ಘಟನೆಯ ಸ್ಥಳ 
ದೇಶ

ಭೀಕರ ರಸ್ತೆ ಅಪಘಾತ: ಪರಸ್ಪರ ಡಿಕ್ಕಿ ಹೊಡೆದ ಬಸ್​ ಸೇರಿ ಮೂರು ವಾಹನಗಳು: ಆರು ಮಂದಿ ಸಾವು | Accident

ಮುಂಬೈ: ಮಹಾರಾಷ್ಟ್ರದ ಜಲಗಾಂವ್ ಪ್ರದೇಶದ ಅಮಲ್ನೇರ್-ಧುಲೆ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ(Accident) ಸಂಭವಿಸಿದ್ದು, ಬಸ್ ಸೇರಿ ಮೂರು ವಾಹನಗಳು ಪರಸ್ಪರ ಡಿಕ್ಕಿಯಾಗಿದ್ದು, ಆರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮಂಗ್ರುಲ್ ಗ್ರಾಮದ ಬಳಿ ಮಂಗಳವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಗುಜರಾತ್​ನಿಂದ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ. ಬಳಿಕ ಮಹಾರಾಷ್ಟ್ರ ಸಾರಿಗೆ ಇಲಾಖೆಯ ಬಸ್ ಎರಡು ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಬೈಕ್ ಸಂಪೂರ್ಣವಾಗಿ ಬಸ್ಸಿನ ಕೆಳಗೆ ಬಿದ್ದು ನಜ್ಜುಗುಜ್ಜಾಗಿದೆ. ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ನೀಲೇಶ್ ತವಾಡೆ ಮತ್ತು ಫಲ್ಗುಣಿ ಭೋಯ್ ಎಂದು ಗುರುತಿಸಲಾಗಿದೆ. ಇನ್ನೂ ಕಾರ್​ನಲ್ಲಿದ್ದ ನಂದಲಾಲ್ ಮಹಾಜನ್, ಅನಿತಾ ಮಹಾಜನ್, ಸುರೇಶ್ ಮಹಾಜನ್ ಮತ್ತು ನಿರ್ಮಲಾ ಎಂಬ ನಾಲ್ವರು ಸಹ ಅಸುನೀಗಿದ್ದಾರೆ.
ಅಪಘಾತದ ಬಗ್ಗೆ ಮಾಹಿತಿ ಪಡೆದ ಬಳಿಕ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ವೇಳೆ ನಜ್ಜುಗುಜ್ಜಾದ ಕಾರಿನಿಂದ ಒಂದು ಮಗುವನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಿಸಿದ್ದಾರೆ. ಇನ್ನೂ ಕಾರು ಚಾಲಕ ಆದಿತ್ಯ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲಾ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ತನಿಖೆ ನಡೆಸುತ್ತಿದ್ದಾರೆ (ಏಜೆನ್ಸೀಸ್).