ಘಟನೆಯ ಸ್ಥಳ 
ದೇಶ

ಭೀಕರ ರಸ್ತೆ ಅಪಘಾತ: ಕಾರಿಗೆ ಟ್ರಕ್ ಡಿಕ್ಕಿ; ಸ್ಥಳದಲ್ಲೇ 7 ಮಂದಿ ಸಾವು; ಮೂವರಿಗೆ ಗಾಯ | Accident

ಅಹ್ಮದಾಬಾದ್: ಗುಜರಾತ್ ರಾಜ್ಯದ ಬನಸ್ಕಂತ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಏಳು ಮಂದಿ ಮೃತಪಟ್ಟರೆ, ಮೂವರು ಗಂಭೀರ ಗಾಯಗೊಂಡಿದ್ದಾರೆ ಎಂದು ಭಾನುವಾರ(ಜ. 25) ವರದಿಯಾಗಿದೆ.
ಅಮೀರ್‌ಗಢ ತಾಲೂಕಿನ ಇಕ್ಬಾಲ್‌ಗಢ ಬಳಿಯ ಪಾಲನ್‌ಪುರ-ಅಬು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಟ್ರಕ್​ವೊಂದು ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರು ಪಲ್ಟಿಯಾಗಿದೆ. ಕಾರಿನಲ್ಲಿ ಒಂಬತ್ತು ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಅಪಘಾತದ ಮಾಹಿತಿ ತಿಳಿದ ಬಳಿಕ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರಿನಲ್ಲಿದ್ದ 9 ಮಂದಿ ಪೈಕಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಾಳುಗಳನ್ನು ಪಾಲನ್ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಮಾತನಾಡಿರುವ ಜಿಲ್ಲಾ ಎಸ್ಪಿ ಪ್ರಶಾಂತ್ ಸುಂಬೆ, ಅಪಘಾತದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಚಾಲಕನ ಅಜಾಗರೂಕ ಚಾಲನೆ ಮತ್ತು ತಪ್ಪು ಕಡೆಯಿಂದ ಬಂದ ವಾಹನದಿಂದಾಗಿ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಟ್ರಕ್ ಚಾಲಕ ಪರಾರಿಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).