ಕಾರ್ ಪಾರ್ಕಿಂಗ್​ಗೆ ಗಲಾಟೆ! ಸಿಂಗಾಪುರ್​ನಿಂದ ದೀಪಾವಳಿ ಹಬಕ್ಕೆ ಬಂದಿದ್ದ ಐಟಿ ಸಿಇಒ ಗುಂಡೇಟಿಗೆ ಬಲಿ | Parking Dispute 
ದೇಶ

ಕಾರ್ ಪಾರ್ಕಿಂಗ್​ ಗಲಾಟೆ, ಹಳೇ ದ್ವೇಷ! ಸಿಂಗಾಪುರ್​ನಿಂದ ಮೊನ್ನೆಯಷ್ಟೇ ತವರಿಗೆ ಬಂದಿದ್ದ ಐಟಿ ಸಿಇಒ ಗುಂಡೇಟಿಗೆ ಬಲಿ | Parking Dispute

ಹರಿಯಾಣ: ಕಾರು ಪಾರ್ಕಿಂಗ್ ವಿಚಾರವಾಗಿ ಶುರುವಾದ ಸಣ್ಣ ಜಗಳ ತಾರಕಕ್ಕೇರಿದ ಬೆನ್ನಲ್ಲೇ ನೆರೆಮನೆಯ ವ್ಯಕ್ತಿಯೊಬ್ಬ ಆಗ ತಾನೇ ಸಿಂಗಾಪುರದಿಂದ ತವರಿಗೆ ದೀಪಾವಳಿ ಹಬ್ಬಕ್ಕೆಂದು ಬಂದಿದ್ದ ಮಾಜಿ ಐಟಿ ಸಿಇಒ ಮೇಲೆ ಗುಂಡಿನ ದಾಳಿ ನಡೆಸಿ ಕೊಂದ ಭೀಕರ ಘಟನೆ ಹರಿಯಾಣದ ಫರೀದಾಬಾದ್​ನಲ್ಲಿ ವರದಿಯಾಗಿದೆ.

ಕಿಡಿಗೇಡಿಯ ಗುಂಡೇಟಿಗೆ ಬಲಿಯಾದ ವ್ಯಕ್ತಿಯನ್ನು ಪರಂಜಿತ್ ಧನ್‌ಖಡ್ (Paramjit Dhankhar) ಎಂದು ಗುರುತಿಸಲಾಗಿದೆ. ಈತ 'ಟೆಕ್ ಮಹೀಂದ್ರಾ' ಸಂಸ್ಥೆಯ ಏಷ್ಯಾ-ಪೆಸಿಫಿಕ್ ವಿಭಾಗದ ಪ್ರಾದೇಶಿಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು ಹಾಗೂ ಪ್ರಸ್ತುತ ವಿಯೆಟ್ನಾಂ ಮೂಲದ ವಿಯೆಟ್ನಾಮೀಸ್ ಟೆಕ್ನಾಲಜಿ ಸಂಸ್ಥೆಯೊಂದರಲ್ಲಿ ಸಿಇಓ ಆಗಿ ಸಿಂಗಾಪೂರ್‌ನಲ್ಲಿ ನೆಲೆಸಿದ್ದು, ಇದೇ ನವೆಂಬರ್ 24ರಂದು ನಡೆಯಲಿದ್ದ ತಮ್ಮ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಎರಡು ದಿನಗಳ ಹಿಂದೆಯಷ್ಟೇ ತವರೂರಿಗೆ ಆಗಮಿಸಿದ್ದರು. ಆದರೆ, ಅಷ್ಟರಲ್ಲಿ ಈ ದುರಂತ ಸಂಭವಿಸಿದೆ.

ಅಷ್ಟಕ್ಕೂ ಆಗಿದ್ದೇನು?

ಪೋಲಿಸರ ಮಾಹಿತಿಯಂತೆ, ಸೆಕ್ಟರ್ 21ಸಿ ಪ್ರದೇಶದ ಬಹುಮಹಡಿಯ ಕಟ್ಟಡ ಸಂಖ್ಯೆ 641ರ ಮೊದಲ ಮಹಡಿಯಲ್ಲಿ ಪರಂಜಿತ್ ತಮ್ಮ ಪತ್ನಿ, ಮಗ ಶೌರ್ಯ ಮತ್ತು ಮಗಳೊಂದಿಗೆ ವಾಸವಿದ್ದರು. ಅದೇ ಕಟ್ಟಡದ ಮೂರನೇ ಮಹಡಿಯಲ್ಲಿ ಆರೋಪಿ ಮೋಹನ್ ಅಲಿಯಾಸ್​ ಮೋನು ಶರ್ಮಾ ವಾಸಿಸುತ್ತಿದ್ದ. ಶುಕ್ರವಾರ ರಾತ್ರಿ ಸುಮಾರು 8 ಗಂಟೆಗೆ ಪರಂಜಿತ್ ಜಿಮ್‌ನಿಂದ ಮನೆಗೆ ಮರಳಿದಾಗ, ತಮಗೆ ನಿಗದಿಪಡಿಸಿದ್ದ ಪಾರ್ಕಿಂಗ್ ಜಾಗದಲ್ಲಿ ಮೋನು ಶರ್ಮಾ ತನ್ನ ಕಾರನ್ನು ನಿಲ್ಲಿಸಿರುವುದು ಕಂಡುಬಂದಿದೆ.

ಈ ವೇಳೆ, ಕಾರನ್ನು ಬೇರೆಡೆ ನಿಲ್ಲಿಸುವಂತೆ ಪರಂಜಿತ್ ಹೇಳಿದ್ದಾರೆ. ಇದಕ್ಕೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ಆರಂಭವಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಮೋನು ಶರ್ಮಾ ತಕ್ಷಣವೇ ತನ್ನ ರಕ್ಷಣೆಗಾಗಿ ಇಟ್ಟುಕೊಂಡಿದ್ದ ಲೈಸೆನ್ಸ್ ಹೊಂದಿದ್ದ ಪಿಸ್ತೂಲ್‌ನಿಂದ ಪರಂಜಿತ್ ಮೇಲೆ ಸುಮಾರು 15ರಿಂದ 16 ಸುತ್ತು ಭೀಕರವಾಗಿ ಗುಂಡಿನ ದಾಳಿ ನಡೆಸಿದ್ದಾನೆ. ಅದರಲ್ಲಿ, 8ರಿಂದ 9 ಗುಂಡುಗಳು ಪರಂಜಿತ್ ಅವರ ಹೃದಯಕ್ಕೆ ಹೊಕ್ಕಿ, ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ತಿಳಿಸಲಾಗಿದೆ.

ಹಳೆಯ ದ್ವೇಷ, ಸಾಕು ನಾಯಿ ಗಲಾಟೆ

ದಾಳಿಯ ಬಳಿಕ ಆರೋಪಿ ಮೋನು ಶರ್ಮಾ ತನ್ನ ಕುಟುಂಬದೊಂದಿಗೆ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ಸುರಜ್‌ಕುಂಡ್ ಠಾಣೆಯ ಪೊಲೀಸರು, ಕ್ರೈಮ್ ಬ್ರಾಂಚ್ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಧಾವಿಸಿ ತನಿಖೆ ನಡೆಸಿದ್ದು, ಪಿಸ್ತೂಲ್​ ಅನ್ನು ವಶಪಡಿಸಿಕೊಂಡಿದ್ದಾರೆ. ತನಿಖೆಯ ವೇಳೆ ಎರಡೂ ಕುಟುಂಬಗಳ ನಡುವೆ ಕಳೆದ ಕೆಲ ದಿನಗಳಿಂದ ನಿರಂತರ ಘರ್ಷಣೆ ನಡೆಯುತ್ತಿತ್ತು ಎಂಬುದು ತಿಳಿದುಬಂದಿದೆ.

ಆರೋಪಿ ಮೋನು ಶರ್ಮಾ ತನ್ನ ಸಾಕು ನಾಯಿಯನ್ನು ಪ್ರತಿದಿನ ಪಾರ್ಕಿಂಗ್ ಪ್ರದೇಶಕ್ಕೆ ಕರೆತಂದು ಮಲ-ಮೂತ್ರ ವಿಸರ್ಜನೆ ಮಾಡಿಸುತ್ತಿದ್ದ. ಇದಕ್ಕೆ ಪರಂಜಿತ್ ಅವರ ಮಗ ಶೌರ್ಯ ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು. ಘಟನೆಗೆ 4ರಿಂದ 5 ದಿನಗಳ ಮುಂಚೆಯೂ ಈ ವಿಚಾರವಾಗಿ ಮಾತಿನ ಚಕಮಕಿ ನಡೆದಿತ್ತು ಮತ್ತು ಆರೋಪಿ ಶೌರ್ಯನಿಗೆ ನಿಂದಿಸಿದ್ದ ಎನ್ನಲಾಗಿದೆ.

ಪ್ರಕರಣ ಸಂಬಂಧ ಸುರಜ್‌ಕುಂಡ್ ಪೊಲೀಸ್ ಠಾಣಾಧಿಕಾರಿ ಪ್ರಹ್ಲಾದ್ ಕುಮಾರ್ ನೇತೃತ್ವದಲ್ಲಿ ಹಲವು ವಿಶೇಷ ಪಡೆಗಳನ್ನು ರಚಿಸಲಾಗಿದ್ದು, ಆರೋಪಿಯನ್ನು ಶೀಘ್ರವೇ ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. ಸಂತಸದಿಂದ ಜರುಗಬೇಕಿದ್ದ ಮದುವೆಯ ಮನೆಯಲ್ಲಿ ಈಗ ನೀರವ ಮೌನ ಮತ್ತು ಕಣ್ಣೀರು ಆವರಿಸಿರುವುದು ನಿಜಕ್ಕೂ ಘೋರ ದುರಂತ,(ಏಜೆನ್ಸೀಸ್).