ಹರಿಯಾಣಾದ ರೈತರ ಮನೆಯ ಆತಿಥ್ಯ ಪಡೆದ ಡೆನ್ಮಾರ್ಕ್ ಮಹಿಳೆ ಮೈಕೆ ಹಿಜ್‌ಮಾನ್
- ಭಾರತೀಯ ಸಂಸ್ಕೃತಿಯಲ್ಲಿ ಅತಿಥಿ ದೇವೋ ಭವ ಎಂಬುದು ಕೇವಲ ಮಾತಲ್ಲ, ಅದು ನಮ್ಮ ರಕ್ತದಲ್ಲಿರುವ ಗುಣ
- ಡೆನ್ಮಾರ್ಕ ನಿಂದ ಭಾರತಕ್ಕೆ ಬಂದಿದ್ದ ಮೈಕೆ ಹಿಜ್‌ಮಾನ್
- ಹೊಲದಲ್ಲಿ ಟೆಂಟ್ ಹಾಕಬಹುದೇ ಎಂದು ಕೇಳಿದ ಮೈಕೆ ಹಿಜ್‌ಮಾನ್
- ಟೆಂಟ್ ಬೇಡ ನಮ್ಮ ಮನೆಯಲ್ಲೇ ಇರಿ ಎಂದ ರೈತ ದಂಪತಿ
ಹರಿಯಾಣ: ಭಾರತೀಯ ಸಂಸ್ಕೃತಿಯಲ್ಲಿ ಅತಿಥಿ ದೇವೋ ಭವ (Atithi Devo Bhava) ಎಂಬುದು ಕೇವಲ ಮಾತಲ್ಲ, ಅದು ನಮ್ಮ ರಕ್ತದಲ್ಲಿರುವ ಗುಣ ಎಂಬುದಕ್ಕೆ ಇತ್ತೀಚೆಗೆ ಹರಿಯಾಣದಲ್ಲಿ ನಡೆದ ಘಟನೆಗೆ ಸಾಕ್ಷಿಯಾಗಿದೆ.
ತನ್ನ ಮೋಟಾರ್‌ಸೈಕಲ್‌ನಲ್ಲಿ ಏಕಾಂಗಿಯಾಗಿ ಭಾರತದಾದ್ಯಂತ ಪರ್ಯಟನೆ ಮಾಡುತ್ತಿರುವ ನೆದರ್ಲೆಂಡ್ಸ್‌ನ ಮೈಕೆ ಹಿಜ್‌ಮಾನ್ ಎಂಬ ಯುವತಿಗೆ ಸಿಕ್ಕ ಆತಿಥ್ಯ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಆಗಿದ್ದೇನು?
ಮೈಕೆ ಹಿಜ್‌ಮಾನ್ ತನ್ನ ಬುಲೆಟ್ ಸವಾರಿಯ ನಡುವೆ ಹರಿಯಾಣದ ಒಂದು ಹಳ್ಳಿಯ ಮೂಲಕ ಹಾದುಹೋಗುತ್ತಿದ್ದರು. ರಾತ್ರಿಯಾಗುತ್ತಾ ಬಂದಿದ್ದರಿಂದ, ಮಲಗಲು ಜಾಗ ಹುಡುಕುತ್ತಿದ್ದ ಅವರು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಕಂಡು ಹತ್ತಿರ ಹೋದರು. ನಿಮ್ಮ ಜಮೀನಿನಲ್ಲಿ ಒಂದು ರಾತ್ರಿ ಟೆಂಟ್ ಹಾಕಿಕೊಳ್ಳಲು ಅನುಮತಿ ನೀಡುತ್ತೀರಾ? ಎಂದು ಕೇಳಿದ್ದಾರೆ. ಆದರೆ ಆ ಗ್ರಾಮೀಣ ಮಹಿಳೆಗೆ ಇಂಗ್ಲಿಷ್ ಬಾರದ ಕಾರಣ, ಕೂಡಲೇ ತನ್ನ ಸೋದರಳಿಯನನ್ನು ಕರೆದು ಆ ಮಹಿಳೆಗೆ ಏನು ಬೇಕು ಎಂದು ತಿಳಿದುಕೊಂಡ ಮಹಿಳೆ ಮುಂದೆ ಮಾಡಿದ್ದು ಈಗ ನಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಟೆಂಟ್ ಬೇಡ, ನಮ್ಮ ಮನೆಗೆ ಬನ್ನಿ
ಹೊಲದಲ್ಲಿ ಒಬ್ಬಂಟಿಯಾಗಿ ಟೆಂಟ್ ಹಾಕಿಕೊಂಡು ಮಲಗಲು ಬಿಡದ ಆ ಮಹಿಳೆ, ನೀವು ನಮ್ಮ ಮನೆಗೆ ಬರಬೇಕು, ನಮ್ಮ ಜತೆಗೆ ನೀವು ಉಳಿದುಕೊಳ್ಳಿ ಎಂದು ಪ್ರೀತಿಯಿಂದ ಒತ್ತಾಯಿಸಿ ಮನೆಗೆ ಕರೆದೊಯ್ದಿದ್ದಾರೆ. ಮೈಕೆ ಹಿಜ್‌ಮಾನ್ ಹಂಚಿಕೊಂಡಿರುವ ವಿಡಿಯೋದಲ್ಲಿ, ಅವರು ಆ ಕುಟುಂಬದ ಸದಸ್ಯರೊಂದಿಗೆ ಕುಳಿತು ಹರಟೆ ಹೊಡೆಯುತ್ತಾ, ಚಹಾ ಕುಡಿಯುತ್ತಾ, ಹಳ್ಳಿಯ ಊಟ ಸವಿಯುತ್ತಿರುವ ಅದ್ಭುತ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಪುಷ್ಕರ್‌ಗೆ ತನ್ನ ಪ್ರಯಾಣ ಮುಂದುವರಿಸುವ ಮುನ್ನ, ಆಕೆ ಹರಿಯಾಣದ ಹಳ್ಳಿಗರ ಪ್ರೀತಿ ಮತ್ತು ವಿಶ್ವಾಸಕ್ಕೆ ಮಾರುಹೋಗಿದ್ದಾರೆ. ಆಕೆಯ ಮುಂದಿನ ಪ್ರಯಾಣಕ್ಕೆಂದು ಮಲಗಲು ಬೆಚ್ಚಗಿನ ಹಾಸಿಗೆಯನ್ನೂ ಸಹ ಆ ರೈತ ಕುಟುಂಬ ನೀಡಿದೆ.
ನೆಟ್ಟಿಗರ ಮೆಚ್ಚುಗೆಯ ಮಹಾಪೂರ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಭಾರತೀಯರ ಅತಿಥಿ ಸತ್ಕಾರದ ಬಗ್ಗೆ ಕೊಂಡಾಡುತ್ತಿದ್ದಾರೆ.
ಭಾರತದ ರೈತರು ಯಾರೂ ಹಸಿವಿನಿಂದ ಅಥವಾ ಬೀದಿಯಲ್ಲಿ ಮಲಗಲು ಬಿಡುವುದಿಲ್ಲ ಎಂದು ಒಬ್ಬರು ಹೇಳಿದರೆ, ಹರಿಯಾಣದ ಜನರು ಹೊರನೋಟಕ್ಕೆ ಗಡಸಾಗಿದ್ದರೂ ಅವರ ಹೃದಯ ಅಷ್ಟೇ ಮೃದುವಾಗಿರುತ್ತದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು ಭಾರತೀಯ ರೈತರು ಆರ್ಥಿಕವಾಗಿ ಶ್ರೀಮಂತರಲ್ಲದಿದ್ದರೂ ಹೃದಯ ಶ್ರೀಮಂತರಾಗಿರುತ್ತಾರೆ, ನೀವು ವಿದೇಶಿಯರು ಕಾಡು-ಮೇಡಿನಲ್ಲಿ ಟೆಂಟ್ ಹಾಕುವ ಅಗತ್ಯವಿಲ್ಲ. ಯಾವುದೇ ರೈತನ ಮನೆ ಬಾಗಿಲನ್ನು ತಟ್ಟಿದರೆ ನಿಮಗೆ ಮಲುಗಲು ಜಾಗ ಮತ್ತು ಹೊಟ್ಟೆತುಂಬಾ ಊಟ ದೊರೆಯುತ್ತದೆ ಎಂದು ತಿಳಿಸಿದ್ದಾರೆ,(ಏಜನ್ಸೀಸ್).