲೀಸರ ಮತ್ತು ಅವರ ಕುಟುಂಬಗಳ ಹಕ್ಕು ಹಾಗೂ ಕ್ಷೇಮಾಭಿವೃದ್ಧಿಯ ಕುರಿತೂ ಚರ್ಚೆಯಾಗಬೇಕು ಎಂದು ಇದೇ ವೇಳೆ ಆಗ್ರಹಿಸಿದ್ದಾರೆ.
ಮತ್ತೊಬ್ಬ ಎಎಸ್‌ಐ ಅವರ ಪುತ್ರ ಲಕ್ಷ್ಯ ಸಿಂಗ್ ಮೇಷ್ಟ್ ಮಾತನಾಡಿ, ತಮ್ಮ ಅಜ್ಜ ಬಿಎಸ್‌ಎಫ್‌ನಲ್ಲಿ 1971 ರ ಯುದ್ಧದಲ್ಲಿ ಹೋರಾಡಿದ್ದರು ಎಂದು ನೆನಪಿಸಿಕೊಂಡರು. ಹಿರಿಯ ಅಧಿಕಾರಿಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಯತ್ನಿಸುತ್ತಿದ್ದಾಗ ತಮ್ಮ ತಂದೆಯ ತಲೆಗೆ ಕಲ್ಲು ಬಿದ್ದು ನಾಲ್ಕು ಹೊಲಿಗೆಗಳು ಬಿದ್ದಿವೆ ಎಂದು ವಿವರಿಸಿದರು. ಪೊಲೀಸರ ಧ್ವನಿಯನ್ನು ಪ್ರತಿನಿಧಿಸಲು ತಾವೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದಾಗಿ ತಿಳಿಸಿದ ಅವರು, ವಿದ್ಯಾರ್ಥಿಯಾದ ತನಗೆ, ತಮ್ಮ ತಂದೆ ಎಂದಿಗೂ ವಿದ್ಯಾರ್ಥಿಗಳಿಗೆ ಹಾನಿ ಮಾಡುವುದಿಲ್ಲ ಎಂಬ ನಂಬಿಕೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮತ್ತೊಂದೆಡೆ, ಸಿಜೆಪಿ ನೇತೃತ್ವದ ಪ್ರತಿಭಟನೆಯಲ್ಲಿ ಭಾಗವಹಿಸಿದ ಸಾಮಾನ್ಯ ವಿದ್ಯಾರ್ಥಿಗಳು ಅಥವಾ ವ್ಯಕ್ತಿಗಳ ವಿರುದ್ಧ ಯಾವುದೇ ಕಾನೂನುಬಾಹಿರ ಕ್ರಮ ಕೈಗೊಳ್ಳುವುದಿಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆದರೆ ಅಪರಾಧ ಹಿನ್ನೆಲೆ ಹೊಂದಿರುವ ಸಮಾಜಘಾತುಕ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಅನಿವಾರ್ಯ ಎಂದು ತಿಳಿಸಿದೆ. ದೆಹಲಿ ಸರ್ಕಾರದ ಗೃಹ ಇಲಾಖೆಯ ಆದೇಶದಂತೆ, ಈಗಾಗಲೇ ಬಂಧಿಸಲಾದವರ ಪ್ರಕರಣಗಳನ್ನು ಪರಿಶೀಲಿಸಿ ಶೀಘ್ರವಾಗಿ ಬಿಡುಗಡೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ(ಏಜೆನ್ಸೀಸ್).