ಮಣಿಪುರದ ಖ್ಯಾತ ಗಾಯಕ ಹಾಗೂ ಗಿಟಾರ್ ವಾದಕ ಚೊಂಗ್ಥಮ್ ವಿಕ್ರಮ್ ಸಿಂಗ್ ಅವರ ಭಾವಚಿತ್ರ.
ನವದೆಹಲಿ: ತಮ್ಮ ಅಪಾರ್ಟ್ಮೆಂಟ್ ಎದುರಿಗೆ ಕುಡಿದು ಜೋರಾಗಿ ಕೂಗುತ್ತಾ, ಕಿರಿ-ಕಿರಿ ಉಂಟುಮಾಡುತ್ತಿದ್ದವರಿಗೆ ಗದರಿದ ಪರಿಣಾಮ, ಹಲ್ಲೆ ನಡೆದು 54 ವರ್ಷದ ಮಣಿಪುರ ಮೂಲಕ ಗಾಯಕ ವಿಕ್ರಮ್ ಸಿಂಗ್ (Vikram Singh) ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಮಾಹಿತಿ ಪ್ರಕಾರ, ಕೆಲ ಡೆಲಿವರಿ ಮತ್ತು ಡಾಭಾದಲ್ಲಿ ಕೆಲಸ ಮಾಡುವ ಹುಡುಗರು ವಿಕ್ರಮ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಮರಣಹೊಂದಿರುವುದಾಗಿ ತಿಳಿದು ಬಂದಿದೆ.
ಘಟನೆ ವಿವರ:
ಈ ಘಟನೆಯು ಸೋಮವಾರ (ಸೆ.7) ರಂದು ದೆಹಲಿಯ ಕಿಲ್ಕೋರಿ ವಿಲೇಜ್ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಮಾಹಿತಿ ಪ್ರಕಾರ, ಸಿ. ವಿಕ್ರಮ್ ಸಿಂಗ್ ಕೆಲ ವರ್ಷಗಳ ಹಿಂದೆ ಇಲ್ಲಿ ಅಪಾರ್ಟ್ಮೆಂಟ್ನ್ನು ಖರೀದಿಸಿದ್ದರು. ನಿನ್ನೆ ಇವರ ಅಪಾರ್ಟ್ಮೆಂಟ್ ಕೆಳಗೆ ಕೆಲ ಹುಡುಗರು ಸರಾಯಿ ಕುಡಿಯುತ್ತಾ, ಜೋರಾಗಿ ಹಾಡನ್ನು ಹಚ್ಚಿಕೊಂಡು ಕುಣಿಯುತ್ತಿದ್ದರು. ಇದರಿಂದ ಅಕ್ಕ-ಪಕ್ಕದಲ್ಲಿದ್ದ ಮನೆಯವರಿಗೆ ತೊಂದರೆಯುಂಟಾಗಿದೆ.
ಹೀಗಾಗಿ ವಿಕ್ರಮ್ ಸಿಂಗ್ ತಮ್ಮ ಅಪಾರ್ಟ್ಮೆಂಟ್ ಕೆಳಗೆ ಗದ್ದಲ ಮಾಡುತ್ತಿದ್ದ ಹುಡುಗರಿಗೆ ಬುದ್ಧಿಮಾತನ್ನು ಹೇಳಲು ಕೆಳಗೆ ಹೋಗಿ, ಇದು ಜನವಸತಿ ಪ್ರದೇಶ. ಇಲ್ಲಿ ಈ ರೀತಿ ಮಾಡುವುದು ಸರಿಯಲ್ಲ, ಇಲ್ಲಿಂದ ಹೊರಡಿ, ಇಲ್ಲದಿದ್ದರೆ ಪೊಲೀಸರಿಗೆ ಕರೆ ಮಾಡುತ್ತೇನೆಂದು ಗದರಿದ್ದಾರೆ.
ಇಷ್ಟಕ್ಕೆ ಕುಪಿತರಾದ ಪಾನಮತ್ತ ಹುಡುಗರು ವಿಕ್ರಮ್ ಸಿಂಗ್ ಮೇಲೆ ದಾಳಿ ನಡೆದಿದ್ದಾರೆ. ಮೇಲೆ ನವಯುವಕರು ನಡೆಸಿದ ಹಲ್ಲೆಯಿಂದ 54 ವರ್ಷದ ಸಿಂಗ್ ಕುಸಿದು ಬಿದ್ದಿದ್ದಾರೆ. ನಂತರ ಸ್ಥಳಕ್ಕೆ ದಾವಿಸಿದ ಸಿಂಗ್ ಪುತ್ರ ಯೈಫಾಬ ತಂದೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಿಂಗ್ ಮರಣಹೊಂದಿದ್ದಾರೆ.
ಪೊಲೀಸ್ ದೂರು; ಏಳು ಮಂದಿ ಅರೆಸ್ಟ್!
ವಿಕ್ರಮ್ ಸಿಂಗ್ ಸಾವನ್ನಪ್ಪುತ್ತಿದ್ದಂತೆ ಈಶಾನ್ಯ ಭಾರತ ವಿದ್ಯಾರ್ಥಿ ಪರಿಷತ್ ಪೊಲೀಸರಲ್ಲಿ ದೂರನ್ನು ದಾಖಲಿಸಿದೆ. ತಕ್ಷಣ ತನಿಖೆ ಕೈಗೆತ್ತುಕೊಂಡ ದೆಹಲಿ ಪೊಲೀಸರು ಈಗಾಗಲೇ ಏಳು ಜನರನ್ನು ವಶಕ್ಕೆ ಪಡೆದಿದ್ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಭರತ್ ಕುಮಾರ್ (19), ಪ್ರಮೋದ್ (26), ರಂಜಾನ್ ಖಾನ್ (22), ದೀಪಾಂಶು (21), ಮೋಹನ್ ವಿಶ್ವಕರ್ಮ (32), ವಿಜಯ್ (36), ಮನ್ನು (26), ಮತ್ತು ಒಬ್ಬ ಅಪ್ರಾಪ್ತ ಕೂಡ ಸೇರಿದ್ದಾರೆಂದು ತಿಳಿದು ಬಂದಿದೆ.
ನಮ್ಮ ನೆಲದ ಖ್ಯಾತ ಗಿಟಾರ್ ವಾದಕ ಹಾಗೂ ಗಾಯಕ ಸಿ. ವಿಕ್ರಮ್ ಸಿಂಗ್ ಅವರನ್ನು ಹೀಗೆ ಬೀದಿಯಲ್ಲಿ ಹೊಡೆದು ಕೊಂದಿದ್ದಾರೆ. ಇದು ಈಡೀ ಈಶಾನ್ಯ ಭಾರತಕ್ಕೆ ಮಾಡಿದ ಅವಮಾನವಾಗಿದ್ದು, ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಬೇಕೆಬನ್ನುವುದು ಸಂಘಟನೆಯ ವಾದವಾಗಿದೆ, (ಏಜನ್ಸೀಸ್).