ಸರ್ಕಾರಿ ನೌಕರನಾದ ಮಗನ್ನು ಆನೆ ಮೇಲೆ ಕೂರಿಸಿ ಮೆರವಣಿಗೆ ಮಾಡಿದ ತಂದೆ
- 10 ವರ್ಷಗಳ ಸತತ ಪರಿಶ್ರಮದ ಬಳಿಕ ಸರ್ಕಾರಿ ಉದ್ಯೋಗ
- ಗ್ರಾಮ ಪಂಚಾಯತ್ ಅಧಿಕಾರಿಯಾದ ಮಗನಿಗೆ ತಂದೆಯ ವಿಭಿನ್ನ ಸ್ವಾಗತ
- ಆನೆ ಮೇಲೆ ಕೂರಿಸಿ ಬ್ಯಾಂಡ್-ಬಾಜಾ, ನಗಾರಿಗಳೊಂದಿಗೆ ಮೆರವಣಿಗೆ
ಉತ್ತರ ಪ್ರದೇಶ: ಸರ್ಕಾರಿ ಕೆಲಸ ಸಿಗಬೇಕು ಅನ್ನೋದು ಬಹಳ ಜನರ ಕನಸಾಗಿರುತ್ತೆ. ಅದಕ್ಕಾಗಿ ವರ್ಷಗಟ್ಟಲೆ ಓದಿ, ಒಂದಾದ ಮೇಲೆ ಒಂದರಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಪಾಸಾದರೆ ಯಶಸ್ಸು ಸಕ್ಕಂತೆ. ಆದರೆ ಇಂಥ ಗೆಲುವಿನ ಕ್ಷಣವನ್ನು ತಂದೆಯೊಬ್ಬರು ಇಡೀ ಊರಿಗೆ ನೆನಪಿನಲ್ಲಿ ಉಳಿಯುವಂತೆ ಆಚರಿಸಿದ್ದಾರೆ.
ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಹರ್ರೈಯಾ ಪೊಲೀಸ್ ಠಾಣಾ ವ್ಯಾಪ್ತಿಯ ಕೇಶವಪುರ ಗ್ರಾಮದಲ್ಲಿ ಇಂಥದ್ದೊಂದು ವಿಶೇಷ ಘಟನೆ ನಡೆದಿದೆ. ಗ್ರಾಮದ ನಿವಾಸಿ ಅವನೀಶ್ ಪಾಂಡೆ ಬರೋಬ್ಬರಿ 10 ವರ್ಷಗಳ ಕಾಲ ಸರ್ಕಾರಿ ಉದ್ಯೋಗಕ್ಕಾಗಿ ಸತತ ಪರಿಶ್ರಮ ಪಟ್ಟಿದ್ದರು. ಸಾಲು-ಸಾಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದ ಕೊನೆಗೂ ಗ್ರಾಮ ಪಂಚಾಯತ್ ಅಧಿಕಾರಿ (Gram Panchayat Officer) ಹುದ್ದೆಗೆ ಆಯ್ಕೆಯಾಗಿದ್ದಾರೆ.
ಆನೆ ಮೇಲೆ ಕೂರಿಸಿ ಮಗನ ಮೆರವಣಿಗೆ
ಮಗನ ಈ ಸಾಧನೆಯಿಂದ ತಂದೆ ಮಹೇಂದ್ರ ಕುಮಾರ್ ಪಾಂಡೆ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಪುತ್ರನ ಯಶಸ್ಸನ್ನು ಕುಟುಂಬಕ್ಕೆ ಸೀಮಿತವಾಗದೇ ಇಡೀ ಗ್ರಾಮ ಸಂಭ್ರಮಿಸುವಂತೆ ಮಾಡಿದ್ದಾರೆ. ಅದರಂತೆ, ಅವನೀಶ್ ಗ್ರಾಮಕ್ಕೆ ಬಂದ ಕೂಡಲೇ ಬ್ಯಾಂಡ್-ಬಾಜಾ, ಢೋಲು-ನಗಾರಿಗಳೊಂದಿಗೆ ಅದ್ಧೂರಿ ಸ್ವಾಗತ ಏರ್ಪಡಿಸಲಾಗಿತ್ತು. ಮಗನನ್ನು ಆನೆಯ ಮೇಲೆ ಕೂರಿಸಿ ಸಂಸಾರೀಪುರ ಚೌರಸ್ತೆಯಿಂದ ಕೇಶವಪುರ ಗ್ರಾಮದವರೆಗೆ ಭರ್ಜರಿ ಮೆರವಣಿಗೆ ಮಾಡಿದ್ದಾರೆ.
ಮಗನ ಯಶಸ್ಸಿಗಿಂತ ತಂದೆಗೆ ದೊಡ್ಡ ಹೆಮ್ಮೆ ಯಾವುದು?
ಈ ವೇಳೆ ಗ್ರಾಮಸ್ಥರು ಕೂಡ ಮೆರವಣಿಗೆಯಲ್ಲಿ ಭಾಗಿಯಾಗಿ, ಅವನೀಶ್ ಸಾಧನೆಯನ್ನು ಸಂಭ್ರಮಿಸಿದ್ದಾರೆ. ಮಗನ 10 ವರ್ಷಗಳ ಕಠಿಣ ಪರಿಶ್ರಮಕ್ಕೆ ತಂದೆ ನೀಡಿದ ಈ ವಿಭಿನ್ನ ಗೌರವದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ‘ಮಗನ ಯಶಸ್ಸಿಗಿಂತ ತಂದೆಗೆ ದೊಡ್ಡ ಹೆಮ್ಮೆ ಯಾವುದಿದೆ? ಎಂಬ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ,(ಏಜೆನ್ಸೀಸ್).