ಮೃತರಾದ ಪತ್ನಿ ರವಿತಾ ಕುಶ್ವಾಹ ಮತ್ತು ಮಕ್ಕಳು
ಭೋಪಾಲ್: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಡಲಿಯಿಂದ ಭೀಕರವಾಗಿ ಕೊಲೆ ಮಾಡಿ, ಬಳಿಕ ತಾನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾನೆ ಎಂದು ಭಾನುವಾರ(ಜೂ. 28) ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಮೊರೆನಾ ಡಿಎಸ್ಪಿ ವಿಜಯ್ ಭಡೋರಿಯಾ, ಮಾತಾ ಬಸೈಯಾ ಪೊಲೀಸ್ ಠಾಣೆ ವ್ಯಾಪ್ತಿಯ ಕಿಶನ್‌ಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಮೃತರನ್ನು ಬಲರಾಮ್ ಕುಶ್ವಾಹ(35) ಮತ್ತು ಪತ್ನಿ ರವಿತಾ ಕುಶ್ವಾಹ(32) ಹಾಗೂ ಅವರ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳಿಂದ ದಂಪತಿಗಳ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಊರಿನ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ರವಿತಾ ಡ್ಯಾನ್ಸ್ ಮಾಡಿದ್ದರಿಂದ ಪತಿ ಬಲರಾಮ್ ತೀವ್ರವಾಗಿ ಕೋಪಗೊಂಡಿದ್ದರು ಎನ್ನಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಇದರಿಂದ ಬೇಸತ್ತಿದ್ದ ರವಿತಾ ತವರು ಮನೆಗೆ ಹೋಗಿದ್ದಳು. ಬಳಿಕ ಹಿರಿಯರು ಸಮಾಧಾನ ಮಾಡಿ ವಾಪಸ್ ಗಂಡನಿಗೆ ಮನಗೆ ಕಳುಹಿಸಿದ್ದರು.
ಶುಕ್ರವಾರ ರಾತ್ರಿ ಮತ್ತೆ ಬಲರಾಮ್ ಮತ್ತು ಪತ್ನಿ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಆತ ತನ್ನ ಹೆಂಡತಿ ಮತ್ತು ಇಬ್ಬರು ಅಪ್ರಾಪ್ತ ಪುತ್ರರನ್ನು ಕೊಡಲಿಯಿಂದ ಹೊಡೆದು ಬರ್ಬರವಾಗಿ ಕೊಲೆಗೈದಿದ್ದಾನೆ. ನಂತರ ಹತ್ತಿರದ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಶನಿವಾರ ಬೆಳಗ್ಗೆ ಮನೆಯಲ್ಲಿ ಮೂವರು ಶವಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದಿದ್ದಾರೆ (ಏಜೆನ್ಸೀಸ್).