ಲಖನೌ: ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಪ್ರಯಾಗ್‌ರಾಜ್‌ನಲ್ಲಿ ಅಕ್ರಮವಾಗಿ ಆಕ್ರಮಿಸಿಕೊಂಡಿದ್ದ ಭೂಮಿಯಲ್ಲಿ ನಿರ್ಮಿಸಲಾದ ಮನೆಗಳಲ್ಲಿ ಈ ವರ್ಷ ವಿಭಿನ್ನ ದೀಪಾವಳಿ ಆಚರಣೆ ನಡೆಯಲಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಇಲ್ಲಿ ನಿರ್ಮಿಸಲಾಗಿರುವ 76 ಫ್ಲಾಟ್‌ಗಳ ನಿವಾಸಿಗಳು, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ (Modi Birthday) ಅಂಗವಾಗಿ ತಮ್ಮ ಮನೆಗಳನ್ನು ದೀಪಗಳಿಂದ ಬೆಳಗಿಸಲು ಸಿದ್ಧತೆ ನಡೆಸಿದ್ದಾರೆ.
ವಸತಿ ಯೋಜನೆಯಡಿ ಕಾಯಂ ಮನೆಗಳನ್ನು ಪಡೆದಿರುವ ಕುಟುಂಬಗಳು ತಮ್ಮ ಮನೆಗಳನ್ನು ಹಣತೆ ಮತ್ತು ದೀಪಗಳಿಂದ ಅಲಂಕರಿಸಿ ಈ ಸಂದರ್ಭವನ್ನು ವಿಭಿನ್ನವಾಗಿ ಆಚರಿಸಲು ಮುಂದಾಗಿವೆ. ಬಡ ಕುಟುಂಬಗಳಿಗೆ ಈಗ ಸ್ವಂತ ಸೂರು ಸಿಕ್ಕಿರುವುದು ಸಂತಸ ತಂದಿದೆ ಮತ್ತು ಪ್ರಧಾನಮಂತ್ರಿಯವರ ಜನ್ಮದಿನವನ್ನು ದೀಪಾವಳಿ ಮಾದರಿಯಲ್ಲಿ ಆಚರಿಸುವುದು ಒಳ್ಳೆಯ ವಿಷಯ ಎಂದು ಫಲಾನುಭವಿಗಳು ಸಂತಸ ಹಂಚಿಕೊಂಡಿದ್ದಾರೆ.
ಈ ಬೆಳವಣಿಗೆಯು ರಾಜಕೀಯ ಆಯಾಮವನ್ನೂ ಪಡೆದುಕೊಂಡಿದ್ದು, ಘಟನೆಯ ಮಹತ್ವ ಮತ್ತು ಭೂ ಒತ್ತುವರಿ ವಿರುದ್ಧ ಸರ್ಕಾರದ ಕ್ರಮಗಳ ಕುರಿತು ಬಿಜೆಪಿ ಮತ್ತು ಸಮಾಜವಾದಿ ಪಾರ್ಟಿ ನಡುವೆ ಆರೋಪ-ಪ್ರತ್ಯಾರೋಪಗಳ ಭರಾಟೆ ಜೋರಾಗಿದೆ.
ಹಂಚಿಕೆಯಲ್ಲಿ ತಾರತಮ್ಯವಿಲ್ಲ ಎಂದ ಬಿಜೆಪಿ ಶಾಸಕ!...
ಪ್ರಯಾಗ್‌ರಾಜ್ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಸಿದ್ಧಾರ್ಥ್ ನಾಥ್ ಸಿಂಗ್ ಈ ಕುರಿತು ಮಾತನಾಡಿ, ಅತೀಕ್ ಅಹ್ಮದ್ ಅಕ್ರಮವಾಗಿ ವಶಪಡಿಸಿಕೊಂಡಿದ್ದ ಜಾಗವನ್ನು ತೆರವುಗೊಳಿಸಿ, ಈಗ ಬಡವರ ವಸತಿಯನ್ನಾಗಿ ಪರಿವರ್ತಿಸಲಾಗಿದೆ. ಅತೀಕ್ ಜೀವಂತವಾಗಿದ್ದಾಗ ಜೈಲಿನಲ್ಲಿದ್ದ, ತದನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರವು ಆ ಜಾಗವನ್ನು ಮುಕ್ತಗೊಳಿಸಿ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂದು ತಿಳಿಸಿದರು.
ಈ ಫ್ಲಾಟ್‌ಗಳಲ್ಲಿ ವಾಸಿಸುತ್ತಿರುವ 76 ಫಲಾನುಭವಿಗಳಲ್ಲಿ ಮುಸ್ಲಿಮರೂ ಸಹ ಇದ್ದಾರೆ ಎನ್ನುವುದನ್ನು ಉಲ್ಲೇಖಿಸಿದ ಸಿಂಗ್, ಸರ್ಕಾರದ ಅಭಿವೃದ್ದಿ ಯೋಜನೆಗಳು ಧರ್ಮದ ಆಧಾರದ ಮೇಲೆ ಜಾರಿಯಾಗಿಲ್ಲ ಎಂಬುದಕ್ಕೆ ಇದು ತಾಜಾ ನಿದರ್ಶನವಾಗಿದೆ. ವಸತಿ ಯೋಜನೆಯು ಕೇವಲ ನೆರವು ಮಾತ್ರವಲ್ಲದೆ, ಬಡ ಕುಟುಂಬಗಳು ಸೂರಿಲ್ಲದೆ ಮಲಗುವ ಪರಿಸ್ಥಿತಿ ಬಾರದಂತೆ ಪರಿಹಾರ ನೀಡಿದೆ ಎಂದು ಶಾಸಕ ಸಿದ್ಧಾರ್ಥ್ ನಾಥ್ ಸಿಂಗ್ ತಿಳಿಸಿದ್ದಾರೆ.
ಅಲ್ಲಿನ 76 ಜನ ಫಲಾನುಭವಿಗಳು ಸಹ ತಮಗೆ ಕರೆ ಮಾಡಿ ಪ್ರತಿಯೊಂದು ಮನೆಯಲ್ಲೂ ದೀಪ ಬೆಳಗಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ ಸಿಂಗ್, ನಿವಾಸಿಗಳಿಗೆ ಸಿಹಿತಿಂಡಿಗಳೊಂದಿಗೆ ಹಣತೆಗಳನ್ನು ತಲುಪಿಸಲಾಗುತ್ತಿದೆ ಎಂದು ಹೇಳಿದರು. ಸಂಜೆ 7 ಗಂಟೆಗೆ 76 ಮನೆಗಳು ದೀಪಗಳಿಂದ ಬೆಳಗಲಿವೆ ಮತ್ತು ದೇವಸ್ಥಾನದ ಮುಂಭಾಗ ಬೆಳಕಿನ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ ಅಲ್ಲಿನ ನಿವಾಸಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಲಿದ್ದಾರೆ ಎಂದರು.
ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಎಂಬ ಘೋಷಣೆಯನ್ನು ಉಲ್ಲೇಖಿಸಿದ ಬಿಜೆಪಿ ಶಾಸಕ, ಮುಸ್ಲಿಮರಿಗೂ ಇದರ ಪ್ರಯೋಜನ ಸಿಕ್ಕಿರುವಾಗ ಇದನ್ನು ಕೋಮುವಾದಿ ಎಂದು ಹೇಗೆ ಕರೆಯಲು ಸಾಧ್ಯ ಎಂದು ಪ್ರಶ್ನಿಸಿದರು. ಜೊತೆಗೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಯೋಜನೆಯಿಂದ ಮುಸ್ಲಿಮರನ್ನು ಹೊರಗಿಡಲಾಗಿದೆಯೇ ಎಂದು ಪ್ರಶ್ನಿಸಿದ ಸಿಂಗ್, ಸರ್ಕಾರದ ಅಭಿವೃದ್ದಿ ಪರ ಚಿಂತನೆಗಳಿಗೆ ಹಿಂದೂ-ಮುಸ್ಲಿಂ ಎಂಬ ರಾಜಕೀಯ ಹಣೆಪಟ್ಟಿ ಕಟ್ಟಲು ಯಾವುದೇ ತರನಾದ ಆಧಾರವಿಲ್ಲ ಎಂದರು.
ಮಾಜಿ ಸಿಎಂ ಅಖಿಲೇಶ್ ಯಾದವ್ ವಿರುದ್ಧ ಹರಿಹಾಯ್ದ ಶಾಸಕ ಸಿಂಗ್, ಸಮಾಜವಾದಿ ಪಕ್ಷದ ಪಿಡಿಎ (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ಘೋಷಣೆಯೇ ಕೋಮುವಾದಿಯಾಗಿದ್ದು, ಅದು ಸಬ್ಕಾ ಸಾಥ್ ಬಗ್ಗೆ ಮಾತನಾಡುವುದಿಲ್ಲ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಆ ಪಕ್ಷದ ನಾಯಕರು ಟೋಪಿ ಮತ್ತು ಲೂಂಗಿ ಧರಿಸುವುದನ್ನು ಕಾಣಬಹುದು ಎಂದು ಲೇವಡಿ ಮಾಡಿದರು.
ಯೋಗಿ ಸರ್ಕಾರಕ್ಕೆ ಎಸ್ಪಿ ತಿರುಗೇಟು!..
ಸಮಾಜವಾದಿ ಪಾರ್ಟಿಯ ವಕ್ತಾರ ಮನೋಜ್ ಕಾಕಾ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಉತ್ತರ ಪ್ರದೇಶದಲ್ಲಿ ಕೋಮುವಾದಿ ನಡವಳಿಕೆಯನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಿದರು. ಭೂ ಮಾಫಿಯಾ ವಿರುದ್ಧದ ಕ್ರಮವನ್ನು ಸರ್ಕಾರ ನಿರ್ದಿಷ್ಟ ಪ್ರಕರಣಗಳಿಗೆ ಮಾತ್ರ ಮಿತಿಗೊಳಿಸಬಾರದು ಎಂದಿರುವ ಮನೋಜ್, ಲಖನೌ, ಜೌನ್‌ಪುರ ಮತ್ತು ಮಿರ್ಜಾಪುರ ಸೇರಿದಂತೆ ಉತ್ತರ ಪ್ರದೇಶದಾದ್ಯಂತ ಇರುವ ಪ್ರಮುಖ ಭೂ ಮಾಫಿಯಾಗಳ ವಿರುದ್ಧ ಕ್ರಮ ಕೈಗೊಂಡು, ವಶಪಡಿಸಿಕೊಂಡ ಭೂಮಿಯನ್ನು ಬಡವರಿಗೆ ಹಂಚಿಕೆ ಮಾಡುವಂತೆ ಸರ್ಕಾರಕ್ಕೆ ಸವಾಲು ಹಾಕಿದರು.
ಭೂ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ನಿಜವಾಗಿಯೂ ಈ ಸರ್ಕಾರಕಿದ್ದರೆ, ಲಖನೌದಲ್ಲಿ ಯಾರು ಹೆಚ್ಚು ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ ಎಂಬುದನ್ನು ನಮಗೆ ತಿಳಿಸಿ ಎಂದು ಸವಾಲ್ ಎಸೆದಿರುವ ಎಸ್ಪಿ ವಕ್ತಾರ, ಇಂತಹ ಇತರ ಪ್ರದೇಶಗಳ ಭೂಮಿಯನ್ನೂ ಜಪ್ತಿ ಮಾಡಿ ಬಡವರಿಗೆ ಹಂಚಿದರೆ ಸಮಾಜವಾದಿ ಪಾರ್ಟಿ ಆ ಕ್ರಮವನ್ನು ಖಂಡಿತವಾಗಿಯೂ ಶ್ಲಾಘಿಸುತ್ತದೆ ಎಂದರು.
ಮುಂದುವರೆದು ಮಾತನಡಿದ ಮನೋಜ್ ಕಾಕಾ, ಬಿಜೆಪಿ ಕೋಮುವಾದದ ಹೀರೋ ಆಗಬಹುದೇ ಹೊರತು ಸಮಾಜವಾದ, ಸಮಾನತೆ, ಕರುಣೆ, ಪ್ರೀತಿ ಅಥವಾ ಸಂವಿಧಾನದ ನಾಯಕನಾಗಲು ಸಾಧ್ಯವಿಲ್ಲ ಎಂದು ಕುಟುಕಿದರು(ಏಜೆನ್ಸೀಸ್).