ಅಲಹಾಬಾದ್ ಹೈಕೋರ್ಟ್ 
ದೇಶ

ಕುಟುಂಬ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ: ಇಬ್ಬರು ವಯಸ್ಕರ ಸಲಿಂಗ ಲಿವ್ ಇನ್ ಸಂಬಂಧ ಎತ್ತಿ ಹಿಡಿದ ಅಲಹಾಬಾದ್ ಹೈಕೋರ್ಟ್ | same-sex marriage

ಲಖನೌ: ಇಬ್ಬರು ವಯಸ್ಕ ಮಹಿಳೆಯರ ಸಲಿಂಗ ವಿವಾಹವನ್ನು(same-sex marriage) ಎತ್ತಿ ಹಿಡಿದಿರುವ ಅಲಹಾಬಾದ್ ಹೈಕೋರ್ಟ್​, ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ವಯಸ್ಕರಿಗೆ ತಮ್ಮ ಸಂಗಾತಿ ಆಯ್ಕೆ ಮಾಡಲು, ವೈಯಕ್ತಿಕ ಹಕ್ಕು ಚಲಾಯಿಸಲು ಹಾಗೂ ಒಪ್ಪಿಗೆಯ ಸಂಗಾತಿಯೊಂದಿಗೆ ಬದುಕುವ ಹಕ್ಕಿದೆ. ಮತ್ತು ಕುಟುಂಬವು ಅವರ ನಡುವೆ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.
ವಾರಣಾಸಿಯ ಇಬ್ಬರು ವಯಸ್ಕ ಮಹಿಳೆಯರು ಸಲಿಂಗಿ ಲಿವ್-ಇನ್ ಸಂಬಂಧದಲ್ಲಿದ್ದು, ತಮ್ಮ ಕುಟುಂಬಗಳು ಮತ್ತು ಸಂಬಂಧಿಕರಿಂದ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಡಾ. ಗೌತಮ್ ಚೌಧರಿ ಅವರಿದ್ದ ಪೀಠ, ಈ ಅಭಿಪ್ರಾಯಪಟ್ಟಿದೆ. ಮತ್ತು ಕುಟುಂಬದ ವಿರೋಧ, ಸಾಮಾಜಿಕ ಅಸಮ್ಮತಿ ಅಥವಾ ಸಾಂಪ್ರದಾಯಿಕ ನಂಬಿಕೆಗಳು ಅಂತಹ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಲು ಬಳಸಲಾಗುವುದಿಲ್ಲ ಎಂದು ತಿಳಿಸಿದೆ.

ತಾವು ವಯಸ್ಕರು ಮತ್ತು ಅವಿವಾಹಿತರು ಮತ್ತು ಸ್ವಇಚ್ಛೆಯಿಂದ ಒಟ್ಟಿಗೆ ವಾಸಿಸುತ್ತಿದ್ದೇವೆ ಎಂದು ಮಹಿಳೆಯರು ನ್ಯಾಯಾಲಯಕ್ಕೆ ತಿಳಿಸಿದ್ದು, ವಿಭಿನ್ನ ಧರ್ಮಗಳಿಗೆ ಸೇರಿದ್ದೇವೆ. ಆದರೆ ಕುಟುಂಬಸ್ಥರು ನಮ್ಮ ಶಾಂತಿಯುತ ಜೀವನಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮತ್ತು ತಮ್ಮ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.


ಇಬ್ಬರೂ ಮಹಿಳೆಯರೊಂದಿಗೆ ನ್ಯಾಯಾಧೀಶರು ಪ್ರತ್ಯೇಕವಾಗಿ ಮಾತನಾಡಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡರು. ತಾವು ವಯಸ್ಕರು ಮತ್ತು ತಮ್ಮ ನಿರ್ಧಾರದ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದೇವೆ ಎಂದು ತಿಳಿಸಿದ್ದು, ನಾವು ಒಟ್ಟಿಗೆ ವಾಸಿಸುತ್ತಿದ್ದೇವೆ ಮತ್ತು ಒಟ್ಟಿಗೆ ವಾಸಿಸುವುದನ್ನು ಮುಂದುವರಿಸಲು ಬಯಸುತ್ತೇವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಸರ್ಕಾರದ ಪರ ವಕೀಲರು, ಸಾಂಪ್ರದಾಯಿಕ ಸಮಾಜದ ದೊಡ್ಡ ವರ್ಗವು ಸಲಿಂಗ ಸಂಬಂಧಗಳನ್ನು ಸ್ವೀಕರಿಸುವುದಿಲ್ಲ ಎಂದು ವಾದಿಸಿ ಅರ್ಜಿಯನ್ನು ವಿರೋಧಿಸಿದರು. ಆದರೆ ನ್ಯಾಯಾಲಯ, ಸಲಿಂಗ ವಿವಾಹದ ಕಾನೂನು ಮಾನ್ಯತೆಯ ಪ್ರಶ್ನೆಯು ಇಬ್ಬರು ವಯಸ್ಕರು ಒಪ್ಪಿಗೆಯಿಂದ ಒಟ್ಟಿಗೆ ವಾಸಿಸುವ ಹಕ್ಕಿನಿಂದ ಪ್ರತ್ಯೇಕವಾಗಿದೆ ಎಂದು ಹೇಳಿತು.
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲದಿರುವುದು ವಯಸ್ಕ ವ್ಯಕ್ತಿಗಳು ಆಯ್ಕೆಯ ಮೂಲಕ ಒಟ್ಟಿಗೆ ವಾಸಿಸುವ ಅಥವಾ ರಕ್ಷಣೆ ಪಡೆಯುವ ಹಕ್ಕಿನ ಮೇಲೆ ಪರಿಣಾಮ ಬೀರುವುದಿಲ್ಲ, ಇಬ್ಬರು ಮಹಿಳೆಯರು ಶಾಂತಿಯುತವಾಗಿ ಒಟ್ಟಿಗೆ ವಾಸಿಸಲು ಸ್ವತಂತ್ರರು ಮತ್ತು ಅವರ ಕುಟುಂಬಗಳು ಅಥವಾ ಬೇರೆ ಯಾವುದೇ ವ್ಯಕ್ತಿ ಅವರ ಸಂಬಂಧದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿತು. ಮತ್ತು ಮಹಿಳೆಯರಿಗೆ ಯಾವುದೇ ಬೆದರಿಕೆ ಅಥವಾ ಅಡಚಣೆ ಎದುರಾದರೆ ಅಗತ್ಯ ರಕ್ಷಣೆ ಒದಗಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ (ಏಜೆನ್ಸೀಸ್).