Mohan Yadav | ಮಕ್ಕಳ ಮುಂದೆ ಸಿಎಂ ಮೋಹನ್ ಯಾದವ್ ವಿಚಿತ್ರ ವಿವರಣೆ
ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ (Mohan Yadav) ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಹಾಸ್ಯ ಹಾಗೂ ತೀಕ್ಷ್ಣ ಟೀಕೆಗಳಿಗೆ ಗುರಿಯಾಗಿದೆ. ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುವ ಸಂದರ್ಭದಲ್ಲಿ ಸಿಎಂ ಯಾದವ್ ಅವರು ಸೀಲಿಂಗ್ ಫ್ಯಾನ್ ಕುರಿತು ನೀಡಿದ ವಿಚಿತ್ರ ವಿವರಣೆ ಮತ್ತು ಹೇಳಿಕೆ ಈ ಎಲ್ಲ ಚರ್ಚೆಗಳಿಗೆ ಕಾರಣವಾಗಿದೆ.
ತರಗತಿ ಕೊಠಡಿಯಲ್ಲಿ ತಿರುಗುತ್ತಿರುವ ಸೀಲಿಂಗ್ ಫ್ಯಾನ್‌ನತ್ತ ಬೆರಳು ಮಾಡಿ ತೋರಿಸುವ ಸಿಎಂ ಮೋಹನ್ ಯಾದವ್, ಈ ಫ್ಯಾನ್ ನಿಮಗೆ ಗಾಳಿ ಕೊಡುತ್ತಿದೆಯೇ? ಎಂದು ಅಲ್ಲಿನ ಶಾಲಾ ಮಕ್ಕಳನ್ನು ಕೇಳುತ್ತಾರೆ. ಮುಖ್ಯಮಂತ್ರಿಗಳ ಈ ಅನಿರೀಕ್ಷಿತ ಪ್ರಶ್ನೆಯಿಂದ ಗೊಂದಲಕ್ಕೊಳಗಾದ ವಿದ್ಯಾರ್ಥಿಗಳು ಏನು ಉತ್ತರಿಸಬೇಕೆಂದು ತಿಳಿಯದೆ ಅವರ ಮುಖ ನೋಡುತ್ತಾರೆ. ಮಕ್ಕಳ ಈ ಗೊಂದಲವನ್ನು ಕಂಡ ಯಾದವ್ ತಾವೇ ಮುಂದುವರಿದು, ಈ ಫ್ಯಾನ್ ಗಾಳಿಯನ್ನು ನೀಡುತ್ತಿಲ್ಲ, ಇದು ಕೇವಲ ಗಾಳಿಯನ್ನು ಕಲಕುತ್ತಿದೆ ಎಂದು ತಾವೇ ವಿಚಿತ್ರ ಉತ್ತರ ನೀಡುತ್ತಾರೆ.
ಸಿಎಂ ಅವರ ಈ ವಿಜ್ಞಾನ ಪಾಠದ ವಿಡಿಯೋ ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಹರಿದಾಡುತ್ತಿದ್ದಂತೆ, ಸಾಲು ಸಾಲು ಟ್ರೋಲ್‌ಗಳು ಮತ್ತು ವ್ಯಂಗ್ಯದ ಕಮೆಂಟ್‌ಗಳು ಹರಿದುಬಂದಿವೆ. ವಿಡಿಯೋ ಹಂಚಿಕೊಂಡ ನೆಟ್ಟಿಗರೊಬ್ಬರು, ಫ್ಯಾನ್ ಗಾಳಿಯನ್ನು ಕಲಕುತ್ತಿರಲಿ, ಆದರೆ ಮುಖ್ಯಮಂತ್ರಿಗಳ ಮನಸ್ಸನ್ನು ಯಾರು ಕಲಕಿದ್ದಾರೆ..? ಎಂದು ಪ್ರಶ್ನಿಸಿ ಗೇಲಿ ಮಾಡಿದ್ದಾರೆ. ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಕೂಡ ಈ ವಿಡಿಯೋವನ್ನು ಉಲ್ಲೇಖಿಸಿ, ಇವರು ಬಿಜೆಪಿಯ ಐನ್‌ಸ್ಟೈನ್ ಇದ್ದಂತೆ ಎಂದು ವ್ಯಂಗ್ಯವಾಡಿದ್ದಾರೆ. ಮೂಲಭೂತ ಭೌತವಿಜ್ಞಾನದ ನಿಯಮವನ್ನು ವಿವರಿಸಲು ಹೋಗಿ ಸಿಎಂ ಹಾಸ್ಯಾಸ್ಪದ ಸನ್ನಿವೇಶ ಸೃಷ್ಟಿಸಿಕೊಂಡಿದ್ದಾರೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
ಸಾಮಾನ್ಯವಾಗಿ ಫ್ಯಾನ್ ಸುತ್ತಮುತ್ತಲಿನ ಗಾಳಿಯ ಪ್ರಸರಣವನ್ನು ಹೆಚ್ಚಿಸಿ ನಮಗೆ ತಂಪಿನ ಅನುಭವ ನೀಡುತ್ತದೆ, ಆದರೆ ಅದನ್ನು ಗಾಳಿಯನ್ನು ಕಲಕುವುದು ಎಂದು ವಿಚಿತ್ರವಾಗಿ ವ್ಯಾಖ್ಯಾನಿಸಿದ ಸಿಎಂ ನಡೆ ಈಗ ಭಾರಿ ಸದ್ದು ಮಾಡುತ್ತಿದೆ. ಬಿಸಿಬಿಸಿ ರಾಜಕೀಯ ಚರ್ಚೆಗಳ ನಡುವೆ ಸಿಎಂ ಅವರ ಈ ಫ್ಯಾನ್ ತತ್ವಜ್ಞಾನ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಟ್ರೋಲ್‌ಗಳಿಗೆ ಆಹಾರವಾಗಿದೆ